ರಾಜ್ಯದಲ್ಲಿ 25 ವರ್ಷಗಳ ಅವಧಿಯಲ್ಲಿ ನಡೆದ ಅಕ್ರಮಗಳು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಲಿ: ಹರಿಪ್ರಸಾದ್

Update: 2024-09-22 16:41 GMT

ಮಂಗಳೂರು: ರಾಜ್ಯದಲ್ಲಿ 25 ವರ್ಷಗಳ ಅವಧಿಯಲ್ಲಿ ಏನೇನು ಅಕ್ರಮಗಳಾಗಿವೆ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು. ಆಗ ಯಾವುದೇ ಪಕ್ಷದವರಿರಲಿ, ಎಲ್ಲವೂ ಹೊರಗೆ ಬರುತ್ತದೆ. ಯಾರ್ಯಾರು ಸತ್ಯ ಹರಿಶ್ಚಂದ್ರರು ಇದ್ದಾರೆ ಎಂಬುದು ಕೂಡಾ ಜನತೆಗೆ ಗೊತ್ತಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಡೆದಿದೆ ಎನ್ನಲಾದ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದ ತನಿಖೆಗೆ ನೇಮಿಸಿದ್ದ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಹಾಗೂ ದಾಖಲೆ ಕೋರಿದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಕ್ರಮದ ಬಗ್ಗೆ ನಗರದಲ್ಲಿ ರವಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯಪಾಲರು ಈಗ ಅರ್ಕಾವತಿ ವರದಿ ಕೇಳಿದ್ದಾರೆ. ಇದೊಂದು ರೋಗ ಆಗಿಬಿಟ್ಟಿದೆ. ಅಕ್ರಮವನ್ನು ಸಕ್ರಮ ಮಾಡು ವಂತಹ ಒಂದು ಪದಪುಂಜ ಬಂದುಬಿಟ್ಟಿದೆ. ಆದ್ದರಿಂದ ಇದಕ್ಕೆ ಕೇವಲ ಯಾರಾದರೂ ವಿಚಾರಣೆ ಮಾಡಿದರೆ ಸಾಕಾಗದು. ಸುಪ್ರೀಂ ಕೊರ್ಟ್ ನ್ಯಾಯಾಧೀಶರ ನೇತೃತ್ವದಲ್ಲೇ ತನಿಖೆ ನಡೆಯಲಿ ಎಂದು ಅಭಿಪ್ರಾಯಪಟ್ಟರು.

ಬೊಫೋರ್ಸ್ ಕೇಸನ್ನು 30 ವರ್ಷಗಳಿಂದ ಬಿಜೆಪಿಗರು ಹೇಳಿಕೊಂಡು ಬಂದರು. ಕೆಲವು ರಾಜ್ಯಗಳು ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ಅಕ್ರಮಗಳನ್ನು ಸಕ್ರಮ ಮಾಡಿಕೊಂಡು ಬಂದಿರುವುದು ಸ್ಪಷ್ಟವಾಗಿದೆ. ಯಾವುದೇ ಸರಕಾರ ಇರಲಿ, ಕೂಲಂಕಷ ತನಿಖೆಯಾಗಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡಿ ತನಿಖೆ ನಡೆಸುವುದು ಸೂಕ್ತವಾಗಿದೆ ಎಂದು ಹರಿಪ್ರಸಾದ್ ಹೇಳಿದರು.

ಕಳೆದ 70 ವರ್ಷದಲ್ಲಿ ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂದು ಬಿಜೆಪಿಗರು ಕೇಳುತ್ತಲೇ ಬಂದಿದ್ದಾರೆ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬುದು ಜನಸಾಮಾನ್ಯರಿಗೆ ಗೊತ್ತಿದೆ. ಕಳೆದ 10 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ ಎಂದು ಹೇಳಲು ಅವರಿಗೆ ಸಾಧ್ಯವಾಗಿಲ್ಲ. 70 ವರ್ಷಗಳಲ್ಲಿ ಕಾಂಗ್ರೆಸ್ ಸಂಪಾದಿಸಿರುವುದನ್ನು ಬಿಜೆಪಿಗರು ಮಾರಾಟ ಮಾಡುತ್ತಾ ಬರುತ್ತಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದರು.

ಮುನಿರತ್ನ ಬಂಧನ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಮುನಿರತ್ನ ಪ್ರಕರಣ ದ್ವೇಷ ರಾಜಕಾರಣ ಎಂಬುದು ಬದಿಗಿರಲಿ. ಇವೆಲ್ಲ ಸಾಂಕ್ರಾಮಿಕ ರೋಗದ ತರಹ ಬಂದಿರುವುದು ನರೇಂದ್ರ ಮೋದಿ ಅವರಿಂದ. ನರೇಂದ್ರ ಮೋದಿ ಗುಜರಾತ್‌ನಲ್ಲಿ ಸಂಜಯ್ ಜೋಷಿ ಎಂಬವರ ಸಿಡಿ ಮಾಡಿಸಿದ್ದರು. ಅಲ್ಲಿಂದ ಇದೊಂದು ಸಾಂಕ್ರಾಮಿಕ ರೋಗವಾಗಿ ಹರಡಿಕೊಂಡು ಬಂದಿದೆ. ಸಂಜಯ್ ಜೋಷಿ ಅವರನ್ನು ನರೇಂದ್ರ ಮೋದಿ ರಾಜಕೀಯವಾಗಿ ನಿವೃತ್ತಿ ಮಾಡಿಸಿಬಿಟ್ಟರು. ಈಗ ಆ ರೋಗ ಇಡೀ ದೇಶಕ್ಕೆ ಹರಡಿಕೊಂಡುಬಿಟ್ಟಿದೆ ಎಂದು ಹರಿಪ್ರಸಾದ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News