ಚುನಾವಣೆಯಲ್ಲಿ ಮಿಶ್ರ ಪ್ರತಿಕ್ರಿಯೆ, ಪ್ರತಿಫಲ ಸಿಕ್ಕಿದೆ: ಬಿ.ಕೆ.ಹರಿಪ್ರಸಾದ್
ಮಂಗಳೂರು, ನ.24: ಎರಡು ರಾಜ್ಯಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆ ಮತ್ತು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ಉಪಚುನಾವಣೆಯಲ್ಲಿ ಮಿಶ್ರ ಪ್ರತಿಕ್ರಿಯೆ ಹಾಗೂ ಮಿಶ್ರಫಲ ಸಿಕ್ಕಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮೂರರಲ್ಲೂ ಕಾಂಗ್ರೆಸ್ ಜಯಿಸಿದೆ. ಕಾಂಗ್ರೆಸ್ ತನ್ನ ಕೈಯಲ್ಲಿದ್ದ ಒಂದನ್ನು ಉಳಿಸಿಕೊಂಡು, ವಿಪಕ್ಷದ ಹಿಡಿತದಲ್ಲಿದ್ದ ಎರಡು ಕ್ಷೇತ್ರಗಳಲ್ಲೂ ಗೆದ್ದುಕೊಂಡು ಅಭೂತಪೂರ್ವ ಯಶಸ್ಸು ಗಳಿಸಿದೆ. ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು.
ಚುನಾವಣೆಯ ಮೊದಲು ಕರ್ನಾಟಕದಲ್ಲಿ ವಿಪಕ್ಷಗಳು ಹಲವಾರು ಷಡ್ಯಂತ್ರ , ಕುತಂತ್ರಗಳನ್ನು , ಅಪಪ್ರಚಾರ, ಸುಳ್ಳು ಸುದ್ದಿಯನ್ನು ಹರಡಿ ಕಾಂಗ್ರೆಸ್‌ನ ಜನಪ್ರಿಯತೆಯನ್ನು ಕುಗ್ಗಿಸಲು ಪ್ರಯತ್ನ ಮಾಡಿರುವುದನ್ನು ಜನಸಾಮಾನ್ಯರು ನೋಡಿದ್ದಾರೆ. ಮೊದಲನೆಯದಾಗಿ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಬಗ್ಗೆ, ವಕ್ಫ್ ಭ್ರಷ್ಟಾಚಾರದ ಬಗ್ಗೆ ಇಲ್ಲ ಸಲ್ಲದ ಆರೋಪ, ಭ್ರಷ್ಟಾಚಾರದ ಆರೋಪ, ಈ.ಡಿ, ಸಿಬಿಐ, ಐಟಿ ಸಂಸ್ಥೆ ಗಳ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್‌ನ್ನು ಮಣಿಸಲು ವಿಪಕ್ಷಗಳು ಸತತ ಪ್ರಯತ್ನ ಮಾಡಿದರೂ, ಜನತೆ ಅವರನ್ನು ತಿರಸ್ಕರಿಸಿ ಒಳ್ಳೆಯ ತೀರ್ಪನ್ನು ನೀಡಿದ್ದಾರೆ. ಹಣಬಲವನ್ನು ತಿರಸ್ಕರಿಸಿ ರಾಜ್ಯದ ಸರಕಾರದ ಪಂಚ ಗ್ಯಾರಂಟಿ ಮತ್ತು ಉತ್ತಮ ಆಡಳಿತವನ್ನು ಬೆಂಬಲಿಸಿ ದ್ದಾರೆ. ಇದಕ್ಕಾಗಿ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಮತ್ತು ವೈಯಕ್ತಿಕವಾಗಿ ಕರ್ನಾಟಕದ ಜನತೆಯನ್ನು ಅಭಿನಂದಿಸುತ್ತೇನೆ ಎಂದರು.
ಉಪಚುನಾವಣೆಯಲ್ಲಿ ಸಿಕ್ಕಿರುವ ಯಶಸ್ಸು ಸರಕಾರದ ವರ್ಚಸ್ಸನ್ನು ಹೆಚ್ಚಿಸಲಿದೆಯೇ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ತುಂಬಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಿದೆ ಮತ್ತು ರಾಜ್ಯದ ಜನರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕೋಮುಗಲಭೆಗಳನ್ನು ಹತ್ತಿಕ್ಕಲಾಗಿದೆ. ಶಾಂತಿಯನ್ನು ಮರುಸ್ಥಾಪಿಸುವ ಮೂಲಕ ರಾಜ್ಯ ಮತ್ತೆ ‘ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುವಂತಾಗಿದೆ ಎಂದು ಅವರು ಹೇಳಿದರು.
ಉಪಚುನಾವಣೆಯಲ್ಲಿ ವಿಪಕ್ಷಗಳಿಗೆ ಎಲ್ಲ ರೀತಿಯಲ್ಲೂ ತೀವ್ರ ಪೈಪೋಟಿ ನೀಡಿದ್ದೇವೆ. ನಾವು ಹಣಬಲಕ್ಕಿಂತ ಜನರ ಬಲದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ್ದೆವು. ವಿಪಕ್ಷಗಳು ಹಣಬಲ ಸೇರಿದಂತೆ ಎಲ್ಲ ಬಲಗಳನ್ನು ಉಪಯೋಗಿಸಿದೆ. ಆದರೆ ಮತದಾರರು ವಿಪಕ್ಷಗಳ ಎಲ್ಲ ತಂತ್ರಗಳನ್ನು ತಿರಸ್ಕರಿಸಿ ಅಧಿಕಾರರೂಢ ಕಾಂಗ್ರೆಸ್‌ನ ಕೈ ಹಿಡಿದರು ಎಂದು ಹೇಳಿದರು.
ಬಿಜೆಪಿಯಲ್ಲಿ ಒಂದೇ ಕುಟುಂಬದ 10 ಮಂದಿ: ಕರ್ನಾಟಕದಲ್ಲಿ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರರಿ ಬ್ಬರು ಸೋತಿರುವ ಬಗ್ಗೆ ಮತ್ತು ಕುಟುಂಬ ರಾಜಕಾರಣಕ್ಕೆ ಹಿನ್ನಡೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಕಾಂಗ್ರೆಸ್ ವಿರುದ್ಧ ಬಿಜೆಪಿ ಕುಟುಂಬ ರಾಜಕಾರಣದ ಆರೋಪ ಮಾಡುತ್ತಿದೆ. ಆದರೆ ಕುಟುಂಬ ರಾಜಕಾರಣಕ್ಕೆ ಬಿಜೆಪಿಯೇ ದೊಡ್ಡ ಉದಾಹರಣೆಯಾಗಿದೆ. ಬಿಜೆಪಿಗೆ ಅದೊಂದು ಫ್ಯಾಶನ್ ಆಗಿಬಿಟ್ಟಿದೆ.ಕಾಂಗ್ರೆಸ್ ಪಕ್ಷಕ್ಕಿಂತ ಡಬಲ್ ಕುಟುಂಬ ರಾಜಕಾರಣ, ಅಪ್ಪ -ಅಮ್ಮ ರಾಜಕಾರಣ, ಅಮ್ಮ-ಮಗ ರಾಜಕಾರಣ ಇವೆಲ್ಲ ಇರುವುದು ಬಿಜೆಪಿಯಲ್ಲಿ. ಜ್ಯೋತಿರಾದಿತ್ಯ ಸಿಂಧ್ಯಾ ವಿಚಾರವನ್ನು ನೋಡಿ. ಅವರ ಅತ್ತೆ ರಾಜಸ್ಥಾನದಲ್ಲಿ ಸಿಎಂ , ಇನ್ನೊಂದು ಅತ್ತೆ ಮಧ್ಯಪ್ರದೇಶದಲ್ಲಿ ಎಂಪಿ . ಅಮಿತಾ ಶಾ ಮಗ ಬಿಸಿಸಿಐ ಅಧ್ಯಕ್ಷ. ಅವರು ತೆಂಡುಲ್ಕರ್‌ಗಿಂತ ಚೆನ್ನಾಗಿ ಬ್ಯಾಟ್ ಮಾಡುತ್ತಾರೆ. ಬಿಜೆಪಿಯಲ್ಲಿ ಒಂದೇ ಕುಟುಂಬದ ಹತ್ತು ಮಂದಿ ಚುನಾಯಿತ ಸದಸ್ಯರನ್ನು ಹೊಂದಿರುವ ಉದಾಹರಣೆಗಳಿವೆ. ಇಷ್ಟೆಲ್ಲ ಇದ್ದರೂ ಕಾಂಗ್ರೆಸ್‌ನ ಮೇಲೆ ಗೂಬೆ ಕೂರಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮವಾಗಿದೆ ಪ್ರಜಾಪ್ರಭುತ್ವದ ಸೌಂದರ್ಯವೆಂದರೆ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಆಗಿದೆ ಎಂದು ಅವರು ಹೇಳಿದರು.
*ಕಳೆದ ಬಾರಿಗಿಂತ ಹೆಚ್ಚು ಸ್ಥಾನ:ರಾಷ್ಟ್ರದ ವಿಚಾರವನ್ನು ನೋಡಿದರೆ ಜಾರ್ಖಂಡ್‌ನಲ್ಲಿ ಜೆಎಂಎಂ ,ಕಾಂಗ್ರೆಸ್, ಆರ್‌ಜೆಡಿ ಮತ್ತು ಸಿಪಿಐಎಂಎಲ್ ಮೈತ್ರಿಕೂಟ ‘ ಇಂಡಿಯಾ’ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಯಶಸ್ಸು ಸಾಧಿಸಿದೆ. ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಅಲ್ಲಿರುವ 81 ಸ್ಥಾನಗಳ ಪೈಕಿ ಕಾಂಗ್ರೆಸ್ 16, ಜೆಎಂಎಂ 34, ಆರ್‌ಜೆಡಿ 4, ಸಿಪಿಐಎಂಎಲ್ 2ರಲ್ಲಿ ಜಯಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಒಟ್ಟು 56 ಸ್ಥಾನಗಳನ್ನು ಪಡೆದಿದೆ. 2019ರಲ್ಲಿ ಮೈತ್ರಿಕೂಟ 48 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎಂದು ಜಾರ್ಖಂಡ್‌ನ ಚುನಾವಣಾ ಉಸ್ತುವಾರಿ ಆಗಿದ್ದ ಬಿ.ಕೆ.ಹರಿಪ್ರಸಾದ್ ವಿವರಿಸಿದರು.
ಜಾರ್ಖಂಡ್‌ನ ಮುಖ್ಯ ಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಸರಕಾರ ನಾನಾ ಸವಾಲುಗಳ ನಡುವೆ ಐದು ವರ್ಷಗಳನ್ನು ಪೂರ್ಣಗೊಳಿಸಿಸುವಲ್ಲಿ ಯಶಸ್ವಿಯಾಗಿತ್ತು. ಸಿಎಂ ಹೇಮಂತ್ ಸೊರೆನ್‌ಗೆ ಅಧಿಕಾರದ ಐದು ವರ್ಷಗಳಲ್ಲಿ ಎರಡು ವರ್ಷ ಕೊರೋನ ಸಮಸ್ಯೆ, ಒಂದು ವರ್ಷ ಅವರಿಗೆ ಜೈಲುವಾಸ , ಉಳಿದ ಎರಡು ವರ್ಷಗಳಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದರು.ಅಲ್ಲಿಯೂ ಏಳು ಗ್ಯಾರಂಟಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ‘ಮಯಾ ಸಮ್ಮಾನ್’ ಸರಕಾರಕ್ಕೆ ಯಶಸ್ಸು ತಂದು ಕೊಟ್ಟಿದೆ. ನುಸುಳುಕೋರರ ವಿಚಾರ ದಲ್ಲಿ ವಿಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಅಬ್ಬರದ ಅಪ್ರಚಾರ ನಡೆಸಿತ್ತು.ಜಾರ್ಖಂಡ್‌ಗೆ ನುಸುಳುಕೋರರು ಬಂದಿದ್ದಾರೆ ಎಂದು ನಮ್ಮ ದೇಶದ ಗಡಿಕಾಯುವ ಸೈನಿಕರಿಗೆ ಬಿಜೆಪಿ ಅವಮಾನ ಮಾಡಿತ್ತು. ಆದರೆ ಅಲ್ಲಿನ ಜನತೆ ವಿಪಕ್ಷಗಳ ಅಪ್ರಚಾರವನ್ನು ತಿರಸ್ಕರಿಸಿದ್ದಾರೆ. ಜಾರ್ಖಂಡ್‌ನಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ ಎಂದರು.
*ಮಹಾರಾಷ್ಟ್ರದಲ್ಲಿ ಹಣದ ಹೊಳೆ:ಮಹಾರಾಷ್ಟ್ರದಲ್ಲಿ ಹಣದ ಹೊಳೆ ಹರಿದಿದೆ. ಕಂಟೈನರ್‌ನಲ್ಲಿ ದುಡ್ಡು ಬಂದಿದೆ. ನನ್ನ 50 ವರ್ಷಗಳ ರಾಜಕಾರಣದಲ್ಲಿ ಇಂತಹ ಚುನಾವಣೆಯನ್ನು ನೋಡಿಲ್ಲ. ತೂಕ ಮಾಡಿ ಹಣ ತಂದು ಹಂಚಲಾಗಿದೆ. ಹೀಗಾಗಿ ಅಲ್ಲಿ ಇಂಡಿಯಾ ಮೈತ್ರಿ ಕೂಟಕ್ಕೆ ಹಿನ್ನಡೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಹರಿಪ್ರಸಾದ್ ಉತ್ತರಿಸಿದರು.
ಮರಾಠರು, ಅಲ್ಪಸಂಖ್ಯಾತರು, ದಲಿತರು ಪ್ರಾಬಲ್ಯವಿರುವಲ್ಲಿ ಮಹಾಯುತಿ ಕೂಟ ಗೆದ್ದಿರುವ ವಿಚಾರದ ಬಗ್ಗೆ ಸಂಶಯ ಮೂಡಿದೆ ಎಂದರು.
*ಸಿಎಂಗೆ ಬಿಟ್ಟ ವಿಚಾರ: ಸಚಿವ ಸಂಪುಟ ಪುನಾರಚನೆ ಕುರಿತು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ಅಧಿಕೃತವಾಗಿ ನನ್ನಿಂದ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಹರಿಪ್ರಸಾದ್ ವಿವರಿಸಿದರು.
ಸುದ್ದಿ ಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆಆರ್,ಲೋಬೊ, ಪಕ್ಷದ ಧುರೀಣರಾದ ಪದ್ಮರಾಜ್ ಆರ್ ಪೂಜಾರಿ, ಶಶಿಧರ ಹೆಗ್ಡೆ, ಸಾರಿಕಾ ಪೂಜಾರಿ, ಟಿಕೆ ಸುಧೀರ್, ಮಿಥುನ್ ರೈ,ಲುಕ್ಮಾನ್ ಬಂಟ್ವಾಳ, ವಿಕಾಸ್ ಶೆಟ್ಟಿ, ಜಿತೇಂದ್ರ ಸುವರ್ಣ, ಚಿತ್ತರಂಜನ್ ಶೆಟ್ಟಿ, ನವೀನ್ ಡಿ ಸೋಜ, ನಿತ್ಯಾನಂದ ಶೆಟ್ಟಿ , ಶರೀಫ್ ದೇರಳಕಟ್ಟೆ, ಪದ್ಮನಾಭ ಅಮೀನ್ ಉಪಸ್ಥಿತರಿದ್ದರು.