ಮಗನನ್ನು ಶಾಲೆಯಲ್ಲಿ ಶೌಚಾಲಯದ ಆಸನವನ್ನು ನೆಕ್ಕುವಂತೆ ಬಲವಂತಪಡಿಸಿದ್ದರು: ರ‍್ಯಾಗಿಂಗ್ ಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕನ ತಾಯಿ ಆರೋಪ

PC : keralakaumudi.com
ಕೊಚ್ಚಿ: ತನ್ನ ಚರ್ಮದ ಬಣ್ಣದ ಕಾರಣಕ್ಕಾಗಿ ಶಾಲೆಯಲ್ಲಿ ನಿರಂತರವಾಗಿ ರ‍್ಯಾಗಿಂಗ್ ಗೆ ಒಳಗಾದ ಕೇರಳದ ಕೊಚ್ಚಿಯ 15 ವರ್ಷದ ವಿದ್ಯಾರ್ಥಿಯೋರ್ವ ಜನವರಿ 15ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಲೆಯಲ್ಲಿ ತೀವ್ರ ಅವಮಾನಕ್ಕೆ ಒಳಗಾದ ಬಳಿಕ ಮನೆಗೆ ಮರಳಿದ ಬಾಲಕ, ತನ್ನ ಮನೆಯಿರುವ ಕಟ್ಟಡದ 26ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ.
‘‘ನನ್ನ ಮಗನನ್ನು ಶೌಚಾಲಯದ ಆಸನವನ್ನು ನೆಕ್ಕುವಂತೆ ಬಲವಂತಪಡಿಸಲಾಗಿತ್ತು. ಶೌಚಾಲಯಕ್ಕೆ ನೀರು ಹಾಯುವಾಗ ಅವನ ತಲೆಯನ್ನು ಅದರ ಒಳಗೆ ತಳ್ಳಲಾಗಿತ್ತು’’ ಎಂಬುದಾಗಿ ಮಗನ ಸಾವಿನಿಂದ ಆಘಾತಗೊಂಡಿರುವ ತಾಯಿ ಹೇಳಿದ್ದಾರೆ.
ಬಾಲಕನ ತಾಯಿ ತ್ರಿಪುನಿತುರದ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಮಗನಿಗೆ ನೀಡಲಾಗಿರುವ ಕಿರುಕುಳಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಅವರು ಮಕ್ಕಳ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಮಗನ ಶಾಲೆಯ ಉಪ ಪ್ರಾಂಶುಪಾಲರು ಅವನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂಬುದಾಗಿಯೂ ದೂರಿನಲ್ಲಿ ಆರೋಪಿಸಲಾಗಿದೆ.
‘‘ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಅವನಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಹೋರಾಡುತ್ತಿದ್ದೇನೆ. ನನ್ನ ಮಗನು ಚಟುವಟಿಕೆಯಿಂದ ಮತ್ತು ಖುಷಿಯಿಂದ ಇರುತ್ತಿದ್ದ ಪ್ರೀತಿಯ ಮಗುವಾಗಿದ್ದ. ಆ ದಿನ ಅವರು ಶಾಲೆಯಿಂದ ಮಧ್ಯಾಹ್ನ 2:45ಕ್ಕೆ ಹಿಂದಿರುಗಿದ. ಸಂಜೆ 3:50ರ ವೇಳೆಗೆ ನನ್ನ ಜಗತ್ತೇ ಕುಸಿಯಿತು. ಅವನು ಕೊಚ್ಚಿಯ ತ್ರಿಪುನಿತಾರದಲ್ಲಿರುವ ನಮ್ಮ 26ನೇ ಮಹಡಿಯ ಮನೆಯಿಂದ ಹಾರಿ ತನ್ನ ಬದುಕನ್ನು ಕೊನೆಗೊಳಿಸಿದ’’ ಎಂಬುದಾಗಿ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಆತ್ಮಹತ್ಯೆಯ ಕಾರಣ ತಿಳಿಯಲು ಹೆತ್ತವರು ಮಗನ ಗೆಳೆಯರನ್ನು ಮಾತನಾಡಿಸಿದರು ಮತ್ತು ಅವನ ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸಿದರು. ಆಗ ಅವರಿಗೆ ತಮ್ಮ ಮಗ ಅನುಭವಿಸಿದ ಸಂಕಟದ ಬಗ್ಗೆ ಗೊತ್ತಾಯಿತು. ತನ್ನ ಮಗನ ಮೇಲೆ ದೈಹಿಕ ಹಲ್ಲೆ ನಡೆಸಲಾಗುತ್ತಿತ್ತು, ಮಾತುಗಳಿಂದ ನಿಂದಿಸಲಾಗುತ್ತಿತ್ತು ಮತ್ತು ಊಹಿಸಲಾಗದಷ್ಟು ಅವಮಾನಕ್ಕೆ ಒಳಪಡಿಸಲಾಗುತ್ತಿತ್ತು. ಅವನನ್ನು ಬಲವಂತವಾಗಿ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಶೌಚಾಲಯ ಆಸನವನ್ನು ನೆಕ್ಕುವಂತೆ ಮಾಡಲಾಗುತ್ತಿತ್ತು ಮತ್ತು ತಲೆಯನ್ನು ಶೌಚಾಲಯದೊಳಗೆ ಮುಳುಗಿಸಲಾಗುತ್ತಿತ್ತು ಎಂದು ತಾಯಿ ಹೇಳಿದ್ದಾರೆ.
ಮಗನ ಸಾವಿನ ಬಳಿಕ ಸಾಮಾಜಿಕ ಮಾಧ್ಯಮ ಸಂಭಾಷಣೆಯ ಸ್ಕ್ರೀನ್‌ಶಾಟೊಂದು ಆಘಾತಕಾರಿ ಅಂಶವೊಂದನ್ನು ಹೊರಗೆಡಹಿತು. ಆ ಸಂಭಾಷಣೆಯಲ್ಲಿ ನನ್ನ ಮಗನ ಸಾವನ್ನು ಕೆಲವು ವಿದ್ಯಾರ್ಥಿಗಳು ಸಂಭ್ರಮಿಸಿದ್ದರು ಎಂದು ತಾಯಿ ಆರೋಪಿಸಿದ್ದಾರೆ.
ಶಾಲೆಯ ಅಧಿಕಾರಿಗಳು ಈ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.