ಭಾಷೆಗಳ ನಡುವೆ ಜಗಳ ಹುಟ್ಟಿಸುವುದು ಕೆಟ್ಟ ರಾಜಕಾರಣ: ಡಾ. ಪುರುಷೋತ್ತಮ ಬಿಳಿಮಲೆ

Update: 2024-11-16 15:32 GMT

ಮಂಜೇಶ್ವರ, ನ.16: ಬಹುಭಾಷಿಕ ಹಾಗೂ ಬಹು ಸಂಸ್ಕೃತಿಗಳ ಸಮುದಾಯದವರಾದ ದಕ್ಷಿಣ ಭಾರತೀಯರು ಪರಸ್ಪರ ಕಚ್ಚಾಡುವುದನ್ನು ಮುಂದುವರೆಸಿದಲ್ಲಿ ದೇಶ ಶೀಘ್ರವಾಗಿ ಹಿಂದಿಮಯವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಕೇರಳ ಮತ್ತು ಗೋವಾ ರಾಜ್ಯದ 149 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಂಜೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.

ಭಿನ್ನ ಭಾಷಿಕರ ನಡುವೆ ವೈಮನಸ್ಯವನ್ನು ಮೂಡಿಸುವ ಕೆಲಸವನ್ನು ತಮ್ಮ ಉಳಿವಿಗಾಗಿ ರಾಜಕಾರಣಿಗಳು ಮುಂದುವರೆ ಸುತ್ತಲೇ ಇದ್ದಾರೆ. ಇದು ಭಾಷೆಗಳ ಕಟ್ಟುವಿಕೆಗೆ ಮಾರಕವಾಗಿದೆ. ದಕ್ಷಿಣ ಭಾರತೀಯ ರಾಜ್ಯಗಳ ಭಾಷೆಗಳು ಹಾಗೂ ಹಿಂದಿ ಭಾಷೆಯ ಬೆಳವಣಿಗೆಯ ಇಂದಿನ ಗತಿಯನ್ನು ತುಲನೆ ಮಾಡಿದ್ದಲ್ಲಿ ಮತ್ತು ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಭಾಷೆಗಳು ಅವನತಿಯ ಕಡೆ ಮುಖ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಸಂವಿಧಾನವು ಭಾಷಿಕವಾಗಿ ದೇಶದ ಜನಕ್ಕೆ ಹಲವಾರು ಹಕ್ಕುಗಳನ್ನು ಕೊಟ್ಟಿದೆ. ರಾಜ್ಯ ಸರಕಾರಗಳು ಗಡಿಭಾಗಗಳಲ್ಲಿ ವಾಸಿಸುವ ಭಾಷಾ ಅಲ್ಪಸಂಖ್ಯಾತರುಗಳ ಹಿತ ಕಾಯಲು ಪ್ರತ್ಯೇಕ ಭಾಷಾ ನಿರ್ದೇಶಕರನ್ನು ನೇಮಿಸಬೇಕಿದೆ. ಹಲವು ರಾಜ್ಯಗಳು ಈ ಬಗ್ಗೆ ಉತ್ಸುಕವಾಗಿಲ್ಲ. ಸರಕಾರಗಳು ನಾಡಿನ ಅಲ್ಪಸಂಖ್ಯಾತ ಭಾಷೆಗಳ ಕುರಿತಂತೆ ಗೌರವ ಹೊಂದ ಬೇಕಾಗಿರುವುದು ಪ್ರಾಥಮಿಕ ಜವಾಬ್ದಾರಿಯಾಗಿದೆ. ಕರ್ನಾಟಕದ ಎಲ್ಲ ನೆರೆ ರಾಜ್ಯಗಳ ಸರಕಾರಗಳಿಗೆ ಸಂವಿಧಾನದತ್ತ ಅಧಿಕಾರದಂತೆ ಭಾಷಾ ನಿರ್ದೇಶಕರನ್ನು ನೇಮಿಸಬೇಕು ಎಂದು ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದರು.

ಒಂದು ಲಕ್ಷ ಎಂಬತ್ತು ಸಾವಿರ ಕೋಟಿ ರೂ.ಗಳ ಆಯವ್ಯಯ ಗಾತ್ರ ಹೊಂದಿರುವ ಕೇರಳ ರಾಜ್ಯ ಅಲ್ಲಿನ ಕನ್ನಡ ಶಾಲೆ ಗಳಿಗೆ ಕನ್ನಡ ಶಿಕ್ಷಕರನ್ನು ನೇಮಿಸದೆ ಇರುವುದು ಅಕ್ಷಮ್ಯ. ಅಲ್ಪಸಂಖ್ಯಾತ ಕನ್ನಡಿಗರ ಮೂಲಭೂತ ಹಕ್ಕನ್ನು ಕೇರಳ ಸರಕಾರ ಕಸಿದುಕೊಳ್ಳುತ್ತಿದೆ ಎಂದು ಆಪಾದಿಸಿದರು.

ಲೇಖಕಿ ಸಾಹಿತಿ ಡಾ.ಜ್ಯೋತಿ ಚೆಳ್ಯಾರು ಮಾತನಾಡಿ ಗಡಿನಾಡಿನ ಕನ್ನಡಿಗರು ಹಿಂದಿನಿಂದಲೂ ಸೃಜನಶೀಲ ಸಾಹಿತ್ಯ ವಲಯದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಈ ಪರಂಪರೆ ಇಂದಿಗೂ ಮುಂದುವರಿದಿದೆ. ಕನ್ನಡ ಭಾಷೆಯ ವಿದ್ಯಾಭ್ಯಾಸ ಇಂತಹ ಪರಂಪರೆಗೆ ನಾಂದಿಯಾಗಿದೆ. ಗಡಿನಾಡಿನ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದಲ್ಲಿಯೂ ಕನ್ನಡವನ್ನು ಓದಬೇಕು ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಸ್ವಾಗತಿಸಿದರು. ಮಂಜೇಶ್ವರ ಬ್ಲಾಕ್ ಪಂಚಾ ಯತ್ ಅಧ್ಯಕ್ಷೆ ಶಮೀನಾ ಇಕ್ಬಾಲ್, ಜಿಪಂ ಸದಸ್ಯ ಗೋಲ್ಡನ್ ರೆಹಮಾನ್, ಮಂಜೇಶ್ವರ ಗ್ರಾಪಂ ಅಧ್ಯಕ್ಷ ಜೀನ್ ಲವೀನಾ ಮೊಂತೆರೋ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ಗುರುರಾಜ್, ಯಾಕೂಬ್ ಖಾದರ್ ಗುಲ್ವಾಡಿ ಮತ್ತಿತರರು ಉಪಸ್ಥಿತರಿದ್ದರು.

ನಾವು ಮಲೆಯಾಳಿಗರಲ್ಲ, ಕೇರಳದ ಕನ್ನಡಿಗರು: ಶಾಸಕ ಎ.ಕೆ.ಎಂ.ಅಶ್ರಫ್

ದ.ಕ.ಜಿಲ್ಲೆಯ ಭಾಗವಾಗಿದ್ದ ಕಾಸರಗೋಡು ಪ್ರದೇಶ 1956ರಲ್ಲಿ ಭಾಷಾವಾರು ಪ್ರಾಂತಗಳ ರಚನೆಯ ಸಂದರ್ಭ ಕೇರಳದ ಭಾಗವಾಯಿತು. ಆದರೆ ಇಲ್ಲಿನ ಕನ್ನಡಿಗರು ಕನ್ನಡ ಭಾಷೆಯನ್ನು ಮರೆಯದೆ ತಲೆತಲಾಂತರಗಳಿಂದ ಅದನ್ನು ಪೋಷಿಸಿಕೊಂಡು ಬರುತ್ತಿರುವುದು ಕನ್ನಡ ಪ್ರೇಮವನ್ನು ಅಭಿವ್ಯಕ್ತಿಸುತ್ತದೆ. ನಾವು ಮಲೆಯಾಳಿಗಳೆಂದು ಗುರುತಿಸಿಕೊಳ್ಳು ವುದಕ್ಕಿಂತ ಕೇರಳದ ಕನ್ನಡಿಗರೆಂದು ಗುರುತಿಸಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್ ಹೇಳಿದರು.

ಕರ್ನಾಟಕ ಸರಕಾರದ ಈ ರೀತಿಯ ಸ್ಪಂದನಾಶೀಲ ಕಾರ್ಯಕ್ರಮಗಳು ಗಡಿನಾಡಿನ ಕನ್ನಡಿಗರಲ್ಲಿ ಹೊಸ ವಿಶ್ವಾಸವನ್ನು ಮೂಡಿಸುತ್ತವೆ ಎಂದ ಎ.ಕೆ.ಎಂ.ಅಶ್ರಫ್, ಪ್ರಾಧಿಕಾರದ ಈ ಪ್ರಯತ್ನ ಶ್ಲಾಘನೀಯ ಎಂದರು.

ತಾನು ಕೇರಳದ ವಿಧಾನಸಭೆಗೆ ಆಯ್ಕೆಯಾದಾಗ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದೆ. ಮೊದಲ ಭಾಷಣದಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳ ಕವನ ವಾಚನವನ್ನು ಮಾಡಿದ್ದೆ. ಕಾಸರಗೋಡು ಕನ್ನಡಿಗರ ಹಿತಕ್ಕೆ ತಾನೂ ಬದ್ಧ ಎಂದು ಅಶ್ರಫ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News