ರಾಜ್ಯದ ಎಲ್ಲೆಡೆ ʼಅಂತಾರಾಷ್ಟ್ರೀಯ ಯೋಗ ದಿನʼ ಆಚರಣೆ

Update: 2024-06-21 13:44 GMT

ಬೆಂಗಳೂರು : ಸೂರ್ಯ ನಮಸ್ಕಾರ, ತಾಡಾಸನ, ವೃಕ್ಷಾಸನ, ಅರ್ಧಚಕ್ರಾಸನ, ವೀರಭದ್ರಾಸನ, ಪ್ರಾಣಾಯಾಮ, ಧ್ಯಾನ...! ಹೀಗೆ ಯೋಗದ ನಾನಾ ಆಸನಗಳನ್ನು ಸಾಮೂಹಿಕವಾಗಿ, ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.

ಶುಕ್ರವಾರ ವಿಧಾನಸೌಧದ ಮುಂಭಾಗದಲ್ಲಿ ಆಯುಷ್ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 10ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯೋಗಾಭ್ಯಾಸ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‍ನ ಸಭಾಪತಿ ಬಸವರಾಜ್ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಕ್ರೀಡಾಪಟುಗಳು, ಚಿತ್ರ ನಟರು ಹಾಗೂ ಯೋಗ ಸಾಧಕರು ಪಾಲ್ಗೊಂಡಿದ್ದರು.

ಯೋಗ ದಿನಾಚರಣೆ ನಿಮಿತ್ತ ಯಲಹಂಕದ ಸಿಆರ್‍ಪಿಎಫ್ ಕೇಂದ್ರದಲ್ಲಿ ಯೋಗಾಭ್ಯಾಸ ನಡೆಸಲಾಗಿದ್ದು, ಸಾವಿರಕ್ಕೂ ಅಧಿಕ ಯೋಧರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು. ಮಹಿಳಾ ಸಬಲೀಕರಣಕ್ಕಾಗಿ ಯೋಗ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಐಜಿಪಿ, ಸೆಂಟರ್ ಐಜಿಪಿ, ಕಮಿಷನರ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಯೋಗ ದಿನದ ಹಿನ್ನೆಲೆ ಬೆಳಗಾವಿ ನಗರದ ಕೆಪಿಟಿಸಿಎಲ್ ಭವನದಲ್ಲಿ ನೂರಾರು ಜನರು ಉತ್ಸಾಹದಿಂದ ವಿವಿಧ ಆಸನಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು. ವಿದೇಶದ ಪ್ರತಿನಿಧಿಗಳು ಕೂಡ ಈ ವೇಳೆ ಭಾಗಿಯಾಗಿದ್ದು ವಿಶೇಷವಾಗಿತ್ತು. ಜಿಲ್ಲಾಡಳಿತ, ಜಿಪಂ ಹಾಗೂ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ದ ಯೋಗ ದಿನಾಚರಣೆಗೆ ಸಂಸದ ಜಗದೀಶ ಶೆಟ್ಟರ್ ಚಾಲನೆ ನೀಡಿದರು.

ಅದೇ ರೀತಿ, ಮೈಸೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ರಾಯಚೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನಾಗರಿಕರು ಕೂಡ ಯೋಗ ದಿನದಲ್ಲಿ ಭಾಗಿಯಾಗಿ ಪ್ರಾಣಾಯಾಮ, ಧ್ಯಾನ ಸೇರಿದಂತೆ ಸೂರ್ಯ ನಮಸ್ಕಾರ ಸೇರಿ ಅನೇಕ ಆಸನಗಳನ್ನು ಪ್ರದರ್ಶಿಸಿದರು.

ಸಿಎಂ ಭಾಗಿ: ಬಳ್ಳಾರಿಯಲ್ಲಿ ಆಯೋಜಿಸಿದ್ದ ಯೋಗದಿನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಚಿವ ಸಂತೋಷ್ ಲಾಡ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸಂಸದ ಈ.ತುಕಾರಾಂ, ಸರಕಾರದ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ನಟಿ ಶ್ರೀಲೀಲಾ, ವಚನಾನಂದ ಸ್ವಾಮೀಜಿ ಸೇರಿದಂತೆ ಪ್ರಮುಖರಿದ್ದರು.

ಯೋಗೋತ್ಸವದಲ್ಲಿ 6 ಲಕ್ಷ ಜನ ಭಾಗಿ: ದಿನೇಶ್ ಗುಂಡೂರಾವ್

ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜೂ.10ರಿಂದ 10 ದಿನಗಳ ಹಮ್ಮಿಕೊಂಡಿದ್ದ ‘ಯೋಗೋತ್ಸವ’ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ 664 ವಸತಿ ನಿಲಯದ 90,300 ವಿದ್ಯಾರ್ಥಿಗಳು ಯೋಗಭ್ಯಸದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ವಸತಿ ಶಿಕ್ಷಣ ಸಂಘದ ವಸತಿ 831 ಶಾಲೆಗಳ 87,000 ವಿದ್ಯಾರ್ಥಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವ-ಸಹಾಯ ಸಂಘದ 5 ಸಾವಿರ ಸದಸ್ಯರುಗಳಿಗೆ ಯೋಗಭ್ಯಾಸ ಹೇಳಿಕೊಡಲಾಗಿದೆ.

ಭಾರತ್ ಸೌಟ್ಸ್ ಎಂಡ್ ಗೈಡ್ಸ್ ಸಂಸ್ಥೆಯ 18ಸಾವಿರ ವಿದ್ಯಾರ್ಥಿಗಳು, ಬೆಂಗಳೂರು ಅಪಾರ್ಟ್‍ಮೆಂಟ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ವಿವಿಧ ವಸತಿ ಸಮುಚ್ಛಯಗಳ 1,023 ನಾಗರಿಕರು, ವಾಣಿಜ್ಯ ಸಂಕೀರ್ಣಗಳಾದ ಫಿನಿಕ್ಸ್-ಮಾಲ್ ಆಫ್ ಏಷ್ಯಾ ಯಲಹಂಕ, ಲುಲು ಮಾಲ್ ರಾಜಾಜಿನಗರ ಇಲ್ಲಿಗೆ ಭೇಟಿ ನೀಡಿದ 10ಸಾವಿರಕ್ಕೂ ಅಧಿಕ ಸಾರ್ವಜನಿಕರು, ಜೈನ್ ವಿಶ್ವವಿದ್ಯಾಲಯದ ವಿವಿಧ ಅಂಗ ಸಂಸ್ಥೆಗಳ 650 ವಿದ್ಯಾರ್ಥಿಗಳು, ಪ್ರಸಾರ ಭಾರತಿ ವತಿಯಿಂದ ಆಕಾಶವಾಣಿಯಿಂದ ತಜ್ಞ ವೈದ್ಯರೊಂದಿಗೆ ಯೋಗದ ಮಹತ್ವ ಹಾಗೂ ವಿವಿಧ ಆಯುಷ್ ಬೆಂಗಳೂರು. ಪದ್ಧತಿಗಳ ಪರಿಚಯ, ಆರೋಗ್ಯ ಸಲಹೆ. ಸಂವಾದ. ಸಂದರ್ಶನ ಇತ್ಯಾದಿ 12 ಕಾರ್ಯಕ್ರಮಗಳು ಜರುಗಿದವು.


Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News