ಅಕ್ಷರ ದಾಸೋಹ ನೌಕರರ ಪ್ರತಿಭಟನಾ ಪ್ರದರ್ಶನ: ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಮಂಗಳೂರು: ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಯಂತೆ ಅಕ್ಷರ ದಾಸೋಹ ನೌಕರರ ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಗುರುವಾರ ನಗರದ ಮಿನಿವಿಧಾನ ಸೌಧದ ಬಳಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ ಅಕ್ಷರ ದಾಸೋಹ ನೌಕರರ ವೇತನ ವನ್ನು ರೂ.6000ಕ್ಕೆ ಏರಿಸುವಂತೆ ಆಗ್ರಹಿಸಿದರು.
ಕೇಂದ್ರ ಸರಕಾರವು ಕಳೆದ 2014ರಿಂದ ತನಗೆ ಜವಾಬ್ದಾರಿ ಇದ್ದರೂ ಈ ಯೋಜನೆಗೆ ಕಿಂಚಿತ್ತು ಹಣ ಬಿಡುಗಡೆ ಮಾಡಿಲ್ಲ. ಹಾಗೆ ಮಾಡಿದ್ದೇ ಆದಲ್ಲಿ ಈಗ ಬಿಸಿಯಾಟ ಕಾರ್ಮಿಕರಿಗೆ 10,000 ರೂ ಸಂಬಳ ಬರುತ್ತಿತ್ತು. ಯಾಕೆಂದರೆ ಈ ಯೋಜನೆಯ ಜವಾಬ್ದಾರಿ ಕೇಂದ್ರ ಸರಕಾರಕ್ಕೂ ಇದೆಯೆಂದು ವಿವರಿಸಿದರು.
ಕೇಂದ್ರ ಸರಕಾರ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ನೀತಿ ಸಂಹಿತೆಯಾಗಿ ಬದಲಾಯಿಸಿ ಮಾಲಕ ವರ್ಗದ ಹಿತಾಸಕ್ತಿಯನ್ನು ಕಾಪಾಡ ಹೊರಟಿದೆ. ಈ ಅಪಾಯಕಾರಿ ನೀತಿಗಳನ್ನು ಹಿಮ್ಮೆಟ್ಟಿಸಬೇಕಿದೆ ಎಂದು ಅವರು ಹೇಳಿದರು.
ಅಕ್ಷರದಾಸೋಹ ನೌಕರರು ಹೋರಾಟದಲ್ಲಿ ಇದ್ದಾರೆ. ವೇತನ ಏರಿಕೆ ಮಾಡಬೇಕು. ನಿವೃತ್ತರಾದ ನೌಕರರಿಗೆ ಇಡುಗಂಟು ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಸರಕಾರದ ಮುಂದಿಡುವ ಅಕ್ಷರದಾಸೋಹ ನೌಕರರ ವೇತನ ಮತ್ತು ಇನ್ನಿತರೆ ಬೇಡಿಕೆಗಳು ಈಡೇರದಿದ್ದಲ್ಲಿ ಫೆಬ್ರವರಿ ಯಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಬೆಂಗಳೂರು ಚಲೋ ನಡೆಸಲಾಗುವುದೆಂದು ಸಿಐಟಿಯು ಅಖಿಲ ಭಾರತ ಕಾರ್ಯಕಾರಿ ಸಮಿತಿಯ ಸದಸ್ಯ ವಸಂತ ಆಚಾರಿಯವರು ಎಚ್ಚರಿಕೆ ನೀಡಿದರು.
ಪ್ರತಿಭಟನಾಗಾರರನ್ನು ಉದ್ದೇಶಿಸಿ ಸಿಐಟಿಯು ಮುಂದಾಳುಗಳಾದ ಜಯಂತಿ ಬಿ ಶೆಟ್ಟಿ, ಪದ್ದಾವತಿ ಶೆಟ್ಟಿ ಮಾತನಾಡಿ ಸರಕಾರಗಳು ಕಾರ್ಮಿಕರ ಮೇಲೆ ನಡೆಸುವ ದಾಳಿಗಳನ್ನು ವಿವರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಭವ್ಯ ಕಳೆದ 24 ವರ್ಷಗಳಿಂದ ದುಡಿಯುತ್ತಿರುವ ಬಿಸಿಯೂಟ ಕಾರ್ಮಿಕರ ಕಷ್ಟ ಮತ್ತು ಅವರು ನಡೆಸಿರುವ ಹೋರಾಟವನ್ನು ವಿವರಿಸಿದರು. ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಸಂಘದ ಮುಂದಾಳುಗಳಾದ ಉಮಾವತಿ, ರೇಖಲತಾ, ಬಬಿತ, ಆಸ್ಮಾ, ಅನಿತಾ, ಶೋಭಾ ಮುಂತಾದವರು ವಹಿಸಿದ್ದರು.
ಪ್ರತಿಭಟನಾ ನಂತರ ತಹಶೀಲ್ದಾರ್ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಗಿರಿಜರವರು ಸ್ವಾಗತಿಸಿ, ಭವ್ಯಾ ವಂದಿಸಿದರು.