ಬೆಂಗಳೂರು ಟೆಕ್ಕಿ ಆತ್ಮಹತ್ಯೆಗೆ ಪತ್ನಿ, ಅತ್ತೆ-ಮಾವ ಕಿರುಕುಳ ಕಾರಣ: ಆರೋಪ
ಹೊಸದಿಲ್ಲಿ: ಬೆಂಗಳೂರಿನಲ್ಲಿ ಇತ್ತೀಚೆಗೆ ಅತುಲ್ ಸುಭಾಷ್ ಎಂಬ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಹಾಗೂ ಅತ್ತೆ- ಮಾವ ಈತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅದರ ಇತ್ಯರ್ಥಕ್ಕೆ ಮೂರು ಕೋಟಿ ರೂಪಾಯಿ ಬೇಡಿಕೆ ಮುಂದಿಟ್ಟದ್ದು ಹಾಗೂ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದು ಆತ್ಮಹತ್ಯೆಗೆ ಕಾರಣ ಎಂದು ಮೃತ ಟೆಕ್ಕಿಯ ಸಹೋದರ ಬಿಕಾಸ್ ಕುಮಾರ್ ಆಪಾದಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದ ಅತುಲ್ ಸುಭಾಷ್ (34) ಕಳೆದ ಸೋಮವಾರ ಬೆಂಗಳೂರಿನ ಮಂಜುನಾಥ ಲೇಔಟ್‍ನ ಡೆಲ್ಫೇನಿಯಮ್ ರೆಸಿಡೆನ್ಸಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೂಲತಃ ಉತ್ತರ ಪ್ರದೇಶದವರಾದ ಅತುಲ್ 24 ಪುಟಗಳ ಆತ್ಮಹತ್ಯೆ ಟಿಪ್ಪಣಿ ಬರೆದಿಟ್ಟಿದ್ದು, ತನ್ನ ಪತ್ನಿ, ಆಕೆಯ ತಂದೆ- ತಾಯಿ ಮತ್ತು ಒಬ್ಬರು ನ್ಯಾಯಾಧೀಶರು ಕೂಡಾ ತನ್ನ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದಾರೆ. ಆತ್ಮಹತ್ಯೆ, ಕಿರುಕುಳ, ಸುಲಿಗೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಸುಭಾಷ್ ಪತ್ನಿ ಹಲವು ಪ್ರಕರಣಗಳಲ್ಲಿ ಪತಿಯನ್ನು ಸಿಲುಕಿಸಿದ್ದಳು ಎಂದು ಸಂತ್ರಸ್ತ ಟೆಕ್ಕಿಯ ತಂದೆ ಆಪಾದಿಸಿದ್ದಾರೆ. "ಮಧ್ಯಸ್ಥಿಕೆ ನ್ಯಾಯಾಲಯ ಕೂಡಾ ಕಾನೂನು ಪ್ರಕಾರ ಅಥವಾ ಸುಪ್ರೀಂಕೋರ್ಟ್ ನಿಯಮಾವಳಿಯ ಅನ್ವಯ ಕಾರ್ಯ ನಿರ್ವಹಿಸಿಲ್ಲ. ಮಗ ಕನಿಷ್ಠ 40 ಬಾರಿ ಬೆಂಗಳೂರಿನಿಂದ ಜುನಾಪುರಕ್ಕೆ ಹೋಗಿದ್ದ. ಆಕೆ ಒಂದರ ಮೇಲೊಂದರಂತೆ ಪ್ರಕರಣ ದಾಖಲಿಸುತ್ತಿದ್ದಳು. ಹತಾಶನಾಗಿದ್ದ ಆತ ನಮಗೆ ಆ ಬಗ್ಗೆ ಯಾವುದೇ ಭಾವನೆ ಬಾರದಂತೆ ನೋಡಿಕೊಂಡಿದ್ದ. ದಿಢೀರನೇ ನಮಗೆ ಆ ಸುದ್ದಿ ತಲುಪಿತು. ಕಿರಿಯ ಮಗನಿಗೆ ಆತ ಇ-ಮೇಲ್ ಸಂದೇಶ ಕಳುಹಿಸಿದ್ದ. ಪತ್ನಿ ಮತ್ತು ಆಕೆಯ ಕುಟುಂಬದ ಬಗ್ಗೆ ಮಾಡಿದ ಆರೋಪ ಶೇಕಡ 100ರಷ್ಟು ನಿಜ; ಆತ ಎದುರಿಸಿದ ಸಂಕಷ್ಟಗಳನ್ನು ಬಣ್ಣಿಸುವುದು ಅಸಾಧ್ಯ" ಎಂದು ಅವರು ಹೇಳಿದರು.
ಪತ್ನಿ ಸುಭಾಷ್ ವಿರುದ್ಧ ಒಂಬತ್ತು ಪ್ರಕರಣಗಳನ್ನು ದಾಖಲಿಸಿದ್ದನ್ನು ಆತ್ಮಹತ್ಯೆ ಟಿಪ್ಪಣಿ ಉಲ್ಲೇಖಿಸಿದೆ. ಇದರಲ್ಲಿ ಕೊಲೆ, ಲೈಂಗಿಕ ದುರ್ನಡತೆ, ಹಣಕ್ಕಾಗಿ ಕಿರುಕುಳ, ಗೃಹಹಿಂಸೆ ಮತ್ತು ವರದಕ್ಷಿಣೆ ಬೇಡಿಕೆ ಪ್ರಕರಣಗಳು ಸೇರಿವೆ. ಇವೆಲ್ಲ ತನ್ನಿಂದ ಹಣ ಸುಲಿಗೆ ಮಾಡಲು ಹೂಡಿದ ಸಂಚಿನ ಭಾಗ ಎಂದು ಆತ್ಮಹತ್ಯೆ ಟಿಪ್ಪಣಿಯಲ್ಲಿ ಸುಭಾಷ್ ವಾದಿಸಿದ್ದರು.