ವಿಶ್ವ ಕೊಂಕಣಿ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Update: 2024-12-19 13:38 GMT

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ 2024-25 ಸಾಲಿಗೆ ಡಾ.ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಪುರಸ್ಕಾರ 2025 ಹಾಗೂ ಡಾ.ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂ. ಮತ್ತು ಫಲಕಗಳನ್ನು ಹೊಂದಿದೆ.

ರಂಗಶ್ರೇಷ್ಟ ಪುರಸ್ಕಾರಕ್ಕಾಗಿ 60 ವರ್ಷಕ್ಕಿಂತ ಹಿರಿಯ, ಕೊಂಕಣಿ ಮಾತೃಭಾಷಿಕ, ರಂಗಭೂಮಿಯ ಏಳಿಗೆಗಾಗಿ ಸಿನೆಮಾ-ನಾಟಕಗಳಲ್ಲಿ ನಟನೆ, ನಿರ್ದೇಶನ, ನಾಟಕ ರಚನೆಯಂತಹ ಕ್ಷೇತ್ರಗಳಲ್ಲಿ ನಿರಂತರ ದುಡಿಮೆ ಹಾಗೂ ಸಮರ್ಪಣಾ ಭಾವದೊಂದಿಗೆ ಜೀವಮಾನದ ಸೇವೆ ನೀಡಿರುವ ರಂಗಕರ್ಮಿಗಳಿಂದ ನೇರವಾಗಿ ಅಥವಾ ಹಿತೈಷಿ ಕಲಾಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಲ್ಲದೆ ಭಾಷಾಂತರ ಕ್ಷೇತ್ರದಲ್ಲಿ ವಿಶೇಷವಾಗಿ ಕೊಂಕಣಿ ಸಾಹಿತ್ಯ ಕೃತಿಗಳನ್ನು ಇತರ ಭಾಷೆಗಳಿಗೆ ಅತ್ಯುತ್ತಮವಾಗಿ ಅನುವಾದಿಸಿದವರಿಂದ ನೇರವಾಗಿ ಅಥವಾ ಹಿತೈಷಿ ಸಾಹಿತ್ಯಾಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.

ಅರ್ಜಿದಾರರು ಮೊದಲು www.vishwakonkani.org ನಲ್ಲಿ ಹೆಸರು ನೋಂದಾಯಿಸಿಕೊಂಡು ಬಳಿಕ ವಿವರವಾದ ಪ್ರಸ್ತಾವನಾ ಅರ್ಜಿಯನ್ನು ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು 575016 ಈ ವಿಳಾಸಕ್ಕೆ 2025ರ ಜನವರಿ 10ರೊಳಗೆ ಅಂಚೆ ಮೂಲಕ ಕಳುಹಿಸಿಕೊಡಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News