ಗರ್ಭಿಣಿ, ಅಪ್ರಾಪ್ತೆಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗವನ್ನು ಭೇಟಿಯಾದ ವಿಮೆನ್ ಇಂಡಿಯಾ ಮೂವ್ಮೆಂಟ್

Update: 2024-12-25 16:37 GMT

ಬೆಂಗಳೂರು: ಬಂಟ್ವಾಳ ತಾಲೂಕಿನ ಪರ್ಲಿಯಾ ನಿವಾಸಿ ಶಾಹುಲ್ ಹಮೀದ್‌ರ ಮನೆಗೆ ಬಂಟ್ವಾಳದ ರೌಡಿ ಶೀಟರ್ ಹಸೈನಾರ್ ಮತ್ತವರ ಹತ್ತಕ್ಕೂ ಅಧಿಕ ಕಿಡಿಗೇಡಿಗಳ ತಂಡ ಮಧ್ಯರಾತ್ರಿ ನುಗ್ಗಿ ಮನೆಯ ಯಜಮಾನ ಮತ್ತು ಗರ್ಭಿಣಿ ಹಾಗೂ ಅಪ್ರಾಪ್ತೆಗೆ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ನಿಯೋಗವು ರಾಜ್ಯ ಮಹಿಳಾ ಆಯೋಗವನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಪ್ರಕರಣದ ಆರೋಪಿಗಳ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಪೊಕ್ಸೊ, ಕೊಲೆಯತ್ನ ಸಹಿತ ಗಂಭೀರ ಪ್ರಕರಣಗಳು ದಾಖಲಾಗಿದ್ದರೂ ಪೊಲೀಸರು ಸೂಕ್ತ ಕ್ರಮ ಜರುಗಿಸಿಲ್ಲ. ಸಂತ್ರಸ್ತರ ಮೇಲೆ ಆರೋಪಿಗಳು ನೀಡಿದ ಸುಳ್ಳು ದೂರನ್ನು ಆಧರಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಹಲ್ಲೆಗೊಳಗಾದ ಮನೆಯ ಯಜಮಾನನನ್ನೇ ಬಂಧಿಸಿ ಜೈಲಿಗೆ ಕಳಿಸಿರುವುದು ವಿಪರ್ಯಾಸವಾಗಿದೆ. ಘಟನೆಯಿಂದ ಮೊದಲೇ ಆತಂಕದಲ್ಲಿದ್ದ ಸಂತ್ರಸ್ತ ಕುಟುಂಬದ ಮಹಿಳೆಯರು, ಮಕ್ಕಳು ಇದರಿಂದ ಕಂಗಾಲಾಗಿದ್ದಾರೆ. ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ವಿಮ್ ನಿಯೊಗವು ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರ ಗಮನ ಸೆಳೆದಿದೆ. ಅಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಒತ್ತಾಯಿಸಿದೆ.

ವಿಮ್ ರಾಜ್ಯ ಉಪಾಧ್ಯಕ್ಷೆ ಶಾಝಿಯಾ, ರಾಜ್ಯ ಸಮಿತಿ ಸದಸ್ಯೆ ಆಯಿಷಾ ಬೆಂಗಳೂರು, ಜಿಲ್ಲಾ ಉಪಾಧ್ಯಕ್ಷೆ ಸುಮಯ್ಯ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News