ಮಂಗಳೂರು: ಮರದ ಕೊಂಬೆ ಬಿದ್ದು ಮೂವರಿಗೆ ಗಾಯ

Update: 2025-03-17 20:59 IST
ಮಂಗಳೂರು: ಮರದ ಕೊಂಬೆ ಬಿದ್ದು ಮೂವರಿಗೆ ಗಾಯ
  • whatsapp icon

ಮಂಗಳೂರು, ಮಾ.17: ನಗರದ ಹಂಪನಕಟ್ಟೆ ಜಂಕ್ಷನ್ ಬಳಿಯ ಶೆಟ್ಟಿ ಆಟೋ ಪಾರ್ಕ್ ಬಳಿ ದೈತ್ಯಾಕಾರದ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಜೆ ನಡೆದಿದೆ.

ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ಮರಿಯಂ ಮುಫೀದಾ (18), ಫಾಹಿಮಾ ಮರಿಯಂ (17) ಹಾಗೂ ಅಬ್ಬೆಟ್ಟು ನಿವಾಸಿ ಅಫ್ರತ್ (18) ಗಾಯಗೊಂಡವರು. ಈ ಪೈಕಿ ಅಫ್ರತ್‌ಗೆ ಹೆಚ್ಚು ಗಾಯವಾಗಿದೆ.

ನಗರದ ಬಲ್ಮಠದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರಾಗಿರುವ ಇವರು ಸೋಮವಾರ ಸಂಜೆ ಸುಮಾರು 4:30ಕ್ಕೆ ಹಂಪನಕಟ್ಟೆಯ ಬಳಿ ಮನೆಗೆ ತೆರಳಲು ಸಂಜೆ 4:30ಕ್ಕೆ ಬಸ್ಸಿಗೆ ಕಾಯುತ್ತಿದ್ದಾಗ ಮರದ ಕೊಂಬೆ ಬಿತ್ತು ಎನ್ನಲಾಗಿದೆ. ಇದು ಜನನಿಬಿಡ ಪ್ರದೇಶವಾಗಿದ್ದು, ಬಹುತೇಕ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಅಧಿವೇಶನದಲ್ಲಿರುವ ಶಾಸಕ ವೇದವ್ಯಾಸ ಕಾಮತ್ ವಿಷಯ ತಿಳಿದ ಕೂಡಲೇ ಪಾಲಿಕೆಯ ಮಾಜಿ ಸದಸ್ಯೆ ಪೂರ್ಣಿಮಾರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಮತ್ತು ಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಗಾಯಾಳುಗಳ ಚಿಕಿತ್ಸಾ ವೆಚ್ಚ ಸಹಿತ ಕೊಂಬೆಯ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಇನ್ನೂ ಕೆಲವರಿಗೆ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮರದ ಕೊಂಬೆ ಮುರಿದು ಬಿದ್ದ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗವು ಮರದ ಕೊಂಬೆಗಳನ್ನು ತೆರವುಗೊಳಿಸಿತು.

ನಾವು ಕಾಲೇಜಿನ ತರಗತಿ ಮುಗಿಸಿ ಮನೆಗೆ ಮರಳಲು ಬಸ್ಸಿಗೆ ಕಾಯುತ್ತಿದ್ದೆವು. ಅಷ್ಟರಲ್ಲಿ ಮರದ ಕೊಂಬೆಯೊಂದು ಮುರಿದು ಬಿತ್ತು. ತಕ್ಷಣ ನಮ್ಮನ್ನು ರಿಕ್ಷಾದ ಮೂಲಕ ಆಸ್ಪತ್ರೆಗೆ ಕರೆತಂದರು. ಆ ಬಳಿಕ ನಾವು ಮನೆಯವರಿಗೆ ಮಾಹಿತಿ ನೀಡಿದೆವು ಎಂದು ಗಾಯಾಳು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News