ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಸಾಲೆ ಮೇಲ್ಮನೆಯಲ್ಲಿ ಪ್ರತಿಭಟನೆ
ಮಂಗಳೂರು, ನ.26: ಘನ ವಾಹನ ಸಂಚಾರಕ್ಕೆ ನಿಷೇಧಿಸಲಾದ ಉಳಾಯಿಬೆಟ್ಟು ಕಿರು ಸೇತುವೆಗೆ ಪರ್ಯಾಯವಾಗಿ ಮಣ್ಣಿನ ತಾತ್ಕಾಲಿಕ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಉಳಾಯಿಬೆಟ್ಟು, ಪೆರ್ಮಂಕಿ ಹಾಗೂ ಆಸುಪಾಸಿನ ಜನರು ಸಾಲೆ ಮೇಲ್ಮನೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಿರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ 6 ತಿಂಗಳಾಗುತ್ತ ಬಂದರೂ ಕೂಡ ದ.ಕ. ಜಿಲ್ಲಾಡಳಿತ ಈವರೆಗೆ ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಕಿರು ಸೇತುವೆಯ ಬಳಿ ಮಣ್ಣಿನ ತಾತ್ಕಾಲಿಕ ರಸ್ತೆ ನಿರ್ಮಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೂ ಈ ಬಗ್ಗೆ ಪಿಡಬ್ಲ್ಯೂಡಿ ಸೂಕ್ತ ಕ್ರಮಕೈಗೊಂಡಿಲ್ಲ. ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷರ ನೇತೃ ತ್ವದ ನಿಯೋಗವು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ಪಿಡಬ್ಲ್ಯೂಡಿ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದ ಕಾರಣ ಉಳಾಯಿಬೆಟ್ಟು- ಪೆರ್ಮಂಕಿ ನಾಗರಿಕರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ಹರಿಕೇಶ್ ಶೆಟ್ಟಿ ಮಾತನಾಡಿ ಕಿರು ಸೇತುವೆಯಲ್ಲಿ ಘನ ವಾಹನ ನಿಷೇಧಿಸಲಾಗಿದ್ದರೂ, ಸೇತುವೆಗೆ ಅಳವಡಿಸಲಾದ ಕಮಾನು ಮುರಿಯಲಾಗಿದೆ. ಮೂರು ಯೂನಿಟ್ ಸರಕು ಹೊತ್ತಿರುವ ಘನ ವಾಹನಗಳು ನಿರಂತರ ಓಡಾಡುತ್ತಿವೆ. ಕೇವಲ 25-30 ಮಂದಿ ನಾಗರಿಕರು ಪ್ರಯಾಣಿಸುವ ಬಸ್‌ಗಳಿಗೆ ನಿಷೇಧ ಎಂದಾದರೆ ಘನ ವಾಹನ ನಿಷೇಧಕ್ಕೆ ಯಾವ ಮಾನದಂಡ ಅಳವಡಿಸಲಾಗಿದೆ? ಡಿಸೆಂಬರ್ 1ರೊಳಗೆ ಜಿಲ್ಲಾಡಳಿತದಿಂದ ಸೂಕ್ತ ಉತ್ತರ ಸಿಗದಿದ್ದಲ್ಲಿ ಡಿ.2ರಂದು ಬೆಳಗ್ಗೆ 9:30ಕ್ಕೆ ರಾಷ್ಟ್ರೀಯ ಹೆದ್ದಾರಿ 169ರ ಪರಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಉಳಾಯಿಬೆಟ್ಟು ಗ್ರಾಪಂ ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಗ್ರಾಪಂ ಮಾಜಿ ಸದಸ್ಯೆ ಶಾರದಾ, ಪ್ರಮುಖರಾದ ಇಸ್ಮಾಯಿಲ್, ಸುದರ್ಶನ ಶೆಟ್ಟಿ, ಶರೀಫ್ ಉಳಾಯಿಬೆಟ್ಟು ಮತ್ತಿತರರು ಪಾಲ್ಗೊಂಡಿದ್ದರು. ಗುರುಪುರ ಹೋಬಳಿ ನಾಡ ಕಚೇರಿಯ ಉಪ ತಹಶೀಲ್ದಾರ್ ಸ್ಟೀಫನ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.