ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟ ಆರೋಪ: ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ವಿರುದ್ಧ ಪ್ರಕರಣ ದಾಖಲು

ಶಾಸಕ ಅಶೋಕ್ ರೈ - ಹಕೀಂ ಕೂರ್ನಡ್ಕ
ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟು ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಹರಡುವಂತೆ ಮಾಡಿರುವ ಆರೋಪದಲ್ಲಿ ಪುತ್ತೂರು ತಾಲೂಕಿನ ಕೂರ್ನಡ್ಕ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಕಸ್ಬಾದ ಪರ್ಲಡ್ಕ ಎಂಬಲ್ಲಿನ ನಿವಾಸಿ, ಪುತ್ತೂರು ನಗರ ಸಭೆಯ ಸದಸ್ಯ ಬಶೀರ್ ಅವರು ನೀಡಿದ ದೂರಿನಂತೆ ಹಕೀಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ:-
ಬಶೀರ್ ಅವರು ನೀಡಿರುವ ದೂರಿನಲ್ಲಿ ತಾನು ಪುತ್ತೂರು ನಗರ ಸಭೆಯ ಕಾಂಗ್ರೆಸ್ ಪಕ್ಷದ ಬೆಂಬಲಿತ ಚುನಾಯಿತ ಸದಸ್ಯನಾಗಿದ್ದು ಮಾ.15 ರಂದು ಸಂಜೆ 7 ಗಂಟೆಗೆ ತನ್ನ ಮನೆಯಾದ ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಎಂಬಲ್ಲಿರುವಾಗ ಆಶೋಕ್ ರೈ ಸೋಷಿಯಲ್ ಮಿಡಿಯಾ ವಾಟ್ಸಾಪ್ ಗ್ರೂಪಿನಲ್ಲಿ ತನ್ನ ಪರಿಚಯದ ಕೂರ್ನಡ್ಕ ನಿವಾಸಿ ಹಕೀಂ ಕೂರ್ನಡ್ಕ ಎಂಬಾತ ಕಾಂಗ್ರೆಸ್ ಪಕ್ಷದ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಬಗ್ಗೆ ಒಂದು ವಾಯ್ಸ್ ಸಂದೇಶವನ್ನು ವಾಟ್ಸಾಪ್ ನಲ್ಲಿ ಹಾಕಿದ್ದು ಅದನ್ನು ಕೇಳಲಾಗಿ ನಾವು ಮುಂದಕ್ಕೆ ಇಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ನಗರ ಸಭೆ, ಪಟ್ಟಣ ಪಂಚಾಯತ್, ಚುನಾವಣೆ ಬಂದಾಗ ನಾವು ಮುಸಲ್ಮಾನ ಕ್ಯಾಂಡಿಡೆಟ್ ನಿಲ್ಲಿಸಿ ಗೆಲ್ಲಿಸುವ, ಯಾಕೆ ನಮಗೆ ಶಕ್ತಿ ಇಲ್ಲ ?, ಗೆಲ್ಲಿಸ್ಲಿಕ್ಕೆ ನಾವೆಲ್ಲ ಮುಸಲ್ಮಾನ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗುವ, ಕೋಮುವಾದಿಯ ಹಿಂದೆ ಹೋಗು ವುದು ಬೇಡ, ಅಶೋಕ್ ರೈ ಅವರನ್ನು ನಾವಿಲ್ಲಿ ಕಷ್ಟ ಪಟ್ಟು ಗೆಲ್ಲಿಸಿಕೊಟ್ರೆ ಅದರ ಲಾಭ ಪಡೆಯುವುದು ಯಾರು ಇದೇ ಅಶೋಕ್ ರೈ, ಯಾಕೆ ನಾವು ಕಷ್ಟ ಪಟ್ಟು ಗೆಲ್ಲಿಸಿ ಕೊಟ್ಟು ಅವರ ಕೈ ಬಲ ಪಡಿಸಬೇಕು, ಇವರಿಂದ ಪಕ್ಷಕಾಗುದಾದರೂ ಲಾಭ ಏನು, ಯಾವಾಗ ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಚುನಾವಣೆ ಆಗುತ್ತದೆ. ನಾವು ಆ ಭಾಗದಲ್ಲಿ ಮುಸಲ್ಮಾನ ಕ್ಯಾಂಡಿಡೆಟ್ ಆಯ್ಕೆ ಮಾಡುವ, ಗೆದ್ದು ತೋರಿಸುವ , ನಮ್ಮಶಕ್ತಿ ಏನಂತ ತೋರಿಸುವ.
ನಾವು ಜಾತ್ಯಾತೀತ ವ್ಯಕ್ತಿಗಳು ಜಾತ್ಯಾತೀತ ಪಕ್ಷದಲ್ಲಿ ಇದ್ದವರು, ಆದರೆ ಇಲ್ಲಿ ಜಾತ್ಯಾತೀತ ಪಕ್ಷದಲ್ಲಿ ರುವ ಕೋಮುವಾದಿಗಳಿಗೆ ನಾವು ಬುದ್ಧಿ ತೋರಿಸಬೇಕಲ್ಲಾ , ಒಂದು ಸಮುದಾಯವನ್ನು ಮೂಲೆ ಗುಂಪು ಮಾಡುವಾಗ ನಾವು ಏನಾದರೂ ಪರಿಹಾರ ವ್ಯವಸ್ಧೆ ಮಾಡಬೇಕಲ್ಲಾ ಎಂಬಿತ್ಯಾದಿಯಾಗಿ ಸುಳ್ಳು ಸುದ್ದಿಯನ್ನು ಹರಡಿ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ಮದ್ಯೆ ವೈರತ್ವ, ದ್ವೇಷ, ವೈಮನಸ್ಸು ಹರಡು ವಂತೆ ಮಾಡಿರುತ್ತಾರೆ. ಈ ಕುರಿತು ಹಕೀಂ ಕೂರ್ನಡ್ಕ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ಈ ದೂರಿನಂತೆ ಕೇಸು ದಾಖಲಿಸಿಕೊಂಡಿರುವ ಪುತ್ತೂರು ನಗರ ಠಾಣೆಯ ಪೊಲೀಸರು ಹಕೀಂ ಕೂರ್ನಡ್ಕ ಅವರ ಮನೆಗೆ ಸೋಮವಾರ ರಾತ್ರಿ ತೆರಳಿ ಅಲ್ಲಿಂದಲೇ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಮಾಹಿತಿ ಅರಿತು ಕಾಂಗ್ರೆಸ್‌ನ ಕೆಲ ಮುಸ್ಲಿಂ ಮುಖಂಡರು ಠಾಣೆಗೆ ತೆರಳಿದ್ದರು. ಬಳಿಕ ತಡರಾತ್ರಿ ಕೇಸು ದಾಖಲಿಸಿಕೊಂಡು ಮನೆಗೆ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ಕೋಮು ಪ್ರಚೋದನಕಾರಿ ಹೇಳಿಕೆ ನೀಡಿಲ್ಲ: ಹಕೀಂ ಕೂರ್ನಡ್ಕ ಸ್ಪಷ್ಟನೆ
ತನ್ನ ವಿರುದ್ದ ದೂರು ದಾಖಲಾಗಿರುವ ಬಗ್ಗೆ ಮಾದ್ಯಮಕ್ಕೆ ಸ್ಪಷ್ಟನೆ ನೀಡಿರುವ ಹಕೀಂ ಕೂರ್ನಡ್ಕ ಅವರು ನಾನು ಶಾಸಕ ಅಶೋಕ್ ರೈ ಅವರ ಮೆಡಿಕಲ್ ಕಾಲೇಜು ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜಿಗೆ ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ. ಪುತ್ತೂರಿನ ಮೆಡಿಕಲ್ ಕಾಲೇಜಿಗೆ ಎಲ್ಲಿಯೂ ಅನುದಾನ ಮೀಸಲಿಟ್ಟಿಲ್ಲ. ಒಂದು ಮೆಡಿಕಲ್ ಕಾಲೇಜು ಆಗಬೇಕಾದರೆ ಅದು ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಅದು ಬಿಟ್ಟು ಪುತ್ತೂರಿಗೆ ಮೆಡಿಕಲ್ ಕಾಲೇಜು ಎಂಬುದು ಸದ್ಯಕ್ಕೆ ಆಗುವಂತ ವಿಚಾರವಲ್ಲ. ಇದನ್ನ ನಾನು ಪ್ರಶ್ನೆ ಮಾಡಿದ್ದೇನೆ. ನಾನು ಯಾವುದೇ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ಶಾಸಕ ಅಶೋಕ್ ಕುಮಾರ್ ರೈ ಮುಸ್ಲಿಂರನ್ನು ಕಡೆಗಣಿಸುತ್ತಿದ್ದಾರೆ ಎಂದಿದ್ದೆ. ಎಲ್ಲಾ ಹುದ್ದೆಗಳನ್ನು ಸಂಘಪರಿವಾರದಿಂದ ಬಂದವರಿಗೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂರ ತಾಕತ್ತು ತೋರಿಸಬೇಕು ಎಂದಿದ್ದೆ. ಈ ವಿಚಾರವಾಗಿ ಶಾಸಕರ ಆಪ್ತರಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಕೊಲೆ ಬೆದರಿಕೆ ಬರುತ್ತಿವೆ. ಸ್ವತಃ ಪೊಲೀಸರೇ ನನ್ನ ಜೀವಕ್ಕೆ ಅಪಾಯವಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಮಾತಾಡಿದ ನನ್ನ ಮೇಲೆ ದೂರು ನೀಡಿದ್ದಾರೆ.
ಶಾಸಕ ಆಶೋಕ್ ಕುಮಾರ್ ರೈ ಅವರ ಒತ್ತಡದಿಂದ ಪೊಲೀಸರು ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮೂರು ಜೀಪ್‌ನಲ್ಲಿ ನನ್ನ ಮನೆಗೆ ಬಂದ ಪೊಲೀಸರು ನನ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನನ್ನ ಕಾರಿನಲ್ಲಿ ಓರ್ವ ಪೊಲೀಸ್ ಅಧಿಕಾರಿಯನ್ನು ಬಿಟ್ಟಿದ್ದರು. ನನ್ನ ಕಾರಿನ ಮುಂಭಾಗ ಎರಡು ಪೊಲೀಸ್ ಜೀಪ್ ಮತ್ತು ಹಿಂಭಾಗದಲ್ಲಿ ಒಂದು ಪೊಲೀಸ್ ಜೀಪ್ ಇತ್ತು. ಮನೆಯಿಂದ ಮಂಗಳೂರು ರಸ್ತೆಯಾಗಿ ಒತ್ತಾಯ ಪೂರ್ವಕವಾಗಿ ಕೊಂಡೊಯ್ಯುತ್ತಿದ್ದರು. ನನ್ನನ್ನು ಎನ್‌ಕೌಂಟರ್ ಮಾಡುವ ಪ್ರಯತ್ನ ದ ಬಗ್ಗೆ ನನಗೆ ಸಂಶಯ ಬಂದಿತ್ತು. ನನ್ನ ಒಂದು ಮೊಬೈನ್ನು ಪೊಲೀಸರು ತಮ್ಮ ಬಳಿ ಇರಿಸಿಕೊಂಡಿದ್ದರು. ಇನ್ನೊಂದು ಮೊಬೈಲ್ ಮೂಲಕ ತಾನು ಸ್ಪೀಕರ್ ಪಿಎ ಮತ್ತು ಆಪ್ತರಿಗೆ ವಿಚಾರ ತಿಳಿಸಿದ್ದೆ. ಸ್ಪೀಕರ್ ಗಮನಕ್ಕೆ ಬಂದ ವಿಚಾರ ತಿಳಿದ ಪೊಲೀಸರು ತಕ್ಷಣವೇ ಡಿವೈಎಸ್‌ಪಿ ಕಚೇರಿಗೆ ವಾಹನವನ್ನು ತಿರುಗಿಸಿದ್ದಾರೆ. ಬಳಿಕ ಕೆಲವು ಕಾಂಗ್ರೆಸ್ ಅಲ್ಪ ಸಂಖ್ಯಾತ ಮುಖಂಡರು ಠಾಣೆಗೆ ಬಂದ ಬಳಿಕ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.