‘ಮಂಗಳೂರಿನ ಹೋಂ ಸ್ಟೇ ದಾಳಿ ಪ್ರಕರಣ’ ಸರಕಾರದ ವೈಫಲ್ಯ : ಜನವಾದಿ ಮಹಿಳಾ ಸಂಘಟನೆ
ಬೆಂಗಳೂರು : ಮಂಗಳೂರಿನ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಾದ 39 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಸ್ಥಳೀಯ ನ್ಯಾಯಾಲಯವು ಖುಲಾಸೆಗೊಳಿಸಿದ್ದು, ಇದರಲ್ಲಿ ಸರಕಾರದ ವೈಪಲ್ಯವಿದೆ ಎಂದು ಜನವಾದಿ ಮಹಿಳಾ ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ಸಂಘಟನೆಯ ಅಧ್ಯಕ್ಷೆ ಡಾ.ಮೀನಾಕ್ಷಿಬಾಳಿ ಪ್ರಕಟನೆ ಹೊರಡಿಸಿದ್ದು, 2012ರ ಜು.2 ರಂದು ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಂಸ್ಟೇನಲ್ಲಿದ್ದ ಯುವತಿಯರ ಮೇಲೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ತೀವ್ರ ಹಲ್ಲೆಯನ್ನು ಮಾಡಿದ್ದು, ನ್ಯಾಯಾಲಯವು ಅವರನ್ನೆಲ್ಲಾ ಖುಲಾಸೆಗೊಳಿದೆ. ಮಹಿಳಾ ಸ್ವಾತಂತ್ರ್ಯದ ವಿರೋಧಿ, ಪ್ರಗತಿ ವಿರೋಧಿ, ಹಿಂದುತ್ವವಾದವನ್ನು ಮುಂದೊತ್ತಲು ಪ್ರಯತ್ನ ಮಾಡುತ್ತಿರುವ ಶಕ್ತಿಗಳಿಂದ ಈ ದಾಳಿ ನಡೆದಿದೆ ಎಂದು ತಿಳಿಸಿದ್ದಾರೆ.
ಹೋಂ ಸ್ಟೇನಲ್ಲಿದ್ದ ಯುವತಿಯರೊಂದಿಗೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಅಸಭ್ಯವಾಗಿ ನಡೆದುಕೊಂಡಿದ್ದು, ಲೈಂಗಿಕ ಕಿರುಕುಳಗಳನ್ನು ನೀಡಿದ್ದರು ಎಂಬುದನ್ನು ಪ್ರಕರಣದ ವಿಚಾರಣೆಯ ಸಮಯದಲ್ಲಿ ಅಲ್ಲಿ ದಾಳಿಗೆ ಒಳಗಾದ ಯುವತಿ ಸ್ವತಃ ಸಾಕ್ಷಿ ಹೇಳಿದ್ದಾರೆಂಬುದು ನ್ಯಾಯಾಲಯದ ಗಮನದಲ್ಲೇ ಇದೆ. ಅಂದು ಘಟನೆ ನಡೆದ ನಂತರ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಹಲ್ಲೆ ಮಾಡಿದವರನ್ನು ಬಂಧಿಸುವ ಬದಲು ಹಲ್ಲೆಗೊಳಗಾದವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದವರನ್ನು ಹೊರಗೆ ಕಳಿಸಿದ್ದರು. ಈ ಎಲ್ಲ ದೃಶ್ಯಾವಳಿಗಳು ದೇಶಾದ್ಯಂತ ಎಲ್ಲ ಎಲೆಕ್ಟ್ರಾನಿಕ್ ಮಾದ್ಯಮಗಳಲ್ಲಿ ಬಿತ್ತರಗೊಂಡಿದ್ದವು ಎಂದಿದ್ದಾರೆ.
ಆದರೂ ಆರೋಪಿಗಳು ಖುಲಾಸೆಯಾಗುತ್ತಾರೆಂದರೆ ಇದು ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯವಾಗಿದೆ. ಅಪರಾಧಿಗಳಿಗೆ ಶಿಕ್ಷೆಯ ಬದಲು ರಕ್ಷಣೆ ನೀಡುವಂತೆ ಭಾಸವಾಗುತ್ತಿರುವ ಈ ನಡೆಯನ್ನು ಸರಿಪಡಿಸಲು ಸರಕಾರ ಮೇಲ್ಮನವಿ ಸಲ್ಲಿಸಬೇಕು. ಯುವತಿಯರ ಮೇಲೆ ದೈಹಿಕ ಹಾಗೂ ಸಾಂವಿಧಾನಿಕ ಹಲ್ಲೆ ಮಾಡಿದವರನ್ನು ಕಾನೂನಿನ ಕುಣಿಕೆಗೆ ಸಿಲುಕಿಸಿ ಅವರ ಅಪರಾಧ ಸಾಬೀತುಪಡಿಸಿ ನ್ಯಾಯದ ಪರವಾಗಿ ನಿಲ್ಲಬೇಕು ಎಂದು ಅವರು ಒತ್ತಾಯಿಸಿದ್ದಾರೆ.