ಪೊಲೀಸ್ ರಕ್ಷಣೆಯಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು: ಅಪರೂಪದ ಪ್ರಕರಣಕ್ಕೆ ರಾಜ್ಯ ಹೈಕೋರ್ಟ್ ಮಹತ್ವದ ಆದೇಶ

Update: 2025-03-18 21:06 IST
ಪೊಲೀಸ್ ರಕ್ಷಣೆಯಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು: ಅಪರೂಪದ ಪ್ರಕರಣಕ್ಕೆ ರಾಜ್ಯ ಹೈಕೋರ್ಟ್ ಮಹತ್ವದ ಆದೇಶ
  • whatsapp icon

ಮಂಗಳೂರು: ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಮತ್ತು ಶಾಲೆಯ ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪೊಲೀಸ್ ರಕ್ಷಣೆ ನೀಡುವಂತೆ ರಾಜ್ಯ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಮಂಗಳವಾರ ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೆ ತರಗತಿಯ ಇಬ್ಬರು ವಿದ್ಯಾರ್ಥಿಗಳು ಪೊಲೀಸ್ ರಕ್ಷಣೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಮಾ.20ರಿಂದ ಪರೀಕ್ಷೆ ಆರಂಭವಾಗಲಿದೆ.

ಅತ್ತಿಬೆಲೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆ, ಅಲ್ಲಿನ ಕೊಳಕು ಪರಿಸರ, ದುರ್ನಾತ ಖಂಡಿಸಿ ಆ ಶಾಲೆಯ ಕೆಲವು ವಿದ್ಯಾರ್ಥಿಗಳು ಮತ್ತವರ ಹೆತ್ತವರು ಕ್ಷೇತ್ರ ಶಿಕ್ಷಣಾಧಿಕಾರಿ, ಮಕ್ಕಳ ರಕ್ಷಣಾ ಆಯೋಗ, ರಾಜ್ಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮೊಯ್ದಿನ್ ಕುಟ್ಟಿಗೆ ಈ ಹಿಂದೆ ಮನವಿ ಸಲ್ಲಿಸಿದ್ದರು.

ಈ ಮಧ್ಯೆ ಶಾಲೆಯ ಶಿಕ್ಷಕನಿಂದ ಏಳನೇ ತರಗತಿಯ ಆರು ಮಂದಿ ವಿದ್ಯಾರ್ಥಿನಿಯರಿಗೆ ಸತತ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು. ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂರಿನ ಮೇರೆಗೆ ಶಾಲಾ ಶಿಕ್ಷಕನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಜಾಮೀನಿಂದ ಹೊರಬಂದ ಆರೋಪಿ ಶಿಕ್ಷಕನು ಶಾಲಾ ಕಾಂಪೌಂಡ್‌ನ ಕ್ವಾರ್ಟರ್ಸ್‌ನಲ್ಲೇ ವಾಸ ಮುಂದು ವರಿಸಿದ್ದ. ಅದಲ್ಲದೆ ದೂರು ನೀಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತವರ ಪೋಷಕರ ವಿರುದ್ಧ ಶಾಲೆಯ ಇತರ ಶಿಕ್ಷಕ, ಸಿಬ್ಬಂದಿ ವರ್ಗವು ಅತ್ತಿಬೆಲೆ ಠಾಣೆಗೆ ದೂರು ನೀಡಿ ಶಾಲೆಯ ಆವರಣಕ್ಕೆ ಪೋಷ ಕರು ಬಂದು ತೊಂದರೆ ಕೊಡುತ್ತಾರೆ ಎಂದು ಆರೋಪಿಸಿದ್ದರು. ಅದರಂತೆ ಪೊಲೀಸರು ವಿದ್ಯಾರ್ಥಿ ಗಳು ಮತ್ತವರ ಹೆತ್ತವರಿಂದ ಶಾಲಾ ಆವರಣಕ್ಕೆ ಇನ್ನು ಮುಂದೆ ಬರುವುದಿಲ್ಲ ಎಂಬುದಾಗಿ ಫೆ.10ರಂದು ಮುಚ್ಚಳಿಕೆ ಪತ್ರ ಬರೆಯಿಸಿಕೊಂಡಿದ್ದರು.

ಅದಾದ ಬಳಿಕ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸತತ ಕಿರುಕುಳ, ಮಾನಸಿಕ ಹಿಂಸೆ ಮುಂದುವರಿದಿತ್ತು. ಹಾಗಾಗಿ ಕೆಲವು ವಿದ್ಯಾರ್ಥಿಗಳು ಭಯಭೀತರಾಗಿ ಕಳೆದ ಮೂರು ವಾರಗಳಿಂದ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಈ ನಡುವೆ ಮಾ.20ರಿಂದ ಅಂತಿಮ ಪರೀಕ್ಷೆ ಆರಂಭವಾಗು ತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಪೋಷಕರು ಆತಂಕಗೊಂಡಿದ್ದರು. ಅಲ್ಲದೆ ಪರೀಕ್ಷೆ ಬರೆಯಲು ಇಬ್ಬರು ವಿದ್ಯಾರ್ಥಿಗಳು ರಾಜ್ಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಕೊಂಬಾರಿನ ರಾಮಕೃಷ್ಣ ಹೊಳ್ಳಾರನ್ನು ಸಂಪರ್ಕಿಸಿದ್ದರು. ಅವರು ನೀಡಿದ ಸಲಹೆಯಂತೆ ಹೈಕೋರ್ಡ್‌ ನಲ್ಲಿ ಹಿರಿಯ ನ್ಯಾಯವಾದಿ ಕೆ.ಎನ್. ಪ್ರವೀಣ್ ಕುಮಾರ್ ಕೊಂಬಾರ್ ಅವರನ್ನು ಸಂಪರ್ಕಿಸಿ ಇಬ್ಬರು ವಿದ್ಯಾರ್ಥಿಗಳು ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಮಕ್ಕಳ ಪರ ಪ್ರವೀಣ್ ಕುಮಾರ್‌ರ ವಾದವನ್ನು ಆಲಿಸಿ ಪ್ರಕರಣದ ಗಂಭೀರತೆ ಮನಗಂಡು ಇಬ್ಬರು ವಿದ್ಯಾರ್ಥಿಗಳಿಗೆ ಮಾ.20ರಿಂದ 25ರವರೆಗೆ ಅಂತಿಮ ಪರೀಕ್ಷೆ ಬರೆಯಲು ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಹಾಗೂ ಪೋಷಕರನ್ನು ಶಾಲಾ ಆವರಣಕ್ಕೆ ನಿರ್ಬಂಧ ಹೇರದಂತೆ ಅತ್ತಿಬೆಲೆ ಪೊಲೀಸರಿಗೆ, ಶಾಲೆಯ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಿ ಮಹತ್ವದ ಆದೇಶ ನೀಡಿದೆ.

ಅಪರೂಪದ ಈ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ರಾಜ್ಯ ಸರಕಾರಕ್ಕೆ ತುರ್ತು ನೋಟಿಸ್ ಹೊರಡಿಸಿ ಪ್ರಕರಣದ ವಿಚಾರಣೆಯನ್ನು ಎ.8ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News