ಎಸ್‌ಐಟಿ ಪ್ರಥಮ ವರದಿಯಲ್ಲಿ ಕೋವಿಡ್ ಅವ್ಯವಹಾರ ಸ್ಪಷ್ಟ ಉಲ್ಲೇಖ: ದಿನೇಶ್ ಗುಂಡೂರಾವ್

Update: 2024-11-16 13:22 GMT

ಮಂಗಳೂರು : ರಾಜ್ಯದಲ್ಲಿ ಹಿಂದಿನ ಸರಕಾರದ ಆಡಳಿತದಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ಕುರಿತು ನ್ಯಾ.ಡಿಕುನ್ಹಾ ಪ್ರಥಮ ವರದಿ ನೀಡಿದ್ದಾರೆ. ಎರಡನೇ ಮತ್ತು ಕೊನೆಯ ವರದಿ ನೀಡಬೇಕಾಗಿದೆ. ಪ್ರಥಮ ವರದಿಯಲ್ಲಿ ಕೋವಿಡ್ ಸಂದರ್ಭದ ಅವ್ಯವಹಾರಗಳು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಇದರಲ್ಲಿ ದಾರಿ ತಪ್ಪಿಸುವ ತಂತ್ರ ಏನಿಲ್ಲ. ನಿಯಮಬದ್ದವಾಗಿ ಕಾನೂನು ಪ್ರಕಾರ ತನಿಖೆ ಮುಂದುವರಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೋವಿಡ್ ಹಗರಣದ ಕುರಿತು ತನಿಖೆಗೆ ಎಸ್.ಐ.ಟಿ ರಚನೆ ಕುರಿತಂತೆ ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ ಅವರು, ಇದರಲ್ಲಿ ರಾಜಕೀಯ ದುರುದ್ದೇಶ ಏನಿಲ್ಲ. ಜಸ್ಟೀಸ್ ಡಿಕೂನ್ಹಾ ಅತ್ಯಂತ ಪ್ರಾಮಾಣಿಕ ನ್ಯಾಯಾಧೀಶರು. ಪ್ರಹ್ಲಾದ್ ಜೋಷಿ ಹೇಳಿಕೆಗೂ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಪ್ರಹ್ಲಾದ್ ಜೋಷಿಯವರಿಗೆ ಇದರಿಂದ ಸಮಸ್ಯೆ ಆಗಿದೆ. ಜೋಷಿ ವಿರುದ್ಧ ಪ್ರಕರಣ ದಾಖಲಾದರೆ ಅವರು ಜೈಲು ಸೇರುವ ಸಂದರ್ಭ ಬರಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈ ವರದಿಯಲ್ಲಿರುವುದು ನಾವು ಹುಟ್ಟು ಹಾಕಿರೋದಲ್ಲ. ನಮ್ಮ ಇಲಾಖೆಯಲ್ಲಿರುವ ಇರುವ ಮಾಹಿತಿ ಸಂಗ್ರಹಿಸಿ ತನಿಖೆ ಮಾಡಿ ಅದರ ವರದಿ ನೀಡಿದ್ದಾರೆ. ಇದು ಐಟಿ, ಇ.ಡಿ ತರ ರಾಜಕೀಯ ಪ್ರೇರಿತ ಅಲ್ಲ. ಇ.ಡಿ, ಐ.ಟಿ ಗೆ ಖಾಲಿ ವಿರೋಧ ಪಕ್ಷ ಮಾತ್ರ ಕಾಣುತ್ತದೆ ಎಂದವರು ಪ್ರತಿಕ್ರಿಯಿಸಿದರು.

ಕುಮಾರ ಸ್ವಾಮಿ ಬಗ್ಗೆ ಸಚಿವ ಝಮೀರ್ ಅವರ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಅವರು ಕೆಲವೊಮ್ಮೆ ಆಡು ಭಾಷೆಯಲ್ಲಿ ಮಾತನಾಡುತ್ತಾರೆ. ಸಾರ್ವಜನಿಕವಾಗಿ ಈ ರೀತಿ ಮಾತನಾಡಬಾರದು. ಝಮೀರ್ ಮಾತು ಚುನಾವಣೆ ಮೇಲೆ ಯಾವ ಪರಿಣಾಮ ಬೀರುವುದೋ ಗೊತ್ತಿಲ್ಲ. ನಾವು ಗೆಲ್ಲುತ್ತೇವೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News