ಎಫ್‌ಐಆರ್ ದಾಖಲಿಸುವಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ತಾರತಮ್ಯ: ಮುನೀರ್ ಕಾಟಿಪಳ್ಳ ಆರೋಪ

ಮುನೀರ್ ಕಾಟಿಪಳ್ಳ
ಮಂಗಳೂರು: ಧರಣಿ, ಪ್ರತಿಭಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಾರತಮ್ಯ ಎಸಗಿದ್ದಾರೆ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ನಗರ ಪೊಲೀಸ್ ಕಮೀಷನರ್‌ಗೆ ಬಿಜೆಪಿ, ಸಂಘಪರಿವಾರವೆಂದರೆ ಅಚ್ಚುಮೆಚ್ಚು. ಎಡಪಕ್ಷಗಳು, ಜನಪರ ಸಂಘಟನೆಗಳಿಗೆ ಪ್ರತಿಭಟನೆ ನಡೆಸದಂತೆ ನೋಟೀಸು ಜಾರಿ ಮಾಡುವ ಕಮಿಷನರ್ ಬಿಜೆಪಿ ಪರಿವಾರ ನಿಬಂಧನೆಗಳನ್ನು ಉಲ್ಲಂಘಿಸು ವುದು ಖಾತ್ರಿಯಿದ್ದರೂ ಕೂಡ ಅನುಮತಿ ಪತ್ರ ನೀಡುತ್ತಾರೆ. ಮೊನ್ನೆ ಧರಣಿಯ ಸಂದರ್ಭ ಮುಖ್ಯರಸ್ತೆಯನ್ನು ಅಕ್ರಮಿಸಿ, ಆ್ಯಂಬುಲೆನ್ಸ್ ಸಂಚರಿಸಲೂ ತಡೆ ಒಡ್ಡಿದವರ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾದ ಬಳಿಕ ಕಾರ್ಯ ಕ್ರಮದ ಆಯೋಜಕರಾದ ಸಂಘಪರಿವಾರದವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಪ್ರಕಟನೆ ಹೊರಡಿಸಿದ್ದರು. ಆದರೆ ಈ ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರೇ ಇಲ್ಲ. ಕೇವಲ ಹಿಂದೂ ಜನಜಾಗೃತಿ ಸಮಿತಿ ಎಂದು ಉಲ್ಲೇಖಿಸಲಾ ಗಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ಯಾಲೆಸ್ತೀನ್‌ನಲ್ಲಿ ಕದನ ವಿರಾಮಕ್ಕೆ ಆಗ್ರಹಿಸಿ ಎಡಪಕ್ಷಗಳು ಆಯೋಜಿಸಿದ್ದ ಸಾಂಕೇತಿಕ ಪ್ರತಿಭಟನೆಯ ವಿರುದ್ಧ ಎಫ್‌ಐಆರ್ ದಾಖಲಿಸಿದಾಗ ಸಿಪಿಐ, ಸಿಪಿಎಂ ಪಕ್ಷದ 11 ಮಂದಿ ನಾಯಕರುಗಳನ್ನು ಆರೋಪಿಗಳನ್ನಾಗಿ ಹೆಸರಿಸಲಾ ಗಿತ್ತು. ಹೆದ್ದಾರಿ ಗುಂಡಿ ಮುಚ್ಚಲು ಆಗ್ರಹಿಸಿ ನಡೆದ ಶಾಂತಿಯುತ ಧರಣಿಯ ವಿರುದ್ಧ ಹಾಕಲಾದ ಎಫ್‌ಐಆರ್ ನಲ್ಲಿ ಹೋರಾಟ ಸಮಿತಿಯ ಸಂಚಾಲಕನಾದ ನನ್ನನ್ನು ಮಾತ್ರ ಆರೋಪಿಯನ್ನಾಗಿ ಮಾಡಲಾಗಿತ್ತು. ಬುಧವಾರ ಸಂಘ ಪರಿವಾರ ನಡೆಸಿದ ಪ್ರತಿಭಟನೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಶರಣ್ ಪಂಪ್‌ವೆಲ್ ಮತ್ತು ಶಾಸಕ ವೇದವ್ಯಾಸ್ ಕಾಮತ್ ಸಹಿತ ಹಲವು ಶಾಸಕರು, ಮಂಗಳೂರು ಮೇಯರ್, ಮಾಜಿ ಮೇಯರ್‌ಗಳು ಪಾಲ್ಗೊಂಡಿದ್ದರು. ಶಾಸಕ ವೇದವ್ಯಾಸ ಕಾಮತ್ ಡಿಸಿಪಿ ಜೊತೆ ವಾಗ್ವಾದ ನಡೆಸುತ್ತಿರುವ ದೃಶ್ಯ ಮಾಧ್ಯಮಗಳ ವೀಡಿಯೋಗಳಲ್ಲಿ ಬಯಲಾಗಿದೆ. ಆದರೂ ಯಾರೊಬ್ಬರ ಹೆಸರನ್ನೂ ಆರೋಪಿಗಳಾಗಿ ಕಾಣಿಸದೆ ಎಫ್ ಐ ಆರ್ ಹಾಕಲಾಗಿದೆ. ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಅಷ್ಟೆ. ಮಂಗಳೂರಿನಲ್ಲಿರುವುದು ಕಾಂಗ್ರೆಸ್ ಸರಕಾರವೊ, ಬಿಜೆಪಿ ಸರಕಾರವೊ ? ಸ್ಪೀಕರ್ ಖಾದರ್ ಈಗ ಏನನ್ನುತ್ತಾರೆ ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.