ಯಾದಗಿರಿ | ಮಳೆಗೆ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿ; ಅಧಿಕಾರಿಗಳ ಭೇಟಿ
ಯಾದಗಿರಿ : ಗುರುವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ರೈತರು ಬೆಳೆದ ಭತ್ತದ ಬೆಳೆ ಹಾನಿಯಾಗಿದ್ದು ರೈತರಿಗೆ ದೊಡ್ಡ ಮಟ್ಟದ ನಷ್ಟವುಂಟು ಮಾಡಿದೆ.
ಸುರಪುರ ತಾಲ್ಲೂಕಿನ ದೇವಾಪುರ ಗ್ರಾಮದ ಹೊರ ವಲಯದಲ್ಲಿನ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದ್ದು ಶುಕ್ರವಾರ ಬೆಳೆ ನಷ್ಟಕ್ಕೊಳಗಾದ ಜಮೀನುಗಳಿಗೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಥೇಂದ್ರನಾಥ ಸೂಗುರು ಹಾಗೂ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ ಹವಾಲ್ದಾರ್, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಂಟಿ ನಿರ್ದೇಶಕರು, ಈಗಾಗಲೇ ಹಿಂದೆ ಮಳೆಗೆ ಬೆಳೆ ನಷ್ಟವಾದ ಕುರಿತು ಗ್ರಾಮ ಲೆಕ್ಕಾಧಿಕಾರಿಗಳು ವರದಿ ಸಲ್ಲಿಸಿದ್ದು, ಈಗ ರೈತರಿಂದ ಮತ್ತೆ ಮಾಹಿತಿಯನ್ನು ಪಡೆದುಕೊಂಡು ಅದೇ ವರದಿ ಜೊತೆಗೆ ಈಗಿನ ಬೆಳೆ ಹಾನಿಯನ್ನು ಸೇರಿಸುವಂತೆ ತಿಳಿಸಿದರು.
ತಹಶೀಲ್ದಾರ್ ಹುಸೇನ್‌ಸಾಬ್ ಮಾತನಾಡಿ, ಹಿಂದೆ ಬೆಳೆ ಹಾನಿ ಸರ್ವೇ ಮಾಡಲಾಗಿದೆ ಅದರ ಜೊತೆಗೆ ಈಗಿನ ಬೆಳೆ ಹಾನಿಯನ್ನು ಸೇರಿಸಲು ರೈತರು ತಕರಾರು ಅರ್ಜಿ ನೀಡಿದಲ್ಲಿ ಹೊಸ ಲಿಸ್ಟ್ ತಯಾರಿಸಿ ನಿಮ್ಮ ಗ್ರಾಮ ಪಂಚಾಯತ್‌ಗಳಲ್ಲಿ ಬೆಳೆ ಹಾನಿಯಾದ ರೈತರ ಜಮೀನುಗಳ ವಿವಿರದ ಪಟ್ಟಿ ಅಂಟಿಸಲಾಗುವುದು ಎಂದು ತಿಳಿಸಿದರು.
ಕೃಷಿ ಇಲಾಖೆ ಎಡಿ, ಕಂದಾಯ ನಿರೀಕ್ಷಕ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಚೆನ್ನಪ್ಪಗೌಡ ಜಕ್ಕನಗೌಡ್ರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್, ಸಿದ್ದನಗೌಡ ಹಂದ್ರಾಳ ಉಪಸ್ಥಿತರಿದ್ದರು.