ಬಾಳೆಪುಣಿ ಕೊರಗರ ಕಾಲನಿಗೆ ಊರಿನ ತ್ಯಾಜ್ಯ!
ಮಂಗಳೂರು: “ಬಂಟ್ವಾಳ ತಾಲೂಕು, ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುದಕಟ್ಟೆ ಕೊರಗರ ಕಾಲನಿಯ ಆಸು ಪಾಸಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಗೂ ಸಾರ್ವಜನಿಕರು ವಾಸಿಸುವ ಮನೆಗಳ ಪಕ್ಕದಲ್ಲಿ ಬೇರೆ ಬೇರೆ ಕಡೆಗಳಿಂದ ತ್ಯಾಜ್ಯಗಳನ್ನು ಶೇಖರಿಸಿ 20 ಅಡಿ ಆಳದ ಹೊಂಡದಲ್ಲಿ ಹಾಕುತ್ತಿದ್ದು ಇದರಿಂದಾಗಿ ಪರಿಸರದಲ್ಲಿ ದುರ್ವಾಸನೆ ಹರಡಿ ಮಾರಕ ರೋಗಗಳಾದ ಡೆಂಗ್ಯೂ ಮಲೇರಿಯಾ ಮುಂತಾದ ರೋಗಗಳಿಗೆ ಇಲ್ಲಿಯ ಮಂದಿ ತುತ್ತಾಗುತ್ತಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ“ ಎಂದು ಕರ್ನಾಟಕ ದಲಿತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಎಸ್.ಪಿ. ಆನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
”ಈ ವ್ಯಾಪ್ತಿಯಲ್ಲಿ 12 ಕೊರಗರ ಮನೆ , 50 ಮೇಲ್ವರ್ಗದ ಕುಟುಂಬಗಳು 50 ಕ್ಕೂ ಅಧಿಕ ವರ್ಷ ಗಳಿಂದ ವಾಸಿಸುತ್ತಿದ್ದಾರೆ. ಸದ್ರಿ ಹೊಂಡದ ಬದಿಯಲ್ಲಿಯೇ ಪಂಚಾಯತ್ ವತಿಯಿಂದ ಕೊರೆದ ಕೊಳವೆ ಬಾವಿ, ಸರಕಾರದ ವತಿಯಿಂದ ತೋಡಿಸಲಾದ 2 ನೀರಿನ ಬಾವಿಗಳಿವೆ. ಈ ತ್ಯಾಜ್ಯ ಸಂಗ್ರಹದ ಕಲ್ಮಶ ನೀರಿನ ಒರತೆ ಬಾವಿಗಳ ಹಾಗೂ ಕೊಳವೆ ಬಾವಿಗಳ ನೀರಿಗೆ ಸೇರುತ್ತಿದ್ದು, ಆ ನೀರನ್ನೇ ಈ ವಠಾರದಲ್ಲಿ ವಾಸಿಸುವ ಮಂದಿ ಕುಡಿಯಲು, ಅಡುಗೆ ಮಾಡಲು ಬಳಸುವಂತ ಪರಿಸ್ಥಿತಿ ಇದೆ.
ಅದೂ ಅಲ್ಲದೆ ತ್ಯಾಜ್ಯದ ಪಕ್ಕದಲ್ಲಿಯೇ ಕಾರ್ಯಾಚರಿಸುತ್ತಿರುವ ಅಂಗನವಾಡಿಯಲ್ಲಿ ಕಲಿಯುವ 15 ಮಂದಿ ಪುಟ್ಟ ಪುಟ್ಟ ಮಕ್ಕಳು ಕೂಡಾ ಈ ಪರಿಸರದಲ್ಲಿಯೇ ಇದ್ದಾರೆ. ಇದರ ಸಮೀಪವೇ ಶಾಲೆ ಇದ್ದು ಇಡೀ ಬಾಳೆಪುಣಿ ವಠಾರವೇ ದುರ್ಗಂಧಮಯವಾಗಿದ್ದು ಕುಡಿಯಲು ಶುದ್ಧ ನೀರಿಲ್ಲದೆ, ಉಸಿರಾಡಲು ಶುದ್ಧ ಗಾಳಿ ಇಲ್ಲದೆ ಬದುಕುತ್ತಿರುವ ಇಲ್ಲಿಯ ಜನರ, ಮಕ್ಕಳ, ಮಹಿಳೆಯರ ಬದುಕೇ ನರಕ ಸದೃಶ್ಯವಾಗಿದೆ. ಸದ್ರಿ ಗ್ರಾಮದಲ್ಲಿ ಸರಕಾರದ ಇತರ ಖಾಲಿ ಜಾಗ ಕೂಡಾ ಇದ್ದು ಸುಮಾರು 10 ಎಕ್ರೆ ಜಮೀನನ್ನು ಸರಕಾರದ ವಿವಿಧ ಯೋಜನೆಗೆ ಬಳಸಲು ಕಾದಿರಿಸಲಾಗಿದೆ. ತ್ಯಾಜ್ಯದ ಪಕ್ಕದಲ್ಲಿಯೇ ಕೊರಗಜ್ಜನ ದೈವಸ್ಥಾನ ಹಾಗೂ ಇನ್ನಿತರ ಕೆಲವು ದೇವಸ್ಥಾನಗಳಿವೆ. ಇದರ ಬಗ್ಗೆ ಬಾಳೆಪುಣಿ ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದರೂ ತ್ಯಾಜ್ಯ ಹಾಕುವ ಗುಂಡಿಯನ್ನು ಸ್ಥಳಾಂತರಿಸಲು ವಿನಂತಿಸಿದರೂ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಂಡಿಲ್ಲ“ ಎಂದು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಅನಿಲ್ ಕುಮಾರ್, ಯಶವಂತ್ ಉಪಸ್ಥಿತರಿದ್ದರು.