ಯಾದಗಿರಿ |ಕಸ್ತೂರಿ ಬಾ ಗಾಂಧಿ ಬಾಲಕಿಯರ ಶಾಲೆಗೆ ಮೂಲಭೂತ ಸೌಕರ್ಯ, ನೂತನ ಕಟ್ಟಡ ನಿರ್ಮಾಣಕ್ಕೆ ಆಗ್ರಹ

ವಡಗೇರಾ : ಪಟ್ಟಣದಲ್ಲಿರುವ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣ, ಮೂಲಭೂತ ಸೌಕರ್ಯ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಟ್ಟಣದಲ್ಲಿ ಮೂರು ವರ್ಷಗಳ ಹಿಂದೆ ಆರಂಭಿಸಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ಶಾಲೆಯು ಆರರಿಂದ ಹತ್ತನೇ ತರಗತಿಯವರೆಗೆ ಇದ್ದು ಇಲ್ಲಿ ಒಟ್ಟು 150 ಮಕ್ಕಳಿದ್ದು. ಇವರಿಗೆ ವಾಸವಿರಲು ನಾಲ್ಕು ಕೋಣೆಗಳಿದ್ದು, ಇಷ್ಟೊಂದು ಮಕ್ಕಳು ಅಲ್ಲಿ ವಾಸ ಮಾಡಲು ಅನಾನುಕೂಲವಾಗುತ್ತಿದೆ.
ಸ್ವಂತ ಕಟ್ಟಡವಿಲ್ಲದ ಕಾರಣ ಸರಕಾರಿ ಪ್ರೌಢಶಾಲಾ ಆವರಣದಲ್ಲಿರುವ ಸರ್ಕಾರಿ ಕಟ್ಟಡದಲ್ಲಿಯೇ ತಾತ್ಕಾಲಿಕವಾಗಿ ಈ ವಸತಿ ಶಾಲೆಯು ನಡೆದಿದೆ. ಒಂದೇ ಕಡೆ ಹೆಚ್ಚು ಮಕ್ಕಳು ವಾಸಿಸುತ್ತಿರುವ ಕಾರಣ ಮಕ್ಕಳಿಗೆ ಚರ್ಮರೋಗ ಅಲರ್ಜಿಯಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ಶಾಲೆಯು ವಿಶೇಷವಾಗಿ ತಂದೆ ತಾಯಿ ಇಲ್ಲದ ಮಕ್ಕಳು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅನಾಥ ಮಕ್ಕಳಿಗಾಗಿ ಸ್ಥಾಪಿಸಿದಂತ ಶಾಲೆ ಇದು ಈ ಶಾಲೆಗೆ ಸರಕಾರದಿಂದ ಸಾಕಷ್ಟು ಅನುದಾನವು ಕೂಡ ಬರುತ್ತದೆ.
ಅಧಿಕಾರಿಗಳ ನಿರ್ಲಕ್ಷದಿಂದ ಇಲ್ಲಿಯವರೆಗೆ ನೂತನ ಕಟ್ಟಡ ನಿರ್ಮಾಣ ಕಾರ್ಯ ಆಗದಿರುವುದು ದುರಾದೃಷ್ಟಕರ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸೂಕ್ತ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳ ಒದಗಿಸುವುದರ ಜೊತೆಗೆ ವಡಗೇರಾ ಪಟ್ಟಣದ ಸುತ್ತಮುತ್ತಲಿನಲ್ಲಿಯೆ ನೂತನ ಕಟ್ಟಡಕ್ಕೆ ನಿರ್ಮಾಣ ಜಮೀನು ಒದಗಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಹೋರಾಟ ಮಾಡುವುದಾಗಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ, ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕ, ಶರಣು ಜಡಿ ,ಸತೀಶ್ ಪೂಜಾರಿ ,ಹಳ್ಳೆಪ್ಪ, ಹಾಗೂ ಇನ್ನಿತರರು ಎಚ್ಚರಿಸಿದ್ದಾರೆ.