ಕುಡಿಯುವ ನೀರಿನ ಸಮಸ್ಯೆ, ತಗಡು ಶೀಟು ವಿವಾದ: ಉಳ್ಳಾಲ ನಗರ ಸಭೆಯಲ್ಲಿ ಚರ್ಚೆ
ಉಳ್ಳಾಲ: ಕುಡಿಯುವ ನೀರಿನ ಸಮಸ್ಯೆ, ತಗಡು ಶೀಟು ವಿವಾದ, ಅಧಿಕಾರಿಗಳ ಗೈರು, ಯುಜಿಡಿ ಕಾಮಗಾರಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಕಳವು ಮುಂತಾದ ವಿಷಯಗಳ ವ್ಯಾಪಕ ಚರ್ಚೆ ಉಳ್ಳಾಲ ನಗರ ಸಭೆಯಲ್ಲಿ ನಡೆಯಿತು.
ಉಳ್ಳಾಲ ನಗರಸಭೆಯಲ್ಲಿ ಇತ್ತೀಚೆಗೆ ನಿಧನರಾದ ನಗರಸಭೆ ಮಾಜಿ ಅಧ್ಯಕ್ಷ ಹುಸೈನ್ ಕುಂಞಮೋನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ನಗರಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಾಜಿಲ್ ಡಿಸೋಜ ಅವರು ಕುಡಿಯುವ ನೀರಿನ ಸಮಸ್ಯೆ ಇದೆ, ಅಧಿಕಾರಿಗಳು ಗೈರಾಗಿದ್ದಾರೆ. ಈ ಬಗ್ಗೆ ಪರಿಹಾರ ಮಾಡುವವರು ಯಾರು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶಶಿಕಲಾ ಅವರು ಅಧಿಕಾರಿಗಳು ತಡವಾಗಿ ಬರುತ್ತಾರೆ ಎಂದು ತಿಳಿಸಿದ್ದಾರೆ. ಅವರಿಗೂ ಬೇರೆ ಸಭೆ ಇದೆ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯ ದಿನಕರ್ ಉಳ್ಳಾಲ ಅವರು, ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಕಡೆ ಬೆಳೆದಿದೆ. ಇದಕ್ಕೆ ಪರಿಹಾರ ಆಗಬೇಕು. ಅಧಿಕಾರಿಗಳು ಗೈರಾಗುತ್ತಿರುವ ಬಗ್ಗೆ ಕಳೆದ ತಿಂಗಳ ಸಭೆಯಲ್ಲೂ ಪ್ರಸ್ತಾಪಿಸಿದಾಗ ನೀವು ಇದೇ ರೀತಿ ಉತ್ತರ ನೀಡಿದ್ದೀರಿ. ತಕ್ಷಣ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿ ಎಂದು ಒತ್ತಾಯಿಸಿದರು.
ಕುಡಿಯುವ ನೀರು ಹಾಗೂ ಒಳಚರಂಡಿ ವಿಭಾಗದ ಸಹಾಯಕ ಕಾರ್ಯಪಾಲಕ ಅಧಿಕಾರಿ ಅಜೇಯ್ ಮಾತನಾಡಿ, ಆರಂಭದಲ್ಲಿ ಐದು ವಲಯಗಳನ್ನಾಗಿ ಮಾಡಿ ಕುಡಿಯುವ ನೀರು ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ ಮುಕಚೇರಿ, ಚೆಂಬು ಗುಡ್ಡೆ,ಪಟ್ಲ,ಕೆರೆಬೈಲ್ ಬಳಿ ಪೈಪ್ ಲೈನ್ ಕಾಮಗಾರಿ ಆರಂಭಿಸಲಾಗಿದೆ .14 ಕಡೆಗಳಲ್ಲಿ ಕಾಮಗಾರಿ ನಡೆಸಲು ಇಂಜಿನಿಯರ್ ವರದಿ ಸಿಕ್ಕಿದೆ. ಕೆಲವು ಕಡೆ ಕಾಮಗಾರಿ ಬಾಕಿ ಇದೆ ಎಂದು ಸಭೆಗೆ ತಿಳಿಸಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಯ್ಯೂಬ್ ಮಂಚಿಲ ಅವರು, ಹೊಸದಾಗಿ ಕಾಮಗಾರಿ ಹಾಕಿದ ರಸ್ತೆ ಅನಗತ್ಯ ಅಗೆದು ಹಾಕಲಾಗಿದೆ. ಈ ರೀತಿ ಕಾಮಗಾರಿ ಬೇಡ, ರಸ್ತೆಯ ಬದಿಯಲ್ಲಿ ಇರುವ ಖಾಲಿ ಜಾಗದಲ್ಲಿ ಕಾಮಗಾರಿ ಮಾಡಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ದಿನಕರ್ ಉಳ್ಳಾಲ ಅವರು ಎಡಿಬಿಯಿಂದ 15 ಕೋಟಿ ಹಾಗೂ ನಗರಸಭೆ ವತಿಯಿಂದ ಐದು ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿ ಆಗಿದೆ. ಇನ್ನು ಜಲಸಿರಿ ಯೋಜನೆಯಡಿ ಹೊಸ ಪೈಪ್ ಲೈನ್ ಕಾಮಗಾರಿ ಬೇಡ. ಈಗಿರುವುದು ಕುಡಿಯುವ ನೀರಿನ ಸಮಸ್ಯೆ. ಅದನ್ನು ಪರಿಹಾರ ಮಾಡಿ ಎಂದರು.
ಗ್ರಂಥಾಲಯ ಕಟ್ಟಡ ಕೆಡವಿದ ಸಂದರ್ಭ ನಗರಸಭೆಗೆ ಸೇರಿದ ತಗಡು ಶೀಟು ಕಳವಾದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯ ರೇಶ್ಮಾ ಅವರು, ಈ ತಗಡು ಶೀಟು ಕೊಂಡು ಹೋದವರು ಯಾರು, ಅದು ಎಲ್ಲಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ಮತಡಿ ಅವರು, ತಗಡು ಶೀಟು ಕಳವಾಗಿಲ್ಲ ಕೊಂಡು ಹೋದವರು ವಾಪಸ್ ತಂದಿಟ್ಟಿದ್ದಾರೆ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರಾದ ನಮಿತ ಹಾಗೂ ಅಸ್ಗರ್ ಅವರು, ಇದನ್ನು ಕೊಂಡು ಹೋದವರು ಪ್ರಭಾವಿ ಮಹಿಳೆ ಎಂದು ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ. ಲಕ್ಷಾಂತರ ಮೌಲ್ಯದ ತಗಡು ಶೀಟು ಟೆಂಡರ್ ಆಗದೇ ಕೊಂಡು ಹೋದವರು ಯಾರು? ಕಳೆದ ತಿಂಗಳ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿತ್ತು. ಈ ವೇಳೆ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದರು. ಆದರೆ ಸಮಿತಿ ರಚಿಸಿ ತನಿಖೆ ಯಾಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದಾಗ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಈ ವೇಳೆ ಪೌರಾಯುಕ್ತ ಮತಡಿ ಸೂಚನೆ ಮೇರೆಗೆ ಕಿರಿಯ ಅಭಿಯಂತರ ತುಳಸಿ ದಾಸ್ ಅವರು ತಗಡು ಶೀಟು ಒಂದು ಕಟ್ಟಡದಲ್ಲಿ ಇದೆ. ಸುರಕ್ಷತೆ ದೃಷ್ಟಿಯಿಂದ ಒಂದೆಡೆ ಶೇಖರಿಸಿ ಇಟ್ಟಿದ್ದೇವೆ. ನಗರಸಭೆ ಸೊತ್ತು ಯಾರು ಕೊಂಡು ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ವೇಳೆ ಆಕ್ರೋಶಗೊಂಡ ವಿರೋಧ ಪಕ್ಷದ ಸದಸ್ಯರು, "ಆರು ಲಕ್ಷ ಮೌಲ್ಯದ ಸೊತ್ತಾಗಿದೆ ತಗಡು ಶೀಟು. ಇದನ್ನು ಆಡಳಿತಾರೂಢ ಪಕ್ಷದ ಮಹಿಳಾ ಸದಸ್ಯರು ಕೊಂಡು ಹೋಗಿರಬೇಕು ಎಂದು ಆರೋಪಿಸಿದರಲ್ಲದೇ ತನಿಖೆಗಾಗಿ ಸಮಿತಿ ರಚಿಸಿ" ಎಂದು ಪಟ್ಟು ಹಿಡಿದರು.
ತಗಡು ಶೀಟು ವಿವಾದದ ತನಿಖೆಗೆ ಸಮಿತಿ ರಚನೆ ಮಾಡಿ ಎಂದು ವಿರೋಧ ಪಕ್ಷದ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಏಳು ಮಂದಿ ಸದಸ್ಯರ ಸಮಿತಿ ರಚಿಸಲಾಯಿತು. ಆಡಳಿತಾರೂಢ ಸದಸ್ಯ ಅಯ್ಯೂಬ್ ಸದಸ್ಯರ ಹೆಸರು ಸೂಚಿಸಿದರು. ಈ ವೇಳೆ ದಿನಕರ್ ಉಳ್ಳಾಲ ಅವರು ಸಮಿತಿ ರಚನೆ ಆಗಿದೆ, ಸಮಿತಿ ಸದಸ್ಯರು ಹೇಗೆ ತನಿಖೆ ಹೇಗೆ ಮಾಡುತ್ತಾರೆ ಎಂದು ನೋಡುತ್ತೇನೆ. ನಾನು ಈ ವಿಚಾರದಲ್ಲಿ ಬೇರೆ ರೀತಿ ತನಿಖೆ ನಡೆಸುತ್ತೇನೆ. ಈ ವಿಚಾರದಲ್ಲಿ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ವರೆಗೆ ಹೋಗುತ್ತೇನೆ ಎಂದು ಎಚ್ಚರಿಸಿದರು.
ನಿರ್ಣಯ: ಕಾಮಗಾರಿ ಆಗಿಲ್ಲ ಎಂದು ಆರೋಪಿಸಿ ಸಭೆಯಲ್ಲಿ ನಡೆಸಿದ ಪ್ರತಿಭಟನೆ ಬಗೆ ನಿರ್ಣಯ ಅಂಗೀಕಾರ ಯಾಕಾಗಿಲ್ಲ ಎಂದು ದಿನಕರ್ ಉಳ್ಳಾಲ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಇಸ್ಮಾಯಿಲ್ ಅವರು ಪ್ರತಿಭಟನೆಯ ನಿರ್ಣಯ ಸಭೆಯಲ್ಲಿ ಅಂಗೀಕರಿಸಲು ಆಗುವುದಿಲ್ಲ ಎಂದಾಗ ವ್ಯಾಪಕ ಚರ್ಚೆ ನಡೆಯಿತು.
ಸಿಸಿ ಕಳವು : ಕೋಡಿಯಲ್ಲಿ ಯುಜಿಡಿ ಕಾಮಗಾರಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ಇನ್ನಿತರ ಸಾಮಗ್ರಿಗಳು ಕಳವಾಗುತ್ತಿದೆ , ಇದರಲ್ಲಿ ಅಧಿಕಾರಿಗಳು ಶಾಮೀಲಾದಂತೆ ಭಾಸವಾಗುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಸದಸ್ಯ ಅಝೀಝ್ ಅಧಿಕಾರಿಗಳ ಗಮನ ಸೆಳೆದರು.
ಸಭೆಯಲ್ಲಿ ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.