ಮಂಗಳೂರು ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ ಸ್ಥಾನಮಾನಕ್ಕೆ ಆಗ್ರಹ: ಸಂಸದ ಬ್ರಿಜೇಶ್ ಚೌಟ ಮನವಿ

Update: 2024-12-19 15:55 GMT

ಮಂಗಳೂರು: ದ್ವಿಪಕ್ಷೀಯ ವಾಯು ಸೇವಾ ಒಪ್ಪಂದಗಳಡಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ ಸ್ಥಾನಮಾನ ಒದಗಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ರಾಮ್‌ಮೋಹನ್ ನಾಯ್ಡು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದ್ದರೂ, ಇನ್ನೂ ಕೊಲ್ಲಿ ರಾಷ್ಟ್ರಗಳ ನಡುವೆ ಓಡಾಟ ನಡೆಸುವ ವಿಮಾನಗಳನ್ನು ನಿರ್ವಹಿಸುವ ಸೇವೆಗಳಿಗೆ ಸೀಮಿತವಾಗಿದೆ. ಆಧುನಿಕ ಮೂಲಸೌಕರ್ಯ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಮತ್ತು ಸರಕು ದಟ್ಟಣೆಯ ಹೊರತಾಗಿಯೂ, ಸಾಕಷ್ಟು ನೇರ ಅಂತಾರಾಷ್ಟ್ರೀಯ ಸಂಪರ್ಕದ ಕೊರತೆಯು ಅದರ ಸಾಮರ್ಥ್ಯವನ್ನು ಮಿತಿಗೊಳಿಸಿದೆ ಎಂದು ಬ್ರಿಜೇಶ್ ಚೌಟ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಮಿತಿಯನ್ನು ದಾಟಿ ಲಕ್ಷದ್ವೀಪ, ಮಧ್ಯಪ್ರಾಚ್ಯ, ಯುರೋಪಿಯನ್ ದೇಶಗಳು ಸಹಿತ ಜಗತ್ತಿನ ವಿವಿಧೆಡೆಗಳಿಗೆ ಕರಾವಳಿ ಯಿಂದ ವಿಮಾನ ಸಂಪರ್ಕ ಒದಗಿಸಲು ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ ಸ್ಥಾನಮಾನ ಅಗತ್ಯವಾಗಿದೆ. ದ.ಕ. ಜಿಲ್ಲೆಯು ಮೀನುಗಾರಿಕೆ ಉತ್ಪನ್ನಗಳ ರಫ್ತು, ಅಡಿಕೆ ಮತ್ತು ಗೋಡಂಬಿ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್‌ ಗಳಂತಹ ಕೈಗಾರಿಕೆಗಳಿಗೆ ಕೇಂದ್ರವಾಗಿದೆ. ಅವುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆ ಆವಶ್ಯಕವಾಗಿದೆ. ವಿವಿಧ ದೇಶಗಳ ನಡುವೆ ವಿಮಾನ ಸಂಪರ್ಕ ಹೆಚ್ಚಿಸುವುದರಿಂದ ವ್ಯಾಪಾರ ಸುಗಮಗೊಳ್ಳುತ್ತದೆ. ಲಾಜಿಸ್ಟಿಕಲ್ ವೆಚ್ಚಗಳನ್ನು ಕಡಿಮೆಯಾಗುತ್ತದೆ ಮತ್ತು ಇದು ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುತ್ತದೆ ಎಂದು ಬ್ರಿಜೇಶ್ ಚೌಟ ವಿವರಿಸಿದ್ದಾರೆ.

ಕರಾವಳಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಪ್ರಾಚೀನ ಕಡಲತೀರಗಳು ಮತ್ತು ಪರಿಸರ ಪ್ರವಾಸೋದ್ಯಮವು ಅಂತರಾಷ್ಟ್ರೀಯ ಪ್ರವಾಸಿಗರಿಗೆ ಗಮನಾರ್ಹ ಆಕರ್ಷಣೆಯನ್ನು ಹೊಂದಿದೆ. ಸುಧಾರಿತ ನೇರ ವಾಯು ಸಂಪರ್ಕವು ಗಲ್ಫ್ ದೇಶಗಳು, ಯುರೋಪ್ ಮತ್ತು ಆಗ್ನೇಯ ಏಷ್ಯಾದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿ ಸುತ್ತದೆ ಮತ್ತು ಆತಿಥ್ಯ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಬ್ರಿಜೇಶ್ ಚೌಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡದ ಗಣನೀಯ ಸಂಖ್ಯೆಯ ಜನರು ಗಲ್ಫ್ ರಾಷ್ಟ್ರಗಳು ಮತ್ತು ಆಗ್ನೇಯ ಏಷ್ಯಾದಲ್ಲಿ ಕೆಲಸ ಮಾಡುತ್ತಾರೆ. ದುಬೈ, ಅಬುಧಾಬಿ ಮತ್ತು ದೋಹಾದಂತಹ ಸ್ಥಳಗಳಿಗೆ ನೇರ ವಿಮಾನಗಳು ಈ ಅನಿವಾಸಿ ಭಾರತೀಯರು (ಎನ್‌ಆರ್‌ಐಗಳು) ಮತ್ತು ಅವರ ಕುಟುಂಬಗಳಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಸಂಬಂಧಗಳನ್ನು ಬಲಪಡಿಸು ತ್ತದೆ ಮತ್ತು ಭೇಟಿಗಳ ಪುನರಾವರ್ತನೆಯನ್ನು ಉತ್ತೇಜಿಸುತ್ತದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನವೀಕರಿಸಿದ ಟರ್ಮಿನಲ್ ಸೇರಿದಂತೆ ಆಧುನಿಕ ಮೂಲಸೌಕರ್ಯ ಗಳೊಂದಿಗೆ ಸುಸಜ್ಜಿತವಾಗಿದೆ ಮತ್ತು ಹೆಚ್ಚಿದ ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಸರಕು ದಟ್ಟಣೆಯನ್ನು ನಿರ್ವಹಿ ಸುವ ಸಾಮರ್ಥ್ಯವನ್ನು ಹೊಂದಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣವು ನವ ಮಂಗಳೂರು ಬಂದರಿಗೆ ಸಮೀಪವಿದ್ದು, ಅಂತಾರಾಷ್ಟ್ರೀಯ ಸರಕು ಸಾಗಾಟ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಭಾರತದ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ಉದ್ದೇಶಗಳಿಗೆ ಪೂರಕವಾಗಿದೆ ಎಂದು ಬ್ರಿಜೇಶ್ ಚೌಟ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News