ಯಾದಗಿರಿ | ಮಹಾತ್ಮಗಾಂಧಿ ನರೇಗಾ ಯೋಜನೆ ಕೂಲಿ ದರ ಹೆಚ್ಚಳ : ಇಒ ಬಸವರಾಜ ಸಜ್ಜನ್

ಸುರಪುರ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅರಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಪ್ರದೇಶದ ಕೂಲಿಕಾರರ ದಿನದ ಕೂಲಿ ದರವನ್ನು 370 ರೂ.ಗಳಿಗೆ ಹೆಚ್ಚಳ ಮಾಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ಹೊಡಿಸಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಸಜ್ಜನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ದಿನದ ಕೂಲಿ ಹಣ 349 ರೂ.ಗಳನ್ನು ಪಾವತಿಸಲಾಗುತ್ತಿತ್ತು. ನರೇಗಾ ಕೂಲಿಕಾರ ಕೂಲಿ ದರ ಪರಿಷ್ಕರಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2025ರ ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳ ಹೊಸ ಆರ್ಥಿಕ ವರ್ಷದಿಂದ ಚಾರಿಗೆ ಬರುವಂತೆ 21ರೂ.ಗಳನ್ನು ಹೆಚ್ಚುವರಿಯಾಗಿ 349 ರೂ.ಗಳಿಗೆ ಸೇರಿಸಿ 370ರೂ. ದಿನದ ಕೂಲಿದರ ಪರಿಷ್ಕರಿಸಿ ನಿಗದಿಪಡಿಸಿದೆ ಎಂದು ಹೇಳಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಆರ್ಥಿಕ ವರ್ಷದಲ್ಲಿ ಏಪ್ರಿಲ್ ತಿಂಗಳಿಂದ ಮಾರ್ಚ್ ಅಂತ್ಯದ ವರೆಗೆ ನೂರು ದಿನಗಳ ಅಕುಶಲ ಕೂಲಿ ಕೆಲಸ ನೀಡಲಾಗುತ್ತದೆ. ಗ್ರಾಮೀಣ ಭಾಗದ ಒಂದು ಕುಟುಂಬ ವರ್ಷದಲ್ಲಿ ನೂರು ದಿನ ಕೆಲಸ ಮಾಡಿದರೆ 37 ಸಾವಿರ ರೂ.ಗಳ ಕೂಲಿ ಹಣ ಪಡೆದುಕೊಳ್ಳಬಹುದು. ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಗಂಡು-ಹೆಣ್ಣಿಗೂ 370 ರೂ.ಗಳ ಸಮಾನ ಕೂಲಿ ಪಾವತಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬೇಸಿಗೆ ಆರಂಭವಾಗಿ ಗ್ರಾಮೀಣ ರೈತರ ಕೃಷಿ ಚಟುವಟಿಕೆಗಳು ಭಾಗತ: ಪೂರ್ಣಗೊಂಡಿದ್ದು, ಕೃಷಿ ಕೂಲಿಕಾರರು ಕೆಲಸವಿಲ್ಲದೆ ಕುಟುಂಬದ ನಿರ್ವಹಣೆ ಮಾಡಲು ದೂರದ ನಗರಗಳಿಗೆ ಕೂಲಿ ಕೆಲಸಕ್ಕಾಗಿ ವಲಸೆ ಹೊಗದೆ, ನರೇಗಾ ಯೋಜನೆಯಡಿ ಒಂದು ಕುಟುಂಬ ನೂರು ದಿನ ಕೆಲಸ ಪಡೆದುಕೊಳ್ಳುವ ಅವಕಾಶವಿದೆ. ಹೀಗಾಗಲೇ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಕೂಲಿ ಬೇಡಿಕೆ ಕೇಂದ್ರ ಆರಂಭಿಸಿದೆ. ಕೂಲಿ ಕೆಲಸಕ್ಕಾಗಿ ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಕೂಲಿ ಬೇಡಿಕೆ ಸಲ್ಲಿಸಿ ಕೆಲಸ ಪಡೆದುಕೊಳ್ಳುವ ಮೂಲಕ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೂಲಿಕಾರರಲ್ಲಿ ಮನವಿ ಮಾಡಿದ್ದಾರೆ.