ಮಂಗಳೂರು: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ
ಮಂಗಳೂರು: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ ಹಾಗೂ ಸಹಕಾರಿ ಸಂಘದ 14ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮಂಗಳೂರಿನ ಬಾಳಂಭಟ್ ಸಭಾಭವನದಲ್ಲಿ ಸಹಕಾರಿ ಸಂಘದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪುರುಷೋತ್ತಮ ಕೆ. ಭಂಡಾರಿ ಮಾತನಾಡಿ, ಸಹಕಾರಿ ಸಂಘದ ಕಾರ್ಯ ವ್ಯಾಪ್ತಿಯ ಎಲ್ಲ ಸಕ್ರಿಯ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳು ಸಹಕಾರಿ ಸಂಘದ ಸದಸ್ಯತ್ವ ಪಡೆದು ಸಂಸ್ಥೆಯ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ಸಂಘವು ಆರ್ಥಿಕ ವರ್ಷ 2023-24ರಲ್ಲಿ ರೂ. 3.76 ಕೋಟಿ ಸಾಲ ನೀಡಿಕೆ, ರೂ. 5.04 ಕೋಟಿ ಠೇವಣಾತಿ ಸಂಗ್ರಹ, ರೂ. 5.44 ಲಕ್ಷಗಳ ಒಟ್ಟು ಪಾಲು ಬಂಡವಾಳ ಸಂಗ್ರಹ, 800 ಸದಸ್ಯ ಬಲ ಮತ್ತು ರೂ. 21.47 ಕೋಟಿಗಳ ಒಟ್ಟು ವ್ಯವಹಾರ ನಡೆಸಿ ಉತ್ತಮ ಪ್ರಗತಿ ದಾಖಲಿಸಿದ್ದು ಸದಸ್ಯರ ಪಾಲು ಬಂಡವಾಳದ ಮೇಲೆ ಶೇ. 11%ರಂತೆ ಪಾಲು ಮುನಾಫೆ ವಿತರಿಸಲು ನಿರ್ಣಯಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಮತ್ತು ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ಸಹಕಾರಿ ಸಂಘದ ಸದಸ್ಯರ ಮಕ್ಕಳಿಗೆ ಸಂಸ್ಥೆಯ ಸ್ಥಾಪಕಾಧ್ಯಕ್ಷ ದಿ. ಪಿ.ಜೆ ಸಲ್ದಾನರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರದ ಚೆಕ್ ವಿತರಿಸಲಾಯಿತು.
ನಿರ್ದೇಶಕ ವಿಶ್ವನಾಥ ಗಟ್ಟಿ ಪ್ರತಿಭಾ ಪುರಸ್ಕಾರದ ನಿರ್ವಹಣೆ ಮಾಡಿದರು.
ಮಹಾಸಭೆಯ ವೇದಿಕೆಯಲ್ಲಿ ನಿರ್ದೇಶಕರಾದ ಎಂ. ಜಯರಾಮ ಭಂಡಾರಿ, ಸ್ಟ್ಯಾನಿ ಡಿಸೋಜ, ಕೊಡಂಗೆ ಬಾಲಕೃಷ್ಣ ನಾಯ್ಕ್, ಎ.ವಿಶ್ವನಾಥ ಗಟ್ಟಿ, ಲೀಲಾವತಿ ಕೆ., ಕಾಶೀನಾಥ್ ಪುತ್ರನ್, ಶ್ರೀನಿವಾಸ ಕಣ್ವತೀರ್ಥ, ಎಚ್. ಸುಬ್ರಹ್ಮಣ್ಯ ಭಟ್, ಕಿಶೋರ್ ಕುಟಿನ್ಹ, ಮಹಾಲಿಂಗೇಶ್ವರ ಭಟ್ ಮತ್ತು ಸಹಕಾರಿ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಹಕಾರಿ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಶ್ರೀ ಮಹಾಲಿಂಗೇಶ್ವರ ಭಟ್ ಅಗಲಿದ ಸಹಕಾರಿ ಸಂಘದ ಸದಸ್ಯ ಮತ್ತು ನಿರ್ದೇಶಕರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಾಂತ್ ಸಿ.ಎಚ್. ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ಸಹಕಾರಿ ಸಂಘದ ಸಲಹೆಗಾರ ರಾಮಯ್ಯ ಶೆಟ್ಟಿ ಎಸ್. ಮುಂದಿನ ಆರ್ಥಿಕ ವರ್ಷದ ಮುಂಗಡ ಪತ್ರವನ್ನು ಮಂಡಿಸಿದರು. ಸದಸ್ಯೆ ಶೋಭಾ ಪ್ರಾರ್ಥನಾ ಗೀತೆ ಹಾಡಿದರು. ನಿರ್ದೇಶಕ ಕಿಶೋರ್ ಕುಟಿನ್ಹ ವಂದಿಸಿದರು.