ಚುನಾವಣಾ ಬಾಂಡ್ ಅಕ್ರಮಗಳ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ: ರಮಾನಾಥ ರೈ ಆಗ್ರಹ
ಮಂಗಳೂರು, ಮಾ.16: ಚುನಾವಣಾ ಬಾಂಡ್ ಅಕ್ರಮಗಳ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಐ.ಟಿ, ಇ.ಡಿ.ಗಳನ್ನು ದುರ್ಬಳಕೆ ಮಾಡಲಾಗಿದೆ. ಪಾಕಿಸ್ತಾನ ಮೂಲದ ಕಂಪೆನಿಗಳಿಂದಲೂ ಬಿಜೆಪಿ ಚುನಾವಣಾ ಬಾಂಡ್ ಸಂಗ್ರಹಿಸಿದೆ. ಇದುವರೆಗಿನ ಮಾಹಿತಿ ಪ್ರಕಾರ ಚುನಾವಣಾ ಬಾಂಡ್ ಗಳಲ್ಲಿ ಶೇ.50 ಬಿಜೆಪಿ ಪಡೆದಿದೆ. ಕಾಂಗ್ರೆಸ್ ಪಾಲು ಕೇವಲ 11 ಶೇ. ಮಾತ್ರ. ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರದ ನೋಟ್ ಬ್ಯಾನ್ ಪ್ರಕರಣ ಇತರ ದೇಶದಲ್ಲಿ ನಡೆದಿದ್ದರೆ ಯಾವತ್ತೋ ಬಿಜೆಪಿ ಸರಕಾರ ಪತನವಾಗುತ್ತಿತ್ತು. ಬ್ಯಾಂಕ್ ವಿಲೀನ ಪ್ರಕ್ರೀಯೆ ಕೂಡಾ ಒಂದು ಹಗರಣ ಎಂದು ಆರೋಪಿಸಿದರು.
15ರಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಗೆಲುವು
ದೇಶದಲ್ಲಿ ಬಿಜೆಪಿಯ ಕಳೆದ ಎರಡು ಅವಧಿಯ ಆಡಳಿತವನ್ನು ಅವಲೋಕಿಸಿದಾಗ ದೇಶದ ಅಭಿವೃದ್ಧಿಯ ಕುಂಠಿತದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಪರಿಣಾಮವಾಗಿ ಕರಾವಳಿಯಲ್ಲೂ ಬಿಜೆಪಿ ವಿರೋಧಿ ಅಲೆ ಇದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯದಲ್ಲಿ ಈ ಬಾರಿ 15ರಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಲೋಕಸಭಾ ಸದಸ್ಯರು ಜಯ ಗಳಿಸಲಿದ್ದಾರೆ ಎಂದು ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಸಾಮಾಜಿಕ ನ್ಯಾಯ, ಬಡವರ, ಮಹಿಳೆಯರ, ರೈತರ ಪರವಾದ ಸರಕಾರಿ ಯೋಜನೆಗಳನ್ನು ಹಮ್ಮಿಕೊಂಡಿತ್ತು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರು ನೆಮ್ಮದಿಯ ಉಸಿರಾಡುವಂತಾಗಿದೆ. ಆದರೆ ಬಿಜೆಪಿ ಶ್ರೀಮಂತರ ಕೋಟ್ಯಂತರ ರೂಪಾಯಿ ಸಾಲಮನ್ನಾ ಮಾಡುವ ಮೂಲಕ ಯಾರ ಪರ ಎನ್ನುವುದನ್ನು ತೋರಿಸಿದೆ.ರೈತರ ಸಾಲ ಮನ್ನಾ ಬೆಲೆ ಇಳಿಸುವ ಬಗ್ಗೆ ಚಿಂತನೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರ ಗ್ಯಾರಂಟಿ ಘೋಷಣೆ ಮಾಡಿದರೆ ದೀಪಾವಳಿ, ಕರ್ನಾಟಕ ದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಘೋಷಣೆ ಮಾಡಿದಾಗ ದಿವಾಳಿ ಎಂದು ಬಿಜೆಪಿ ಜನರನ್ನು ವಂಚಿಸುತ್ತಿದೆ. ದೇಶದಲ್ಲಿ ರಫೇಲ್ ಹಗರಣ ನಡೆದಾಗಲೂ ಜಂಟಿ ಸಂಸತ್ ಸಮಿತಿ ರಚನೆ ಮಾಡದೆ ಈ ಬಗ್ಗೆ ತನಿಖೆ ನಡೆಸಿಲ್ಲ. ಆಧಾರ್ ಬಗ್ಗೆ ಟೀಕಿಸಿದವರು ಈಗ ಎಲ್ಲದಕ್ಕೂ ಆಧಾರ್ ಕಡ್ಡಾಯ ಎನ್ನುತ್ತಿದ್ದಾರೆ. ಕಪ್ಪು ಹಣ ತರುತ್ತೇವೆ ಎಂದವರು ಕಪ್ಪು ಹಣ ಹೆಚ್ಚು ಹೆಚ್ಚು ಸಂಗ್ರಹಿಸುತ್ತಲೇ ಹೋದರು. ನೀಡಿದ ಭರವಸೆ ಈಡೇರಿಸಿಲ್ಲ ಎಂದು ಟೀಕಿಸಿದ ರೈ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಿಗೆ ಟಿಕೇಟ್ ನೀಡದೆ ಇರುವುದು ಇಲ್ಲಿನ ಅಭಿವೃದ್ಧಿ ಕುಂಠಿತವಾಗಿರುವುದಕ್ಕೆ ಪ್ರಮುಖ ಸಾಕ್ಷಿ ಎಂದು ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಶಾಹುಲ್ ಹಮೀದ್, ಶುಭೋದಯ ಆಳ್ವ, ಶಶಿಧರ ಹೆಗ್ಡೆ, ಹರಿನಾಥ್, ಅಪ್ಪಿ, ಭರತೇಶ್, ವಿಕಾಸ್ ಶೆಟ್ಟಿ, ರಫೀಕ್ , ಶಬೀರ್ ಸಿದ್ದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.