ದೀರ್ಘಕಾಲದ ಕಾಯಿಲೆಗಳಿಗೆ ಹೋಮಿಯೋಪಥಿ ಪರಿಹಾರ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ‘ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಒಂದು ಪರ್ಯಾಯ ವ್ಯವಸ್ಥೆಯಾಗಿರುವುದರಿಂದ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಉಪಯುಕ್ತವಾಗಿದೆ.ದೀರ್ಘಕಾಲದ ಕಾಯಿಲೆಗಳನ್ನು ಹೋಮಿಯೋಪಥಿ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಗುರುವಾರ ನಗರದ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆರಂಭಗೊಂಡ ಎರಡು ದಿನಗಳ 27ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ ‘ರೂಬಿಕಾನ್ -2024’ ಉದ್ಘಾಟಿಸಿ ಮಾತನಾಡಿದರು.
ಹೋಮಿಯೋಪಥಿ ಜರ್ಮನಿ ಮೂಲದ ಚಿಕಿತ್ಸಾ ಪದ್ಧತಿಯಾಗಿರುವ ಹೋಮಿಯೊಪಥಿ ಸುಮಾರು 300 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ್ದು, ಈ ಚಿಕಿತ್ಸಾ ಪದ್ಧತಿಯು ಒಂದು ಪರ್ಯಾಯ ವ್ಯವಸ್ಥೆಯಾಗಿರುವುದರಿಂದ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಉಪಯುಕ್ತವಾಗಿದೆ ಎಂದು ನುಡಿದರು.
ಪ್ರತಿಯೊಂದು ಕ್ಷೇತ್ರವೂ ಬೆಳೆಯುತ್ತಲೇ ಇರಬೇಕು ಮತ್ತು ವಿಕಸನಗೊಳ್ಳುತ್ತಿರಬೇಕು. ಆದ್ದರಿಂದ ಕಲಿಕಾ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಅಧ್ಯಯನಗಳನ್ನು ಮಾಡುವುದು ಅವಶ್ಯಕ, ಇದರಿಂದ ಸಮುದಾಯಕ್ಕೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಾನಾ ರೀತಿಯ ರೋಗಗಳಿಗೆ ಸೂಕ್ತ ಚಿಕತ್ಸೆಯನ್ನು ಕಂಡು ಹುಡುಕುವುದು ಆರೋಗ್ಯ ರಂಗದಲ್ಲಿ ತೊಡಗಿಸಿಕೊಂಡ ತಜ್ಞರ ಜವಾಬ್ದಾರಿಯಾಗಿದೆ ಎಂದರು.
ಹೋಮಿಯೋಪಥಿ ಸಮ್ಮೇಳವನ್ನು ಫಾದರ್ ಮುಲ್ಲರ್ ಬಹಳ ಅದ್ಬುತವಾಗಿ ಸಮ್ಮೇಳನವನ್ನು ಆಯೋಜಿದೆ ಎಂದು ಸಚಿವರು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಕಾಲೇಜಿನ ವಾರ್ಷಿಕ ಮ್ಯಾಗಜಿನ್ ‘ಪಯೋನಿಯರ್ 2024’ ಮತ್ತು ‘ರಿಸರ್ಚ್ ಬುಲೆಟಿನ್ 2024’ನ್ನು ಅನಾವರಣಗೊಳಿಸಿದರು.
ಹೊಸದಿಲ್ಲಿಯ ರಾಷ್ಟ್ರೀಯ ಹೋಮಿಯೋಪಥಿ ಆಯೋಗದ ಅಧ್ಯಕ್ಷ ಡಾ. ಅನಿಲ್ ಖುರಾನಾ ಮುಖ್ಯ ಅತಿಥಿಯಾಗಿ ಮಾತನಾಡಿ ಜಾಗತಿಕವಾಗಿ 60,000ಕ್ಕೂ ಹೆಚ್ಚು ನೋಂದಾಯಿತ ವೈದ್ಯರೊಂದಿಗೆ ಅತಿ ದೊಡ್ಡ ಮೂಲ ಸೌಕರ್ಯ ಗಳನ್ನೊಳಗೊಂಡ ಹೋಮಿಯೋಪಥಿ ಕೋರ್ಸ್ ಪಠ್ಯಕ್ರಮವು ಇತರ ವೈದ್ಯಕೀಯ ವ್ಯವಸ್ಥೆಗಳಿಗೆ ಸಮನಾಗಿರುತ್ತದೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಮಹತ್ತರ ಕೊಡುಗೆಯನ್ನು ನೀಡಿದೆ’ ಎಂದು ಹೇಳಿದರು.
ಭಾರತದಲ್ಲಿ ಹೋಮಿಯೋಪಥಿ ವೈದ್ಯಕೀಯ ಪದ್ಧತಿಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಇದನ್ನು ಮುಂದುವರಿಸುವಲ್ಲಿ ಸಂಸ್ಥೆಯ ಸಮರ್ಪಣೆಯನ್ನು ಶ್ಲಾಘಿಸಿದರು.
ಕಂಕನಾಡಿಯ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಇದರ ನಿರ್ದೇಶಕ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೋಮಿಯೊಪಥಿ ರಾಷ್ಟ್ರೀಯ ಆಯೋಗ, ಮೌಲ್ಯಮಾಪನ ಮತ್ತು ಹೋಮಿಯೋಪಥಿ ರೇಟಿಂಗ್‌ನಲ್ಲಿ ಫಾದರ್ ಮುಲ್ಲರ್ ಹೋಮಿಯೊಪಥಿ ಮೆಡಿಕಲ್ ಕಾಲೇಜು ಎ+ ರೇಟಿಂಗ್ ಅನ್ನು ಸಾಧಿಸಿದೆ. ರಾಜ್ಯದಲ್ಲಿ ಐದು ಕಾಲೇಜುಗಳು ಮಾತ್ರ ಇಂತಹ ಸಾಧನೆ ಮಾಡಿದೆ ಎಂದರು.
ಆರೋಗ್ಯ ಕ್ಷೇತ್ರಕ್ಕೆ ಇನ್ನಷ್ಟು ವೈದ್ಯರು ಅಗತ್ಯ. ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ವಹಿಸುವ ಆಕಾಂಕ್ಷಿಗಳ ಬೇಡಿಕೆಯನ್ನು ಈಡೇರಿಸಲು ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಹೋಮಿಯೋಪಥಿ ಕೌನ್ಸಿಲ್ ಚಿಂತನೆ ನಡೆಸುವಂತೆ ಒತ್ತಾಯಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಸತತ 27 ವಾರ್ಷಿಕ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ಇದೊಂದು ದಾಖಲೆಯಾಗಿದೆ ಎಂದರು.
‘ಪಯೋನಿಯರ್ 2024’ ಇದರ ಸ್ಟಾಫ್ ಎಡಿಟರ್ ಡಾ. ಜೆಸಿಂತಾ ಮೊಂತೇರೊ ಮತ್ತು ರಿಸರ್ಚ್ ಸೈಂಟಿಫಿಕ್ ಕಮಿಟಿಯ ಸಂಯೋಜಕರಾದ ಡಾ. ಕೆ. ಜಾನ್ ಪಾಲ್ ಇಂದು ಬಿಡುಗಡೆಗೊಂಡ ನೆನಪಿನ ಸಂಚಿಕೆಯ ಬಗ್ಗೆ ಮಾತನಾಡಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಾಸ್ಯುಟಿಕಲ್ ಡಿವಿಜನ್‌ನ ಆಡಳಿತಾಧಿಕಾರಿ ವಂದನೀಯ ನೆಲ್ಸನ್ ಡಿ. ಪಾಯಸ್, ಫಾದರ್‌ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂದನೀಯ ಅಶ್ವಿನ್ ಎಲ್. ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ, ವಿಲ್ಮಾ ಮೀರಾ ಡಿ ಸೋಜ, ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ ಮತ್ತು ಹೋಮಿಯೋಪಥಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ರಂಜನ್ ಸಿ.ಬ್ರಿಟ್ಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ಫಾವುಸ್ತಿನ್ ಎಲ್. ಲೋಬೊ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಇ.ಎಸ್.ಜೆ ಪ್ರಭು ಕಿರಣ್ ವಂದಿಸಿದರು.
ಡಾ. ದೀಪಾ ಪಾಯಸ್ ಮತ್ತು ಡಾ. ಮನೀಶ್ ಕುಮಾರ್ ತಿವಾರಿ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದಲ್ಲಿ ಮುಂಬೈನ ಪ್ರೆಡಿಕ್ಟಿವ್ ಹೋಮಿಯೋಪಥಿ ಸಂಸ್ಥ್ಥೆಯ ಆಡಳಿತ ನಿರ್ದೇಶಕ ಡಾ. ಅಂಬರಿಶ್ ವಿಜಯಕರ್ , ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮನೋವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮಿಯೋಪಥಿ ಕೋಲ್ಕತಾದ ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ. ಕುಮಾರವೆಲ್ ವಿ. ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಿದ್ದರು.