ಸತ್ಯ ಹೇಳುವ ಧೈರ್ಯವಿದ್ದರೆ ಮಾತ್ರ ಆತ್ಮಕಥೆ ಬರೆಯಬಹುದು: ಸುಬ್ರಾಯ ಚೊಕ್ಕಾಡಿ

Update: 2024-09-22 14:11 GMT

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆತ್ಮಕಥೆಗಳು ಪ್ರಕಟವಾಗುತ್ತಿವೆ. ಅದರಲ್ಲಿ ಎಷ್ಟು ಸತ್ಯ ಮತ್ತು ಮಿಥ್ಯ ಎಂಬುದು ಬರೆದವರಿಗೆ ಮಾತ್ರ ಗೊತ್ತಿರಬಹುದು. ಆತ್ಮಕಥೆ ಬರೆಯುವುದು ಕೂಡ ಅಷ್ಟು ಸುಲಭದ ಕೆಲಸವಲ್ಲ. ಸತ್ಯವನ್ನು ಹೇಳುವ ಧೈರ್ಯವಿದ್ದವರಿಗೆ ಮಾತ್ರ ಆತ್ಮಕಥೆ ಬರೆಯಲು ಸಾಧ್ಯ. ಲೇಖಕ ಎಂ.ಜಿ. ಹೆಗಡೆ ಹಲವು ಹಂತ ದಾಟಿ ಬಂದ ವರು. ಸಿಹಿ-ಕಹಿ ಉಂಡು ಬೆಳೆದವರು. ಹಾಗಾಗಿ ಜೀವನದ ಆ ಎಲ್ಲಾ ಅನುಭವವನ್ನು ಅವರು ಈ ಆತ್ಮಕಥೆಯ ಮೂಲಕ ಅನಾವರಣಗೊಳಿಸಿದ್ದಾರೆ ಎಂದು ಹಿರಿಯ ಸಾಹಿತಿ, ಕವಿ ಸುಬ್ರಾಯ ಚೊಕ್ಕಾಡಿ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದ ಲೇಖಕ, ಅಂಕಣಕಾರ ಎಂ.ಜಿ. ಹೆಗಡೆಯ ಱಚಿಮಣಿ ಬೆಳಕಿನಿಂದ’ ಆತ್ಮಕಥೆಯನ್ನು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪುಸ್ತಕ ಪರಿಚಯ ಮಾಡಿದ ಚಿಂತಕ ಅರವಿಂದ ಚೊಕ್ಕಾಡಿ ಯಾವುದೇ ಆತ್ಮಕಥೆಯ ಬಗ್ಗೆ ವಿಮರ್ಶೆ ಮಾಡಲಾಗದು. ಯಾಕೆಂದರೆ ಅದು ಲೇಖಕರ ಜೀವನಾನುಭವವಾಗಿದೆ. ಹಾಗಂತ ಆತ್ಮಕಥೆಗಳಲ್ಲಿ ಬರೆದುದು ಎಲ್ಲವೂ ಎಂಬ ಧೋರಣೆ ಸರಿಯಲ್ಲ. ಆದರೆ ಎಂ.ಜಿ. ಹೆಗಡೆ ಸತ್ಯ ವಿಚಾರವನ್ನಷ್ಟೇ ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ ಎಂಬುದಾಗಿ ನಾನು ಧೈರ್ಯದಿಂದ ಹೇಳಬಲ್ಲೆ. ತನ್ನ ಬದುಕಿನ ವೈರುಧ್ಯವನ್ನೂ ಅವರು ಈ ಆತ್ಮಕಥೆಯಲ್ಲಿ ಬರೆದಿರುವುದು ಅದಕ್ಕೆ ಸಾಕ್ಷಿಯಾಗಿದೆ ಎಂದರು.

ಕೃತಿಯ ಲೇಖಕ ಎಂ.ಜಿ.ಹೆಗಡೆ ಮಾತನಾಡಿ ಜನರ ಮನಸ್ಸನ್ನು ಘಾಸಿಗೊಳಿಸುತ್ತಿದ್ದ ನನ್ನನ್ನು ಜನರ ಮನಸ್ಸನ್ನು ವಾಸಿಗೊಳಿಸುವಂತೆ ಮಾಡಿದ್ದು ನನ್ನ ವಿದ್ಯಾಗುರುಗಳಾದ ಸದಾಶಿವ ರಾವ್. ಆವರೆಗೂ ನನ್ನ ಮೆದುಳು ಯಾರದೋ ಕೈಯಲ್ಲಿತ್ತು. ಗುರುಗಳ ಎಚ್ಚರಿಕೆಯ ಮಾತಿನ ಬಳಿಕ ನಾನು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ವರ್ತಮಾನಕ್ಕೆ ಇತಿಹಾಸದ ವೇಷ ಕಟ್ಟಿಕೊಳ್ಳುವ ಅಗತ್ಯವಿಲ್ಲ ಎಂಬುದನ್ನು ತಿಳಿದುಕೊಂಡೆ. ಇತಿಹಾಸವನ್ನು ಕೆದಕುತ್ತಾ ಹೋದರೆ ಗೊಂದಲ ಸೃಷ್ಟಿಯಾಗುತ್ತದೆ. ಸೃಜನಶೀಲ ಬದುಕಿಗೆ ವರ್ತಮಾನವಷ್ಟೇ ಸಾಕು ಎಂದರು.

ಆತ್ಮಕಥೆ ಬರೆಯುವ ಮುನ್ನ ಆತ್ಮಶೋಧನೆ ಮಾಡಿಕೊಂಡೆ. ನಿಜ ಹೇಳಬೇಕೆಂದರೆ, ಹಿಂದುತ್ವದ ಪರ ಹೋರಾಟ ಮಾಡು ವಾಗ ನನಗೆ ವೇದಗಳು ಉಪನಿಷತ್ತುಗಳ ಬಗ್ಗೆ ಏನೂ ತಿಳಿದಿರಲಿಲ್ಲ. ಒಂದು ವೇಳೆ ತಿಳಿದಿದ್ದರೆ ನಾನಿಂದು ಆಧಾತ್ಯಗುರು ವಾಗುತ್ತಿದ್ದೆನೋ ಏನೋ? ಎಂದು ಎಂ.ಜಿ. ಹೆಗಡೆ ಅಭಿಪ್ರಾಯಪಟ್ಟರು.

ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀಧರ ಭಿಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲೇಖಕಿ ಭುವನೇಶ್ವರಿ ಹೆಗಡೆ, ನಿವೃತ್ತ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು, ನಿವೃತ್ತ ಉಪ ಕುಲಸಚಿವ ಡಾ. ಪ್ರಭಾಕರ ನೀರುಮಾರ್ಗ, ನಾಗವೇಣಿ ಮತ್ತು ಸೀತಾರಾಮ ಹೆಗಡೆ ಶಾನವಳ್ಳಿ, ಪ್ರಭಾಕರ ಹೆಗಡೆ ಹಸಲ್ಮನೆ ಶಿರಸಿ, ಸಿಐಎಲ್ ಮಂಗಳೂರು ಇದರ ನಿರ್ದೇಶಕ ನಂದಗೋಪಾಲ, ಲಾತವ್ಯ ಆಚಾರ್ಯ ಉಡುಪಿ, ಲಕ್ಷ್ಮಿ ಹೆಗಡೆ, ಗಹನ ಹೆಗಡೆ ಉಪಸ್ಥಿತರಿದ್ದರು.

ಭಾನುಮತಿ ಹೆಗಡೆ, ಸಹನಾ ಭಟ್, ಹುಸೈನ್ ಕಾಟಿಪಳ್ಳ ಅವರಿಂದ ಎಂಜಿ.ಹೆಗಡೆ ರಚಿಸಿದ ಭಾವಗೀತೆಗಳ ಗಾಯನ ನಡೆ ಯಿತು. ಗಾಂಧಿ ವಿಚಾರ ವೇದಿಕೆಯ ಆಡಳಿತಾಧಿಕಾರಿ ಭಾಗ್ಯೇಶ್ ರೈ ಸ್ವಾಗತಿಸಿದರು. ಪ್ರಕಾಶಕ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

ನೀತಿ ಸಂಹಿತೆ ಅಡ್ಡಿ: ಚುನಾವಣಾ ನೀತಿ ಸಂಹಿತೆಯ ಕಾರಣ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್‌ಗೆ ಪುಸ್ತಕ ಬಿಡುಗಡೆ ಗೊಳಿಸಲು ಸಾಧ್ಯವಾಗಲಿಲ್ಲ. ಅತಿಥಿಯಾಗಿ ಭಾಗವಹಿಸಬೇಕಿದ್ದ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ತುಳು ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಕೊಂಕಣಿ ಅಕಾಡಮಿಯ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್‌ಗೆ ವೇದಿಕೆ ಏರಲು ಮತ್ತು ಸಭಿಕರಿಗೆ ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲೂ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಯಿತು. ಅತಿಥಿಗಳು ಸಭಿಕರ ಸಾಲಿನಲ್ಲಿ ಕುಳಿತು ಕೃತಿ ಬಿಡುಗಡೆಗೆ ಸಾಕ್ಷಿಯಾದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News