ಆಶ್ರಮವಾಸಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಮಾಜಿ ಸಚಿವ ರಮಾನಾಥ ರೈ

Update: 2023-09-13 14:40 GMT

ಪುತ್ತೂರು: ಮಾಜಿ ಸಚಿವ ಬಿ.ರಮಾನಾಥ ರೈ ಅವರ 72ನೇ ಹುಟ್ಟು ಹಬ್ಬವನ್ನು ಬುಧವಾರ ಪುತ್ತೂರು ನಗರದ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ನಡೆಸಿದರು. ಆಶ್ರಮದಲ್ಲಿನ ವಿಶೇಷ ಚೇತನರೊಂದಿಗೆ ಸಹಭೋಜನ ನಡೆಸಿ ತನ್ನ ಹುಟ್ಟು ಹಬ್ಬ ಆಚರಿಸಿದ ರಮಾನಾಥ ರೈ ಅವರು ನನ್ನ ರಾಜಕೀಯ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದು, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತಾ ಬಂದಿದ್ದೇನೆ. ಇಲ್ಲಿನ ಜನರು ನನಗೆ ನೀಡಿರುವ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದರು.

ಸಾರ್ವಜನಿಕ ಬದುಕಿನಲ್ಲಿ ಪ್ರೀತಿ ವಿಶ್ವಾಸ ಹಂಚಿಕೊಳ್ಳುವುದು ಸಹಜ. ಪ್ರೀತಿಯ ಸಂಬಂಧಗಳು ಎಲ್ಲಕ್ಕೂ ಮಿಗಿಲಾಗಿದೆ. ಅತೀ ಸಣ್ಣ ಪ್ರಾಯದಲ್ಲಿ ರಾಜಕೀಯ ಪ್ರವೇಶ ಮಾಡಿರುವ ನನಗೆ ಕಾಂಗ್ರೆಸ್ ಪಕ್ಷವು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 9 ಭಾರಿ ಸ್ಪರ್ಧಿಸಲು ಅವಕಾಶ ನೀಡಿದೆ. ಅಲ್ಲದೆ ಸರ್ಕಾರದಲ್ಲಿ ಮಂತ್ರಿಯನ್ನಾಗಿಯೂ ಮಾಡಿದೆ. ಈ ನಡುವೆ ಸೋಲು ಗೆಲುವು ಪಡೆದುಕೊಂಡಿದ್ದು, ಇವೆರಡನ್ನೂ ಸಮಾನವಾಗಿ ಸ್ವೀಕರಿಸಿದ್ದೇನೆ. ಸೋಲಿನಿಂದ ಕುಗ್ಗದೆ ನಿರಂತರ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷವು ನನ್ನ ಧರ್ಮವಾಗಿದೆ. ಅದನ್ನು ಎಂದಿಗೂ ಬಿಡಲಾರೆ. ಆ ಧರ್ಮದ ಎಲ್ಲರೂ ಪಕ್ಷದ ಗೆಲುವಿಗೆ ಒಟ್ಟಾಗಿ ಶ್ರಮಿಸಬೇಕು ಎಂದ ಅವರು ನಾನು ಸಾರಿಗೆ ಸಚಿವನಾಗಿದ್ದಾಗ ಪುತ್ತೂರಿಗೆ ಕೆಎಸ್ಸಾರ್ಟಿಸಿ ಡಿಪೋ ತಂದಿದ್ದೆ. ಅರಣ್ಯ ಸಚಿವನಾಗಿದ್ದಾಗ ಬೀರಮಲೆ ಬೆಟ್ಟದಲ್ಲಿ ಸಾಲು ಮರದ ತಿಮ್ಮಕ್ಕ ಪಾರ್ಕ್ ನಿರ್ಮಿಸಿದ್ದೇನೆ ಎಂದು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ರಮಾನಾಥ ರೈ ಅವರ ಹುಟ್ಟು ಹಬ್ಬದ ಅಂಗವಾಗಿ ಪಕ್ಷದ ಕಾರ್ಯಕರ್ತ ರೋಶನ್ ರೈ ಬನ್ನೂರು ಅವರ ನೇತೃತ್ವದಲ್ಲಿ ಪ್ರಜ್ಞಾ ಆಶ್ರಮದಲ್ಲಿ ನೂತನವಾಗಿ ಅಳವಡಿಸಲಾಗಿದ್ದ ರೂ. 50 ಸಾವಿರ ವೆಚ್ಚದ ಇಂಟರ್‍ಲಾಕ್‍ನ್ನು ರಮಾನಾಥ ರೈ ಅವರು ಉದ್ಘಾಟಿಸಿದರು ಹಾಗೂ ಆಶ್ರಮದಲ್ಲಿರುವ ವಿಶೇಷ ಚೇತನರಿಗೆ ಹೊಸ ಬಟ್ಟೆ ವಿತರಿಸಿದರು.

ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಶುಭ ಹಾರೈಸಿದರು. ಕೆಪಿಸಿಸಿ ಸದಸ್ಯರಾದ ಎಂ.ಎಸ್. ಮಹಮ್ಮದ್, ಡಾ. ರಘು ಬೆಳ್ಳಿಪ್ಪಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News