ಯಾದಗಿರಿ | ಬೋನ್ಹಾಳ ಗ್ರಾಮದ ದಲಿತರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ

ಸುರಪುರ : ತಾಲೂಕಿನ ಬೋನ್ಹಾಳ ಗ್ರಾಮದ ದಲಿತ ಸಮುದಾಯದ ಮಹಿಳೆ ಶಾಂತಾ ಪರಮಣ್ಣ ದೊಡ್ಮನಿ ಸೇರಿದಂತೆ ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಹಾಗೂ ಅವರನ್ನು ಬಂಧಿಸುವಂತೆ ಆಗ್ರಹಿಸಿ ಸಾಮೂಹಿಕ ದಲಿತ ಸಂಘಟನೆಗಳ ಒಕ್ಕೂಟ ದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ನಗರದ ಡಾ.ಬಿ.ಅಂಬೇಡ್ಕರ್ ವೃತ್ತ ದಿಂದ ಪ್ರಮುಖ ಬೀದಿಗಳ ಮೂಲಕ ಪೊಲೀಸ್ ಠಾಣೆ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಅನೇಕ ಮುಖಂಡರು ಮಾತನಾಡಿ, ಬೋನಾಳ ಗ್ರಾಮದಲ್ಲಿನ ದಲಿತ ಸಮುದಾಯ ಭೀಮಪ್ಪ ಸಾಬಪ್ಪ ದೊಡ್ಮನಿ ಈತಲು 1987 ರಲ್ಲಿ ಖರಿದಿಸಿ ಜಮೀನನ್ನು ಬಾಚಿಮಟ್ಟಿ ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಪ್ರಭಾವ ಬಳಸಿ ಉಪ ನೊಂದಣಾಧಿಕಾರಿಗಳ ಕಚೇರಿ ಮೂಲಕ ತಮ್ಮ ಹೆಸರಿಗೆ ಜಮೀನು ನೊಂದಣಿ ಮಾಡಿಕೊಂಡಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿದೆ, ಹೀಗಿದ್ದು ಡಿ.23ರ 2024 ರಂದು ತಮ್ಮ ಜಮೀನಿನಲ್ಲಿದ್ದ ಮಹಿಳೆ ಶಾಂತಾ ಪರಮಣ್ಣ ದೊಡ್ಮನಿ ಮತ್ತಿತರರ ಮೇಲೆ ಹಲ್ಲೆ ಮಾಡಿದ್ದಾರೆ, ಅಲ್ಲದೆ ಜಾತಿ ನಿಂದನೆ ಮಾಡಿದ್ದಾರೆ ಎಂದರು.
ಇದರ ಕುರಿತು ದೂರು ನೀಡಲು ಬಂದರೆ ದೂರು ಸ್ವೀಕರಿಸಿಲ್ಲ, ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ ನಂತರ ದೂರು ದಾಖಲಾಗಿದೆ. ಆದರೆ ಆರೋಪಿಗಳನ್ನು ಬಂಧಿಸಿಲ್ಲ, ಕೂಡಲೇ ದಲಿತರ ಮೇಲೆ ಹಲ್ಲೆ ಮಾಡಿದ ಎಲ್ಲ 6 ಜನರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಎ.9 ರಂದು ಸುರಪುರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಸುರಪುರ ಉಪ ವಿಭಾಗದ ಡಿವೈಎಸ್ಪಿ ಜಾವಿದ್ ಇನಾಂದಾರ್ ಆಗಮಿಸಿ ಪ್ರಕರಣದ ತನಿಖೆಯನ್ನು ಯಾದಗಿರಿ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ. ರಡು ದಿನಗಳಲ್ಲಿ ಕ್ರಮ ಕೈಗೊಳ್ಳಲು ತಿಳಿಸುವುದಾಗಿ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುರಪುರ ಠಾಣೆ ಪಿಐ ಆನಂದ ವಾಗಮೊಡೆ, ಮುಖಂಡರಾದ ಹಣಮಂತಪ್ಪ ಕಾಕರಗಲ್,ನಿಂಗಣ್ಣ ಎಮ್. ಗೋನಾಲ, ಹಣಮಂತ ಕಟ್ಟಿಮನಿ,ಸದಾಶಿವ ಬೊಮ್ಮನಹಳ್ಳಿ, ತಾಯಪ್ಪ ಕಟ್ಟಿಮನಿ, ನಾಗರಾಜ ಓಕಳಿ,ಮಾನಪ್ಪ ಶೆಳ್ಳಗಿ, ನಿಂಗಪ್ಪ ಕನ್ನೆಳ್ಳಿ, ಭೀಮಣ್ಣ ಅಡ್ಡೊಡಗಿ,ರಾಮಪ್ಪ ಕೋರೆ, ಮಲ್ಲಪ್ಪ ಕೋಟೆ, ಗೋಪಾಲ ಗೋಗಿಕೇರಾ, ಶಿವಣ್ಣ ನಾಗರಾಳ ಸೇರಿದಂತೆ ಸಂತ್ರಸ್ತ ಕುಟುಂಬಸ್ಥರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.