ಕೈಗಾರಿಕಾ ವಿಪತ್ತು ನಿರ್ವಹಣೆಗೆ ಸ್ಥಳೀಯ ಸಮಿತಿ ರಚಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2024-12-19 13:23 GMT

ಮಂಗಳೂರು: ಕೈಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಅನಾಹುತ ಹಾಗೂ ವಿಪತ್ತುಗಳ ನಿರ್ವಹಣೆಗೆ ಸ್ಥಳೀಯ ಮಟ್ಟದಲ್ಲಿ ಬಿಕ್ಕಟ್ಟು ಪರಿಹಾರ ಸಮಿತಿಗಳನ್ನು ರಚಿಸುವಂತೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ

ಪಣಂಬೂರು ಎಂಸಿಎಫ್‌ನಲ್ಲಿ ನಡೆದ ದ.ಕ. ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಣಂಬೂರು, ಬೈಕಂಪಾಡಿ, ಸುರತ್ಕಲ್ ಆಸುಪಾಸಿನಲ್ಲಿ ಹಲವು ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿವೆ. ಯಾವುದೇ ರೀತಿಯಲ್ಲಿ ಎದುರಾಗಬಹುದಾದ ವಿಪತ್ತು ಹಾಗೂ ದುರ್ಘಟನೆಗಳ ನಿರ್ವಹಣೆಗೆ ಕೈಗಾರಿಕೆಗಳು ಸನ್ನದ್ಧ ವಾಗಿರಬೇಕು ಈ ನಿಟ್ಟಿನಲ್ಲಿ ತಮ್ಮದೇ ಆದ ವಿಪತ್ತು ನಿರ್ವಹಣೆ ಯೋಜನೆಯನ್ನು ಮಾಡಿಕೊಂಡಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸ್ಥಳೀಯ ಮಟ್ಟದಲ್ಲಿ ಆಯಾ ಸ್ಥಳಕ್ಕೆ ಹೊಂದಿಕೊಂಡಂತೆ ಕೈಗಾರಿಕಾ ಪ್ರತಿನಿಧಿಗಳು ಸ್ಥಳೀಯ ಸಂಸ್ಥೆಗಳು ಮತ್ತು ಸರಕಾರಿ ಆಸ್ಪತ್ರೆಗಳ ವೈದ್ಯರನ್ನು ಒಳಗೊಂಡ ಸ್ಥಳಿಯ ಬಿಕ್ಕಟ್ಟು ನಿರ್ವಹಣಾ ಸಮಿತಿಯನ್ನು ರಚಿಸಬೇಕು. ಇದರಿಂದ ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ವಿಪತ್ತು ಎದುರಾದರೂ ಅದನ್ನು ನಿರ್ವಹಿಸುವುದರ ಜೊತೆಗೆ ಇತರ ಕೈಗಾರಿಕೆ ಘಟಕಗಳಿಗೆ ಹರಡದಂತೆ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೈಗಾರಿಕೆಗಳು ಸ್ಥಳೀಯ ಪ್ರದೇಶಕ್ಕೆ ಅನುಗುಣವಾಗಿ ಬಿಕ್ಕಟ್ಟು ನಿರ್ವಹಣೆ ಯೋಜನೆ ತಯಾರಿಸಿ ಅದನ್ನು ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯೊಂದಿಗೆ ಸೇರಿಸಿಕೊಳ್ಳಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಅನಾಹುತಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಇದು ಪ್ರಮುಖವಾಗಲಿದೆ. ರಕ್ಷಣಾ ಸಲಕರಣೆಗಳು ಮಾನವ ಶಕ್ತಿ ಹಾಗೂ ಇತರ ಸಂಪನ್ಮೂಲಗಳ ವಿವರಗಳನ್ನು ಕೈಗಾರಿಕಾ ಘಟಕಗಳು ಆಗಾಗ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ನೈಸರ್ಗಿಕ ವಿಪತ್ತು ಕೈಗಾರಿಕಾ ಅಪಾಯ ಮತ್ತು ಸಂಭವನೀಯ ವಿಪತ್ತುಗಳು ಸಂಭವಿಸಿದಾಗ ಕೈಗೊಳ್ಳುವ ಕಾರ್ಯ ವಿಧಾನಗಳ ಬಗ್ಗೆ ಎಲ್ಲಾ ಕೈಗಾರಿಕಾ ಘಟಕಗಳು ಮಾಹಿತಿ ಹೊಂದಿರಬೇಕು. ಪ್ರಾಥಮಿಕ ಹಂತದಲ್ಲಿ ಸಮುದಾಯದ ಸ್ವಸಹಾಯ ಅಗತ್ಯವಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಪಾಯಕಾರಿ ಕಾರ್ಖಾನೆಗಳ ಸುತ್ತಮುತ್ತಲಿನ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತೈಲ ಸಾಗಾಟದ ಟ್ಯಾಂಕರ್‌ಗಳು ಲೋಡಿಂಗ್‌ನಿಂದ ಅನ್‌ಲೋಡಿಂಗ್ ಸ್ಥಳದವರೆಗೂ ಸಾಗಾಟದ ಹಾದಿಯಲ್ಲಿ ಯಾವುದೇ ಸೋರಿಕೆ ಸೇರಿದಂತೆ ಅನಾಹುತಗಳಾಗದಂತೆ ಆಯಾತೈಲ ಕಂಪನಿಗಳೇ ಮುನ್ನೆಚ್ಚರಿಕೆ ವಹಿಸಬೇಕು ಎಂದ ಜಿಲ್ಲಾಧಿ ಕಾರಿ ಜಿಲ್ಲೆಯಲ್ಲಿರುವ ಅತಿ ಅಪಾಯಕಾರಿ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳು ಆಗಾಗ ಅಣುಕು ಪ್ರದರ್ಶನ ಗಳನ್ನು ನಡೆಸಿ ವಿಪತ್ತು ನಿರ್ವಹಣೆ ಸಾಮರ್ಥ್ಯವನ್ನು ಪರಿಶೀಲಿಸುತ್ತಿರಬೇಕು. ಕಾಲಕಾಲಕ್ಕೆ ತುರ್ತು ಪರಿಸ್ಥಿತಿ ಯೋಜನೆ ಗಳನ್ನು ಪರಿಷ್ಕರಿಸಬೇಕು ಎಂದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ, ಕಾರ್ಖಾನೆಗಳ ಉಪನಿರ್ದೇಶಕ ಎಂ.ಎಸ್ ಮಹಾದೇವ್, ಎಂಸಿಎಫ್ ಮುಖ್ಯ ಉತ್ಪಾದನಾಧಿಕಾರಿ ಗಿರೀಶ್, ಜಿಲ್ಲಾ ವಿಪತ್ತು ನಿರ್ವಹಣಾ ಸಮನ್ವಯಾಧಿಕಾರಿ ವಿಜಯ್ ಕುಮಾರ್, ವಿವಿಧ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News