ಯಾದಗಿರಿ | ಕುಡಿಯುವ ನೀರಿನ ಸಮಸ್ಯೆ : ಪಂಚಾಯತ್ ಮುಂದೆ ಪ್ರತಿಭಟನೆ

ಯಾದಗಿರಿ : ಯರಗೋಳ ವ್ಯಾಪ್ತಿಯ ಹತ್ತಿಕುಣಿ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಕುಡಿಯುವ ನೀರು ಪೂರೈಸುವ ಮೋಟರ್ ಸುಟ್ಟಿದ್ದು, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಪರಿಣಾಮ ಗ್ರಾಮಸ್ಥರು ಮಂಗಳವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗ್ರಾಮದ ಮುಖಂಡ ಚಂದ್ರಶೇಖರ ಪಾಟೀಲ ನೇತೃತ್ವದಲ್ಲಿ ಗ್ರಾಮಸ್ಥರು ಪಂಚಾಯತಿಗೆ ಆಗಮಿಸಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದು 2ಗಂಟೆಗಳ ಕಾಲ ಅಲ್ಲಿಯೇ ಠಿಕಾಣಿ ಹೂಡಿದರು.
ಕೊನೆಗೆ ಗ್ರಾಮಸ್ಥರ ಆಕ್ರೋಶ ಅರಿತ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿಂಗಣ್ಣ, ಪಂಚಾಯತಿಗೆ ಆಗಮಿಸಿ ಯಂತ್ರಗಳು ಸುಟ್ಟಿರುವ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಗ್ರಾಮಸ್ಥರು ಸಿಟ್ಟಿಗೆದ್ದು ಸರ್ಕಾರ ನಿಮಗೆ ನಮ್ಮ ತೆರಿಗೆ ಹಣದಲ್ಲಿ ವೇತನ ಕೊಡುತ್ತದೆ. 3 ದಿನಗಳಿಂದ ವಿದ್ಯುತ್ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಯಂತ್ರಗಳು ದುರಸ್ತಿ ಮಾಡಿಲ್ಲ. ಗ್ರಾಮದಲ್ಲಿ 10ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಗ್ರಾಮಕ್ಕೆ ಬೇರೆ ನಗರಗಳಿಂದ ಸಾವಿರಾರು ಜನರು ಮರಳಿದ್ದಾರೆ. ಹಳ್ಳದಲ್ಲಿ ಸಂಗ್ರಹವಿರುವ ಮಲಿನ ನೀರು ಅನಿವಾರ್ಯವಾಗಿ ತೆಗೆದುಕೊಂಡು ಬಂದು, ಉಪಯೋಗಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳು ಉದ್ಭವಿಸಿದರೇ ಅದಕ್ಕೆ ಯಾರೂ ಕಾರಣರು ಎಂದು ಪ್ರಶ್ನಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ಯಾವುದೇ ತೊಂದರೆ ಕಂಡು ಬಂದರೇ ಅನುದಾನದ ಕೊರತೆಯಿಲ್ಲ ಎಂದು ಶಾಸಕರು, ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೆ, ಇಲ್ಲಿ ನಿಮ್ಮ ನಿರ್ಲಕ್ಷ್ಯದಿಂದ ಸಾವಿರಾರು ಜನರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ನಂತರ ಅಧಿಕಾರಿ, ಸಿಬ್ಬಂದಿಗಳನ್ನು ಹಾಗೂ ಆಡಳಿತ ಮಂಡಳಿಯವರನ್ನು ಗ್ರಾಮದ ಪ್ರಮುಖ ಬೀದಿಗಳಿಗೆ ಕರೆದುಕೊಂಡು ಹೋಗಿ ಹದಗೆಟ್ಟಿರುವ ರಸ್ತೆಗಳು, ಚರಂಡಿಗಳು ಹಾಗೂ ಪೈಪ್‌ಲೈನ್ ದುರಸ್ತಿಗಳ ಸ್ಥಳಗಳನ್ನು ತೋರಿಸಿ, ಈ ಹಿಂದೆ ಕೈಗೊಂಡಿರುವ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಪೂರ್ಣಗೊಂಡಿಲ್ಲ. ಅದಕ್ಕೆ ಕಾರಣವೇನು ಎಂದು ಮನೆ-ಮನೆಗೆ ಎಲ್ಲಿ ನೀರು ಬರುತ್ತವೆ ತೋರಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿ, ನಿಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೈಗೊಳ್ಳುತ್ತೇವೆ. ಅಲ್ಲದೇ ನ್ಯಾಯಾಲಯಕ್ಕೆ ತಮ್ಮ ವೈಫಲ್ಯಗಳ ಪಟ್ಟಿಗಳೊಂದಿಗೆ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಕೊನೆಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಮಂಡಳಿಯವರು ಸಂಜೆಯೊಳಗೆ ಎಲ್ಲಾ ಯಂತ್ರಗಳನ್ನು ದುರಸ್ತಿಗೊಳಿಸಿ ಬುಧವಾರ ಬೆಳಿಗ್ಗೆ ಜನರಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ಸಾರ್ವಜನಿಕರು ಸಮಾಧಾನಗೊಂಡರು.