ಪತ್ರಿಕಾ ರಂಗ ಕೊನೆಯುಸಿರೆಳೆಯುವ ಹಂತಕ್ಕೆ ಬಂದಿದೆ : ಮುಳಿಯ ಶಂಕರ ಭಟ್ಟ ವಿಷಾದ

Update: 2025-01-05 15:10 GMT

ಬಂಟ್ವಾಳ: ಬಂಟ್ಚಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದ ಭಾಗವಾಗಿ ರವಿವಾರ ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಮೊದಲ ಗೋಷ್ಠಿಯಾಗಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ವಿಶ್ರಾಂತ ಪ್ರಾಧ್ಯಾಪಕ ಬಿಲ್ಲಂಪದವು ಮಹಾಲಿಂಗ ಭಟ್, ಬಂಟ್ವಾಳ ಕಸಾಪ ಮಾಜಿ ಅಧ್ಯಕ್ಷ ಉದಯ ಶಂಕರ್ ನೀರ್ಪಾಜೆ, ತುಂಬೆ ಪದವಿಪೂರ್ವ ಕಾಲೇಜು ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ, ಕನ್ನಡ-ತುಳು ಕವಿ ಚೆನ್ನಪ್ಪ ಅಳಿಕೆ ಅವರು ಸಂವಾದ ನಡೆಸಿದರು.

ಈ ಸಂದರ್ಭ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಎಳೆಯರ ಗೆಳೆಯ ಖ್ಯಾತಿಯ ಮುಳಿಯ ಶಂಕರ ಭಟ್ಟ ಅವರು, ಇಂದಿನ ಕಾಲದಲ್ಲಿ ಪತ್ರಿಕೆಗಳು ಕೊನೆಗಾಲದ ದಿನಗಳನ್ನು ಎಣಿಸುವಂತಾಗಿರುವುದು ಅತ್ಯಂತ ವಿಷಾದ ಎಂದರು. ಪತ್ರಿಕೆಗಳ ಜೀವಾಳವಾಗಿರುವ ಜಾಹೀರಾತು ನೀಡುವವರಿಲ್ಲ. ಓದುಗರೂ ಕಡಿಮೆಯಾಗಿದ್ದಾರೆ. ಪತ್ರಿಕೆ ಖರೀದಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪತ್ರಿಕೆಗೆ ಬರೆಯುವವರೂ ಇಲ್ಲದಾಗಿದ್ದಾರೆ. ಪರಿಣಾಮ ಶಿಶು ಸಾಹಿತ್ಯ, ಸಾಪ್ತಾಹಿಕ ಸಂಪದ ಮೊದಲಾದ ಪತ್ರಿಕೆಗಳ ವಿಶೇಷಾಂಕಗಳು, ಓದುಗರ-ಬರೆಯುವವರ ಅಂಕಣಗಳು ಮರೆಯಾಗಿದೆ. ಯಾವ ಕಾಲಕ್ಕೆ ಯಾವ ಪತ್ರಿಕೆ ನಿಲ್ಲುತ್ತದೆ ಎಂಬುದನ್ನು ಹೇಳಲಾಗದ ಸ್ಥಿತಿ ಎಂದ ಅವರು ಓದುವವರಿಲ್ಲದೆ ಸಾಹಿತ್ಯ ಸೊರಗುತ್ತಿದೆ. ಸಾಹಿತಿಗಳ ಸಾಹಿತ್ಯ ಜನರ ಬದುಕಿನಿಂದ ದೂರವಾಗುತ್ತಿದೆ ಎಂದವರು ತೀವ್ರ ದುಃಖ ವ್ಯಕ್ತಪಡಿಸಿದರು.

ಸಾಹಿತ್ಯ ನನಗೆ ಸಾಕಷ್ಟು ಕೊಟ್ಟಿದೆ. ಅದಕ್ಕಾಗಿ ನಾನು ಕಣ್ಣು ಮುಚ್ಚಿದರೂ ಸಾಹಿತ್ಯ ಕ್ಷೇತ್ರಕ್ಕೆ ನನ್ನ ಕೊಡುಗೆ ಸದಾ ಶಾಶ್ವತವಾಗಿರಬೇಕು. ಅದುವೇ ನಾನು ಸಾಹಿತ್ಯ ಕ್ಷೇತ್ರಕ್ಕೆ ಕೊಡಬಲ್ಲ ದೊಡ್ಡ ಕೊಡುಗೆ ಎಂದರು.

ಗುಬ್ಯ ಶ್ರೀಧರ್, ಚಂದ್ರಹಾಸ ರೈ ಬಾಲಜಿಬೈಲು, ಬಿ.ಎಂ. ಅಬ್ಬಾಸ್ ಅಲಿ, ಜನಾರ್ದನ ಅಮ್ಮುಂಜೆ ಅವರು ಉಪಸ್ಥಿತರಿದ್ದರು.

ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಉಮರ್ ಮಂಚಿ ವಂದಿಸಿ, ಉಮ್ಮರ್ ಕುಂಞಿ ಸಾಲೆತ್ತೂರು ನಿರ್ವಹಿಸಿದರು.

ಇದಕ್ಕೂ ಮೊದಲು ಡಾ. ವಾರಿಜ ನಿರ್ಬೈಲು ಅವರಿಂದ ನಡೆದ ಗಮಕ ವಾಚನ ಕಾರ್ಯಕ್ರಮವನ್ನು ತುಳಸಿ ಕೈರಂಗಳ ನಿರೂಪಿಸಿದರು. ರೂಪಾಶ್ರೀ ಮೋಂತಿಮಾರು ವಂದಿಸಿ, ಜಗನ್ನಾಥ ಪುರುಷ ಮಂಚಿ ನಿರ್ವಹಿಸಿದರು. ಪೊಳಲಿ-ಬೊಕ್ಕಸ ಶಿವರಂಜಿನಿ ಕಲಾ ಕೇಂದ್ರದಿಂದ ಶಿವರಂಜಿನಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿದುಷಿ ಶ್ರೀಮತಿ ಶ್ಯಾಮಲಾ ಸುರೇಶ್ ಹಾಗೂ ತಂಡದ ನೇತೃತ್ವದ ಕುಂಟೂರು ಮಿತ್ರ ಬಳಗದಿಂದ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಯರಾಮ ಪಡ್ರೆ ನಿರೂಪಿಸಿದರು. ಮಂಜುಳಾ ಸುಬ್ರಹ್ಮಣ್ಯ ವಂದಿಸಿ, ವಿಮಲೇಶ್ ಸಿಂಗಾರಕೋಡಿ ನಿರ್ವಹಿಸಿದರು. ಎಲ್ ಕೆ ಧರಣ್ ಮಾಣಿ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು.










 


 


 


 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News