ರಾಜ್ಯ ರಾಜಧಾನಿಗೆ 190 ಕಿ.ಮೀ. ಉದ್ದದ ಸುರಂಗಮಾರ್ಗ!
ಬೆಂಗಳೂರು: ರಾಜ್ಯ ರಾಜಧಾನಿಯ ಸಂಚಾರದಟ್ಟಣೆ ಬಗೆಹರಿಸುವ ನಿಟ್ಟಿನಲ್ಲಿ 190 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, 45 ದಿನಗಳ ಒಳಗಾಗಿ ಇದಕ್ಕೆ ಟೆಂಡರ್ ಆಹ್ವಾನಿಸಲಾಗುವುದು ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 190 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ಎಂಟು ಕಂಪನಿಗಳು ಅರ್ಹತೆ ಹೊಂದಿವೆ. ಇವು ಕಾರ್ಯಸಾಧ್ಯತೆ ವರದಿಯನ್ನು ಸಲ್ಲಿಸಲಿದ್ದು, 45 ದಿನಗಳ ಒಳಗಾಗಿ ಸಾರ್ವಜನಿಕ ಟೆಂಡರ್ ಕರೆಯಲು ಸಿದ್ಧತೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಸುರಂಗಮಾರ್ಗ ಹೇಗಿರಬೇಕು, ಇದು ನಾಲ್ಕು ಲೇನ್ ಅಥವಾ ಆರು ಲೇನ್ ರಸ್ತೆ ಹೊಂದಿರುತ್ತದೆಯೇ, ಎಲ್ಲಿ ಇದು ಆರಂಭವಾಗಿ ಎಲ್ಲಿ ಅಂತ್ಯವಾಗುತ್ತದೆ, ಇದನ್ನು ಇಡೀ ನಗರಕ್ಕೆ ವಿಸ್ತರಿಸಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಧ್ಯಯನ ನಡೆಸಿ ಈ ಕಂಪನಿಗಳು ವರದಿ ಸಿದ್ಧಪಡಿಸಲಿವೆ ಎಂದು ವಿವರಿಸಿದರು.
ಇದು ಬೃಹತ್ ಯೋಜನೆಯಾಗಿದ್ದು, ಭಾರಿ ಸಂಪನ್ಮೂಲ ಅಗತ್ಯ ಇರುವುದರಿಂದ ವಿವಿಧ ಹಂತಗಳಲ್ಲಿ ನಡೆಸಲಾಗುತ್ತದೆ. ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಸ್ಟೀಮ್ ಜಂಕ್ಷನ್ ಮಾಲ್ನಿಂದ ಮೇಖ್ರಿ ವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯ ಸರ್ಕಲ್, ಟ್ರಿನಿಟಿ ಸರ್ಕಲ್, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆಯಿಂದ ಸಿರ್ಸಿ ಸರ್ಕಲ್, ಮಾಗಡಿ ರಸ್ತೆ, ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್, ಹೊರವರ್ತುಲ ರಸ್ತೆ, ಗೊರಗುಂಟೆಪಾಳ್ಯ, ಕೆ.ಆರ್.ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳನ್ನು ಈ 190 ಕಿಲೋಮೀಟರ್ ಉದ್ದದ ಸುರಂಗ ಮಾರ್ಗಕ್ಕೆ ಗುರುತಿಸಲಾಗಿದೆ ಎಂದು ಹೇಳಿದರು.