ಸುರತ್ಕಲ್ | ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ: ಇಬ್ಬರಿಗೆ ಗಂಭೀರ ಗಾಯ
ಸುರತ್ಕಲ್: ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಅಡುಗೆ ಮನೆಯ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಗಾಯಗೊಂಡವರು ಮನೆಯ ಯಜಮಾನ ವಾಮನ ಅವರ ಪತ್ನಿ ವಸಂತಿ (68) ಮತ್ತು ವಾಮನ ಅವರ ಅಕ್ಕ ಪುಷ್ಪಾ (72) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಗ್ಯಾಸ್ ಸೋರಿಕೆಯಾಗಿರುವುದು ಗಮನಕ್ಕೆ ಬಾರದೆ ವಸಂತಿ ಮಧ್ಯಾಹ್ನ ಅಡುಗೆ ಕೋಣೆಗೆ ಹೋಗಿ ಸ್ಟವ್‌ಗೆ ಬೆಂಕಿ ಹಚ್ಚುತ್ತಿದ್ದಂತೆ ಏಕಾಏಕಿ ಬೆಂಕಿ ವ್ಯಾಪಿಸಿಕೊಂಡಿತು. ಅವರು ಸಹಾಯಕ್ಕಾಗಿ ಕೂಗಿದಾಗ ಹೊರಗೆ ಬಟ್ಟೆ ಒಗೆಯುತ್ತಿದ್ದ ಪುಷ್ಪಾ ಧಾವಿಸಿ ಬಂದು ಹೊರಗಿನಿಂದ ಬಾಗಿಲು ತೆರೆಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಅವರಿಗೂ ಚಾಚಿತು. ಅವರಿಬ್ಬರ ಕಿರುಚಾಟ ಕೇಳಿ ಅಕ್ಕಪಕ್ಕದವರು ಧಾವಿಸಿ ಇಬ್ಬರನ್ನೂ ಹೊರಗೆಳೆದು ಬೆಂಕಿ ನಂದಿಸಲು ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಸಂತಿ ಧರಿಸಿದ್ದ ಸೀರೆ ಅವರ ಮೈಗೆ ಅಂಟಿಕೊಂಡಿತ್ತು. ಬಳಿಕ ಸೀರೆಯನ್ನು ಕತ್ತರಿಸಿ ತೆಗೆಯಬೇಕಾಯಿತು. ಅದಾಗಲೇ ಕೈ, ಮುಖದ ಭಾಗ ಮತ್ತಿತರ ಕಡೆ ಬೆಂಕಿ ತಗುಲಿತ್ತು ಎಂದು ನೆರವಿಗೆ ಧಾವಿಸಿದವರು ತಿಳಿಸಿದ್ದಾರೆ.
ಇಂಡೇನ್ ಗ್ಯಾಸ್ ಏಜೆನ್ಸಿಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗ್ಯಾಸ್ ಪೈಪ್, ರೆಗ್ಯುಲೇಟರ್, ಸಿಲಿಂಡರ್ ತಪಾಸಣೆ ನಡೆಸಿದ್ದು, ರೆಗ್ಯುಲೇಟರ್ ಸಮೀಪ ಪೈಪ್‌ನಿಂದ ಅನಿಲ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸುರತ್ಕಲ್ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರು ಕೂಡ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮನೆ ಯಜಮಾನ ವಾಮನ ಅಯ್ಯಪ್ಪ ವೃತಧಾರಿಯಾಗಿದ್ದು, ಮನೆ ಬಳಿಯಿರುವ ಸಣ್ಣ ಅಡುಗೆ ಕೋಣೆಯಲ್ಲಿ ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದರು. ಕೋಣೆಯ ಒಳಗೆ ಮತ್ತೆರಡು ಅನಿಲ ಜಾಡಿಗಳಿದ್ದವು. ಆದರೆ ಅದಕ್ಕೆ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ದುರಂತದಲ್ಲಿ ಮನೆಯ ಛಾವಣಿಯ ಶೀಟ್ ಹಾರಿಹೋಗಿ ಸ್ಫೋಟದಂತಹ ಶಬ್ದ ಕೇಳಿಸಿದೆ. ಮನೆಯ ಹೊರಭಾಗಕ್ಕೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತ್ತು. ಘಟನೆಯಿಂದ ಅಪಾರ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.