ಕುಪ್ಪೆಪದವು: ಸೌಹಾರ್ದಕ್ಕೆ ಸಾಕ್ಷಿಯಾದ ಇಫ್ತಾರ್ ಸ್ನೇಹ ಕೂಟ

ಮಂಗಳೂರು: ಕುಪ್ಪೆಪದವಿನಲ್ಲಿ ರಂಝಾನ್ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ನಡೆಯಿತು.
ಜಮಾಅತೆ ಇಸ್ಲಾಮೀ ಹಿಂದ್ ಎಡಪದವು - ಕುಪ್ಪೆಪದವು ವರ್ತುಲವು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ಅಧ್ಯಕ್ಷರಾದ ಇಸ್ಹಾಕ್ ಪುತ್ತೂರು ಮಾತನಾಡಿ, ನಮ್ಮ ಬಗ್ಗೆ ನೆರೆಹೊರೆಯವರು ಭಯ ಇಲ್ಲದೆ ಬದುಕುತ್ತಿದ್ದಾರೆ ಎಂದರೆ ನಮ್ಮಲ್ಲಿ ಧರ್ಮ ಇದೆ ಎಂದು ಅರ್ಥ. ಆ ರೀತಿಯಾಗಿ ನಾವು ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ, ಪರರಿಗೆ ಉಪಕಾರ ಮಾಡುವ ಗುಣವನ್ನು ಬೆಳಸಿಕೊಂಡು ಬದುಕಬೇಕು ಎಂದರು.
ಕುಪ್ಪೆಪದವಿನ ಹಮ್ದ್ ಸೆಂಟರ್‌ನಲ್ಲಿ ಆಯೋಜಿಸಿದ ಇಫ್ತಾರ್ ಸ್ನೇಹ ಕೂಟದ ಅಧ್ಯಕ್ಷತೆ ವಹಿಸಿ ಇಸಾಕ್ ಪುತ್ತೂರು ಇಫ್ತಾರ್ ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪೊಸಕುರಲ್ ಮಾಧ್ಯಮ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ನಮ್ಮ ಆಚರಣೆಯಲ್ಲಿ ನಾವು ಸರಿಯಾಗಿ ಇದ್ದರೆ ಎಲ್ಲವೂ ಸರಿಯಾಗಿ ಇರುತ್ತದೆ. ನಮ್ಮ ಮನಸ್ಸು ಹೃದಯ ಶುದ್ಧವಾಗಿದ್ದರೆ, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡಿದರೆ ಎಲ್ಲರನ್ನೂ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಸಂದೇಶ ನೀಡಿದರು.
ಎಲ್ಲಾ ಧರ್ಮವನ್ನು ನಾವು ಪ್ರೀತಿಸಬೇಕು, ಗೌರವಿಸಬೇಕು. ಸಮಾಜದಲ್ಲಿ ಒಗ್ಗಟ್ಟಾಗಿ ನಡೆದುಕೊಂಡು ಹೋಗಲು ಇದು ಅಗತ್ಯ. ಇದನ್ನು ನಮ್ಮ ಮಕ್ಕಳಿಗೂ ತಿಳಿಸಬೇಕು ಎಂದು ಮಂಗಳೂರು ಪ್ರದೇಶ ಕ್ಯಾಥೋಲಿಕ್ ಸಭಾ ಕುಪ್ಪೆಪದವು ಘಟಕದ ಅಧ್ಯಕ್ಷ ಥೋಮಸ್ ರೊಸಾರಿಯೋ ಸಂದೇಶ ನೀಡಿದರು.
ಸನ್ಮಾರ್ಗ ವಾರಪತ್ರಿಕೆ ಮತ್ತು ಸನ್ಮಾರ್ಗ ಚಾನೆಲ್‍ನ ಸಂಪಾದಕ ಎ.ಕೆ ಕುಕ್ಕಿಲ ರಂಝಾನ್ ಉಪವಾಸ ವೃತಾಚರಣೆ ಅದರ ರೀತಿ ನೀತಿಗಳ ವಿಶೇಷತೆ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ನಿವೃತ್ತ ನ್ಯಾಯವಾದಿ ಮುಂಬೈ ಎ.ಐ. ಕುಲವೂರು, ಬಾರ್ದಿಲ ಮಸ್ಜಿದುರಹ್ಮಾನ್ ಮಾಜಿ ಅಧ್ಯಕ್ಷ ಅಲಿಯಬ್ಬ ಪಿ.ಎಮ್, ಮುತ್ತೂರು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಬಲ್ಲಾಜೆ, ಕೆ.ವಿ.ಸಿ ಮೂಡುಬಿದಿರೆ ಸದಸ್ಯ ಪ್ರವೀಣ್ ಇರುವೈಲು, ಯುವ ಕಾಂಗ್ರೆಸ್ ಮುಖಂಡ ಗಿರೀಶ್ ಆಳ್ವ, ಇರುವೈಲು ಗ್ರಾಮ ಪಂಚಾಯತ್ ಸದಸ್ಯ ನವೀನ್ ಇರುವೈಲು, ಪರಿಸರದ ಪ್ರಮುಖರು ದಯಾನಂದ ಇರುವೈಲು, ಪ್ರಕಾಶ್ ಭಟ್ ಇರುವೈಲು, ದಯಾನಂದ ಶೆಟ್ಟಿ ಕುಳವೂರು ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ಕುಪ್ಪೆಪದವು ಘಟಕ ಅಧ್ಯಕ್ಷ ಝಾಕಿರ್ ಹಸನ್ ಎಡಪದವು, ಹಮ್ದ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಶರೀಫ್, ಟ್ರಸ್ಟಿ ಅಬ್ದುಲ್ ರಹೀಂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೌಹಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.