ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್. ದಿನೇಶ್ ಲೋಕಾಯುಕ್ತ ಬಲೆಗೆ

Update: 2024-12-19 13:11 GMT

ಜಿ.ಎಸ್. ದಿನೇಶ್

ಮುಲ್ಕಿ: ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು 4 ಲಕ್ಷ ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್. ದಿನೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ದೂರುದಾರರ ಅಜ್ಜಿ ಮೃತಪಟ್ಟಿದ್ದ ಕಾರಣ ಅವರ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆಗೊಳಿಸುವಂತೆ ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ್‌ ಅವರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಅಲ್ಲಿಂದ ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್. ದಿನೇಶ್ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದರು.

ಈ ಸಂಬಂಧ ದೂರುದಾರರು ಇತ್ತೀಚೆಗೆ ಕಂದಾಯ ನಿರೀಕ್ಷಕರ ಕಚೇರಿಗೆ ಹೋಗಿ ವಿಚಾರಿಸಿದಾಗ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್, ಆಸ್ತಿಗೆ ಸಂಬಂಧಿಸಿದ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು 4 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ದೂರುದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇಂದು ಕಾರ್ಯಾಚರಣೆಗೆ ಇಳಿದ ಲೋಕಾಯುಕ್ತ ಪೊಲೀಸರು ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಅವರು ಸುರತ್ಕಲ್‌ ಜಂಕ್ಷನ್‌ ಬಳಿ ಸಂತ್ರಸ್ತರಿಂದ 4 ಲಕ್ಷ ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಎಂ.ಎ. ನಟರಾಜ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ., ಸುರೇಶ್ ಕುಮಾರ್ ಪಿ., ಚಂದ್ರಶೇಖರ್ ಕೆ.ಎನ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News