ಯಾದಗಿರಿ | ಜಿಲ್ಲೆಗೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಿ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ : ತಮ್ಮ ಕ್ಷೇತ್ರದ ಬಹುತೇಕ ಪ್ರಮುಖ ಮತ್ತು ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಥಳಿಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅಧಿವೇಶನದಲ್ಲಿ ಸಭಾಧ್ಯಕ್ಷರ ಮೂಲಕ ಸರ್ಕಾರದ ಗಮನ ಸೆಳೆದರು.
ಯಾದಗಿರಿ ಮತಕ್ಷೇತ್ರದ ವಡಗೇರಾ ವ್ಯಾಪ್ತಿಯ ಕಂದಳ್ಳಿ, ಅರ್ಜುಣಗಿ, ಬಾಡಿಯಾಳ್, ಕುಮ್ಮನೂರ ಸೇರಿದಂತೆಯೇ ವಿವಿಧ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಆ ಎಲ್ಲ ಹಳ್ಳಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ತೊಗರಿ ಬೆಳೆ ಹಾನಿಗಿಡಾಗಿದ್ದು, ಈ ನಿಟ್ಟಿನಲ್ಲಿ 368 ರೈತರು ಇನ್ಸೂರೇನ್ಸ್ ಮಾಡಿಸಿದ್ದು, ಸರ್ಕಾರ ಶೇ.2 ರಷ್ಟು ಕಟ್ಟಿದರೇ ಹಾನಿಯಿಂದ ಆದ ಪರಿಹಾರ ದೊರೆಯುತ್ತದೆ. ಕೂಡಲೇ ಹಣ ಪಾವತಿಸಬೇಕೆಂದು ಶಾಸಕರು ಆಗ್ರಹಿಸಿದರು.
ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಿಗೆ ದೈಹಿಕ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಇದರಿಂದ ಮಕ್ಕಳಿಗೆ ಪಠ್ಯದ ಜೊತೆ ಕ್ರೀಡೆಗಳಲ್ಲೂ ತಮ್ಮ ಸಾಧನೆ ತೊರಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಯಾದಗಿರಿ ಜಿಲ್ಲೆಯಾಗಿ 14 ವರ್ಷಗಳು ಕಳೆದರೂ ಇನ್ನೂ ಉನ್ನತ ವ್ಯಾಸಂಗದ ಕೊರ್ಸ್ಗಳು ಮತ್ತು ಕಾಲೇಜುಗಳು ಸ್ಥಾಪನೆ ಆಗಿಲ್ಲ, ಜಿಲ್ಲೆಗೆ ಇಂಜಿನಿಯರಿಂಗ್, ಆರ್ಯುವೇದ, ಹೋಮಿಯೋಪತಿಕ್ ಕಾಲೇಜುಗಳು ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಶಿಕ್ಷಣ ಪಡೆಯುವ ವ್ಯವಸ್ಥೆ ಮಾಡಬೇಕೆಂದು ಶಾಸಕ ತುನ್ನೂರು ಒತ್ತಾಯಿಸಿದರು.
ಬಹುದಿನಗಳ ಬೇಡಿಕೆಯಾದ ತಮ್ಮ ಮತಕ್ಷೇತ್ರದ ದೊರನಹಳ್ಳಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಈ ಹಿಂದೆಯೇ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದಾಗ ಅದು ವಿವಿದ ಕಾರಣಗಳಿಂದ ವಾಪಸ್ ಬಂದಿದೆ. ಆದರೇ ಈಗ ಅಲ್ಲಿ 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಪಟ್ಟಣ ಪಂಚಾಯತ್ ಆಗಲು ಎಲ್ಲ ಅರ್ಹತೆ ಹೊಂದಿದ್ದು, ಕೂಡಲೇ ಈ ಬೇಡಿಕೆ ಈಡೇರಿಸಬೇಕೆಂದು ಶಾಸಕ ಚೆನ್ನಾರಡ್ಡಿ ಒತ್ತಾಯಿಸಿದರು.