ಮೊಬೈಲ್ ಬಳಕೆ ಮಾರಕವಾಗಿ ಪರಿಣಮಿಸಿರುವುದು ಆತಂಕಕಾರಿ: ಎಚ್.ಆರ್. ಈಶ್ವರ್
ಮಂಗಳೂರು: ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಆದರೆ ಇಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯೋಗವಾಗಬೇಕಿದ್ದ ಮೊಬೈಲ್ ಬಳಕೆ ಮಾರಕವಾಗಿ ಪರಿಣಮಿಸಿರುವುದು ಆತಂಕಕಾರು ಬೆಳವಣಿಗೆಯಾಗಿದೆ ಎಂದು ಮಂಗಳೂರು ನಗರದ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್ ಕಳವಳ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ ನಡೆದ ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್‌ನ 2024ನೆ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮತ್ತು ಅರ್ಹರಿಗೆ 10ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆಗೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಳ್ಳಲು ಮಾತ್ರ ಮೊಬೈಲ್ ಬಳಸಬೇಕು. ಆದರೆ ಮೊಬೈಲ್ ತೆಗೆಸಿಕೊಡಲಿಲ್ಲ ಎಂಬ ಕಾರಣಕ್ಕೆ ಕೆಲವು ಮಕ್ಕಳು ಇಂದು ಪೋಷಕರನ್ನೇ ಕೊಲ್ಲುವ ಹಂತಕ್ಕೆ ತಲುಪಿರುವುದು ಆತಂಕಕಾರಿಯಾಗಿದೆ. ವಿದ್ಯಾರ್ಥಿಗಳು ಕಲಿಕೆಗೆ ನೀಡಬೇಕಾದ ಸಮಯವೆಲ್ಲ ಇಂದಿನ ಸೋಷಿಯಲ್ ಮೀಡಿಯಾ ಗಳಿಂದಾಗಿ ವ್ಯರ್ಥವಾಗುತ್ತಿದೆ. ಹಾಗಾಗಿ ಡಿಜಿಟಲ್ ಯುಗದಲ್ಲಿ ಪೋಷಕರು, ಶಿಕ್ಷಕರು ಈ ಬಗ್ಗೆ ಎಚ್ಚರ ವಹಿಸಿ ಜಾಗರೂಕ ರಾಗಬೇಕು ಎಂದು ಈಶ್ವರ್ ಹೇಳಿದರು.
ಅತಿಥಿಯಾಗಿ ಭಾಗವಹಿಸಿದ ವಿವಿ ಕಾಲೇಜಿನ ಪ್ರಾಂಶುಪಾಲ ಗಣಪತಿ ಗೌಡ ಮಾತನಾಡಿ ಅದೃಷ್ಟಗಳಿಗೆ ಯಾವುದೇ ಭವಿಷ್ಯವಿರುವುದಿಲ್ಲ. ನಾವು ಯಾವುದೇ ವಿಷಯದಲ್ಲಿ ಪ್ರಯತ್ನ ಪಡದಿದ್ದಲ್ಲಿ ಜಯಶೀಲರಾಗುವುದಕ್ಕೆ ಸಾಧ್ಯವಿಲ್ಲ. ಪ್ರಯತ್ನದ ಮೂಲಕ ಸಿಗುವ ಫಲಗಳು ಶಾಶ್ವತವಾದುದು. ಹಾಗಾಗಿ ವಿದ್ಯಾರ್ಥಿಗಳು ಸೋಲನ್ನೊಪ್ಪಿಕೊಳ್ಳದೆ ಪ್ರಯತ್ನ ಪಡುವವರಾಗಬೇಕು. ಆಗ ಮಾತ್ರ ನಮಗೆ ಫಲ ದೊರೆಯಲಿದೆ ಎಂದರು.
ಎ.ಜೆ. ಆಸ್ಪತ್ರೆಯ ಗೈನೋಕಾಲಜಿಸ್ಟ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಡಾ. ವೀಣಾ ಕೆ.ಆರ್. ಭಾಗ್ವಾನ್, ಯೆನೆಪೊಯ ವಿಶ್ವವಿದ್ಯಾಲಯದ ಡೈರೆಕ್ಟೊರೇಟ್ ಎಕ್ಸ್ಟೆನ್ಷನ್ ಆ್ಯಂಡ್ ಔಟ್ ರೀಚ್ ಆಕ್ಟಿವಿಟಿ ಡೈರೆಕ್ಟರ್ ಡಾ. ಅಶ್ವಿನಿ ಎಸ್. ಶೆಟ್ಟಿ, ಡಾ.ಪಿ ದಯಾನಂದ ಪೈ-ಪಿ.ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಯಕರ ಭಂಡಾರಿ, ಖದೀಜಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶ್ರಫ್ ಎಂ.ಸಿ ಮಾತನಾಡಿದರು.
ಚಿಲ್ಡ್ರನ್ಸ್ ವಿಥ್ ಡ್ರೀಮ್ಸ್ ಸ್ಥಾಪಕಿ ರೂಪಾ ಬಲ್ಲಾಳ್ ಉಡುಪಿ ಅವರಿಗೆ ಬಿಎಸ್‌ಡಬ್ಲ್ಯುಟಿ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಮಾರು 175 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಮಂಗಳ ಗಂಗೋತ್ರಿಯ ನಿವೃತ್ತ ಸೂಪರಿಂಟೆಂಡೆಂಟ್ ಹರೀಶ್ ಕುಮಾರ್ ಕುತ್ತಡ್ಕ ಅಧ್ಯಕ್ಷ್ಯತೆ ವಹಿಸಿದ್ದರು. ಬಿಎಸ್‌ಡಬ್ಲ್ಯುಟಿ ಅಧ್ಯಕ್ಷ ಎನ್. ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಆಕೀಫ್ ಇಂಜಿನಿಯರ್ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಲಾವಿದೆ ಲಾವಣ್ಯ ಮತ್ತವರ ತಂಡದಿಂದ ಱಶಿಕ್ಷಣಕ್ಕೆ ಪ್ರೇರಣೆ ನೀಡುವಂತಹ ಮೌಲ್ಯವಿರಲಿ ಶಿಕ್ಷಣಕ್ಕೆ ಎಂಬ ಹಾಡನ್ನು ಹಾಡಲಾಯಿತು. ಟ್ರಸ್ಟ್‌ನ ಪದಾಧಿಕಾರಿ ಸುಲೈಮಾನ್ ಪಕ್ಕಲಡ್ಕ ವಂದಿಸಿದರು. ಬಬಿತಾ ಕಾರ್ಯಕ್ರಮ ನಿರೂಪಿಸಿದರು.