ಡಿ.21: ಕೆಪಿಟಿ ಹಳೇ ವಿದ್ಯಾರ್ಥಿ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ರಜತ ಸಮ್ಮಿಲನ
ಮಂಗಳೂರು, ಡಿ.19: ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಹಳೆ ವಿದ್ಯಾರ್ಥಿ ಸಂಘ(ರಿ) ಇದರ ಬೆಳ್ಳಿ ಹಬ್ಬದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ ‘ರಜತ ಸಮ್ಮಿಲನ’ ಡಿ.21ರಂದು ಸಾಯಂಕಾಲ 4ಕ್ಕೆ ಕೆಪಿಟಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಸಿ.ದೇವಾನಂದ ಅವರು ಈ ಕಾರ್ಯಕ್ರಮದಲ್ಲಿ 600ಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಕರ್ನಾಟಕ ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಂಶುಪಾಲ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಟಿ ಹಳೇ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಇ.ಎಮ್.ಜೋಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೆಪಿಟಿ ನಾಡಿನ ಹೆಮ್ಮೆಯ ಸಂಸ್ಥೆಯಾಗಿದ್ದು, ಇದೀಗ 75ನೇ ವರ್ಷದ ಸಂಭ್ರಮದಲ್ಲಿದೆ. ಇದೇ ವೇಳೆ ಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘ ಬೆಳ್ಳಿಹಬ್ಬದ ವರ್ಷಾಚರಣೆಯ ಸಂಭ್ರಮದಲ್ಲಿದೆ. ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡಬಿದಿರೆಯ ಡಾ.ಎಂ.ಮೋಹನ್ ಆಳ್ವ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕೆಪಿಟಿಯ ಹಿರಿಯ ವಿದ್ಯಾರ್ಥಿಯಾಗಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಇದೀಗ ಹಳೇ ವಿದ್ಯಾರ್ಥಿ ಸಂಘಕ್ಕೆ ಕೆಪಿಟಿಯಲ್ಲಿ ಶಿಕ್ಷಣ ಪಡೆದವರನ್ನು ಸದಸ್ಯರಾಗಿ ಸೇರಿಸಿಕೊಂಡು ಸಂಘವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದರು.
ಕೆಪಿಟಿಯಲ್ಲಿ ಈ ವರೆಗೆ 45 ಸಾವಿರ ಮಂದಿ ಶಿಕ್ಷಣ ಪಡೆದಿದ್ದಾರೆ. ಕೆಪಿಟಿಯಲ್ಲಿ ಶಿಕ್ಷಣ ಪಡೆದ ಎಲ್ಲರಿಗೂ ಸೂಕ್ತ ಉದ್ಯೋಗ ದೊರೆಯುತ್ತದೆ. ಇಲ್ಲಿ ಕಲಿತ ಯಾರೂ ಕೂಡಾ ನಿರುದ್ಯೋಗಿ ಆಗಿ ಉಳಿಯುವುದಿಲ್ಲ ಎಂದು ಹೇಳಿದರು.
ಹಳೆವಿದ್ಯಾರ್ಥಿ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಸುಸಜ್ಜಿತವಾದ ಸಭಾಭವನ ನಿರ್ಮಿಸಿಕೊಡುವ ಯೋಜನೆ ಇದೆ ಎಂದು ಎಂ.ಸಿ.ದೇವಾನಂದ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಉದಯ ಅಮೀನ್ ಮತ್ತು ಕಾರ್ಯದರ್ಶಿ ಪ್ರಿಯಾ ಪಿಂಟೊ ಉಪಸ್ಥಿತರಿದ್ದರು.