ಮೋದಿ ಫಾರಿನ್ ಟ್ರಿಪ್ ಖರ್ಚು ಎಷ್ಟು?

ವಿದೇಶಗಳಲ್ಲಿ ಮೋದಿ ಮೋದಿ ಎಂದು ಎನ್ಆರ್ಐಗಳ ಸಭೆಯಲ್ಲಿ ಅಬ್ಬರದ ಘೋಷಣೆ ಮೊಳಗುತ್ತಿದ್ದರೆ, ಅವರೆದುರು ಮೋದಿ ತಾಸುಗಟ್ಟಲೆ ಮಾತಾಡುತ್ತಿದ್ದರೆ, ಅದನ್ನೆಲ್ಲ ಜೋಡಿಸುತ್ತ ಇಲ್ಲಿನ ಭಕ್ತಪಡೆ ವಿಶ್ವಗುರು ಎಂಬ ಕಥೆ ಹೇಳುತ್ತಿದ್ದರೆ, ಇಲ್ಲಿ ದೇಶದ ಖಜಾನೆಯಲ್ಲಿ ಕೋಟಿ ಕೋಟಿ ಹಣ ಸೋರಿಹೋಗುವುದು ನಿಮಗೆ ಗೊತ್ತಿದೆಯೆ?
ಮೋದಿ ವಿದೇಶ ಭೇಟಿಯ ವೇಳೆಯಲ್ಲೆಲ್ಲಾ ಅಷ್ಟು ದೊಡ್ಡ ಪ್ರಮಾಣದಲ್ಲಿ ಎನ್ಆರ್ಐಗಳು ಬರುತ್ತಾರೆಯೆ? ಮೋದಿಗಾಗಿ ಅಷ್ಟು ವೈಭವದ ಕಾರ್ಯಕ್ರಮ ಸ್ವತಃ ಆ ಜನರೇ ಆಯೋಜಿಸುತ್ತಾರೆಯೆ ಎಂಬ ಅಚ್ಚರಿ ಮೂಡುತ್ತಿತ್ತು. ಕ್ರಮೇಣ ಎಲ್ಲ ಸತ್ಯಗಳೂ ಬಯಲಾಗುತ್ತಿವೆ. ಮೋದಿಯವರ ವಿದೇಶ ಪ್ರವಾಸಗಳ ಹಿಂದಿನ ವೈಭವ ಮತ್ತು ಅಬ್ಬರದ ವಾಸ್ತವ ಈಗ ಬಯಲಾಗುತ್ತಿದೆ.
ತೆರಿಗೆದಾರರ ಹಣವನ್ನು ಹೇಗೆ ಮೋದಿ ಇಮೇಜ್ ಅನ್ನು ದೊಡ್ಡದಾಗಿ ತೋರಿಸುವ ಸಲಿವಾಗಿ ಬೇಕಾಬಿಟ್ಟಿ ಚೆಲ್ಲಾಡಲಾಗುತ್ತದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಲೋಕೇಶ್ ಬಾತ್ರಾ ಅವರು ಆರ್ಟಿಐ ಮೂಲಕ ಪಡೆದ ವಿವರಗಳು ಬೆಚ್ಚಿಬೀಳಿಸುವಂತಿವೆ.ಅವರು ಮೋದಿಯವರ 16 ವಿದೇಶ ಪ್ರವಾಸಗಳ ಬಗ್ಗೆ ವಿವರಗಳನ್ನು ಕೇಳಿದ್ದರು. ಲಭ್ಯವಾದ ಪ್ರತಿಯೊಂದು ಪ್ರವಾಸದ ವಿವರಗಳು ಆಘಾತಕಾರಿಯಾಗಿವೆ.
ಮೂರನೇ ಬಾರಿಗೆ ಪ್ರಧಾನಿಯಾದ ನಂತರ ಮೋದಿ ಮಾಡಿರುವ ಮೂರು ವಿದೇಶ ಪ್ರವಾಸಗಳಿಗೆ ಖರ್ಚಾಗಿರುವುದು ಎಷ್ಟು ಕೋಟಿ ರೂಪಾಯಿಗಳು ಗೊತ್ತೆ? ಸುಮಾರು 20 ಕೊಟಿ ರೂ. ಮೋದಿ ರಷ್ಯಾ ಭೇಟಿಗೆ ಆಗಿರುವ ವೆಚ್ಚ 15 ಕೋಟಿ ರೂ. ಮತ್ತು ಅಬುಧಾಬಿ ಪ್ರವಾಸಕ್ಕೆ ಸುಮಾರು 5 ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡಿದೆ ಎಂದು ಆರ್ಟಿಐ ಉತ್ತರಗಳಲ್ಲಿ ಮಾಹಿತಿಯಿದೆ.
ಮೋದಿ ಭೇಟಿ ನೀಡಿದ ದೇಶಗಳ ರಾಯಭಾರ ಕಚೇರಿಗಳಿಂದ ಆರ್‌ಟಿಐ ಮೂಲಕ ಈ ಮಾಹಿತಿಯನ್ನು ಕೇಳಲಾಗಿತ್ತು. ಬಾತ್ರಾ ಸಲ್ಲಿಸಿದ ಆರ್‌ಟಿಐ ಅರ್ಜಿಯಲ್ಲಿ, ಮೋದಿ ಅವರ ವಿದೇಶ ಪ್ರವಾಸಗಳ ವೆಚ್ಚ ಎಷ್ಟು, ಅಲ್ಲಿ ನಡೆದ ಸಾರಿಗೆ ಮತ್ತು ಕಾರ್ಯಕ್ರಮಗಳ ಒಟ್ಟು ವೆಚ್ಚ ಎಷ್ಟು ಎಂಬುದರ ಕುರಿತು ಸಂಪೂರ್ಣ ವಿವರ ಕೋರಲಾಗಿತ್ತು. ಆದರೆ ಎಲ್ಲಾ ಮಾಹಿತಿ ಈ ವರೆಗೂ ಸಿಕ್ಕಿಲ್ಲ.
ಆದ್ದರಿಂದ, ಪ್ರತಿ ವಿದೇಶಿ ಪ್ರವಾಸದ ಸಂಪೂರ್ಣ ವಿವರಗಳು ಸಿಕ್ಕಿಲ್ಲ. ಆದರೆ ಲಭ್ಯವಾಗಿರುವ ವಿದೇಶಿ ಪ್ರವಾಸಗಳ ವಿವರಗಳು ದಂಗುಬಡಿಸುತ್ತವೆ. ಈ ಬಗ್ಗೆ ನ್ಯೂಸ್ ಲಾಂಡ್ರಿ ವರದಿ ಪ್ರಕಟಿಸಿದೆ.
ಭೂತಾನ್ ಮತ್ತು ಕುವೈತ್‌ನಿಂದ ಉಕ್ರೇನ್ ಮತ್ತು ಅಮೆರಿಕಕ್ಕೆ ಕಳೆದ ವರ್ಷ ಮೋದಿ ಕೈಗೊಂಡಿದ್ದ ರಾಜತಾಂತ್ರಿಕ ಪ್ರವಾಸಗಳು ಎಲ್ಲಾ ಪತ್ರಿಕೆಗಳ ನ್ಯೂಸ್ ಚಾನೆಲ್ ಗಳ ಹೆಡ್ಲೈನ್ನಲ್ಲಿ ಮಿಂಚಿದ್ದವು.
ಮೋದಿಯವರ ಎರಡು ರಷ್ಯಾ ಭೇಟಿಗಳಿಗೆ ಕೇಂದ್ರ ಸರ್ಕಾರ 15 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಿದೆ. ಮತ್ತು ಅಬುಧಾಬಿ ಪ್ರವಾಸಕ್ಕೆ ಸುಮಾರು 5 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಪ್ರಧಾನಿಯವರ ವಿದೇಶ ಪ್ರವಾಸಗಳ ಒಟ್ಟು ವೆಚ್ಚವನ್ನು ಹೆಚ್ಚಾಗಿ ಬಹಿರಂಗಪಡಿಸಲಾಗಿಲ್ಲ.
ವಿದೇಶದಲ್ಲಿರುವ ಹೆಚ್ಚಿನ ಭಾರತೀಯ ರಾಯಭಾರ ಕಚೇರಿಗಳು ಆರ್‌ಟಿಐ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಮೋದಿ ಭೇಟಿ ನೀಡಿದ ದೇಶಗಳಲ್ಲಿನ ಎಲ್ಲಾ ಭಾರತೀಯ ರಾಯಭಾರ ಕಚೇರಿಗಳಿಗೆ ಆರ್‌ಟಿಐ ಸಲ್ಲಿಸಿದ್ದರೂ, ಬಾತ್ರಾಗೆ ಇದುವರೆಗೆ ಕೇವಲ ಎರಡರಿಂದ ಮಾತ್ರ ಪ್ರತಿಕ್ರಿಯೆಗಳು ಬಂದಿವೆ. ಅವೆಂದರೆ, ಮಾಸ್ಕೋ ಮತ್ತು ಅಬುಧಾಬಿ.
ಹೆಚ್ಚಿನ ರಾಯಭಾರ ಕಚೇರಿಗಳು ಆರ್‌ಟಿಐಗಳನ್ನು ಮಾಹಿತಿಯನ್ನು ಒದಗಿಸುವ ಬದಲು ವಿದೇಶಾಂಗ ಸಚಿವಾಲಯಕ್ಕೆ ರವಾನಿಸುತ್ತಿವೆ ಎಂದು ಅವರು ಹೇಳಿರುವುದನ್ನು ನ್ಯೂಸ್‌ಲಾಂಡ್ರಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, 2024 ರ ಫೆಬ್ರವರಿಯಲ್ಲಿ ಮೋದಿ ಅವರ ಯುಎಇ ಭೇಟಿಗೆ 4.95 ಕೋಟಿ ರೂ. ಖರ್ಚು ಮಾಡಲಾಗಿದೆ, ಈ ವೆಚ್ಚವನ್ನು ಮಂತ್ರಿಗಳ ಮಂಡಳಿ ಬಜೆಟ್ ಶೀರ್ಷಿಕೆಯಡಿ ಕಡಿತಗೊಳಿಸಲಾಗಿದೆ.
ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆರ್‌ಟಿಐ ವಿವರಗಳು ಪ್ರಧಾನಿಯವರ ರಷ್ಯಾ ಭೇಟಿಗಾಗಿ 15 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಿದೆ ಎಂದು ಹೇಳುತ್ತವೆ. ಕಳೆದ ಜುಲೈನಲ್ಲಿ ಮಾಸ್ಕೋ ಮತ್ತು ಅಕ್ಟೋಬರ್‌ನಲ್ಲಿ ಕಜನ್ ಗೆ ಮೋದಿ ಭೇಟಿ ನೀಡಿದ್ದರು. ಜುಲೈನಲ್ಲಿ ಮಾಸ್ಕೋ ಪ್ರವಾಸದಲ್ಲಿ ಹೋಟೆಲ್ ವ್ಯವಸ್ಥೆಗಾಗಿ 1.81 ಕೋಟಿ ರೂ̧. ದೈನಂದಿನ ಭತ್ಯೆಗಾಗಿ 20.81 ಲಕ್ಷ ರೂ̧. ಸಮುದಾಯ ಸ್ವಾಗತಕ್ಕಾಗಿ 1.87 ಕೋಟಿ ರೂ̧. ಸಾರಿಗೆಗಾಗಿ 59.06 ಲಕ್ಷ ರೂ.ಮತ್ತು ಇತರ ವೆಚ್ಚಗಳಲ್ಲಿ 62.56 ಲಕ್ಷ ರೂ. ಸೇರಿ 5.12 ಕೋಟಿ ರೂ. ವೆಚ್ಚವಾಗಿದೆ.
ಅಕ್ಟೋಬರ್‌ನಲ್ಲಿ ಕಜನ್‌ಗೆ ನೀಡಿದ ಭೇಟಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ 10.24 ಕೋಟಿ ರೂಪಾಯಿ ವೆಚ್ಚವಾಗಿದೆ. ಹೋಟೆಲ್‌ಗಳಿಗೆ 1.62 ಕೋಟಿ ರೂ., ದೈನಂದಿನ ಭತ್ಯೆಗೆ 25.67 ಲಕ್ಷ ರೂ., ಸಾರಿಗೆಗೆ 1.79 ಕೋಟಿ ರೂ., ಮತ್ತು ಇತರ ವೆಚ್ಚಗಳಲ್ಲಿ 6.56 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
ತೆರಿಗೆದಾರರ ಹಣವನ್ನು ಲೆಕ್ಕವಿಡಬೇಕು ಎಂದು ಹೇಳುವ ಮೂಲಕ ಬಾತ್ರಾ ಪಾರದರ್ಶಕತೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. 2015 ರಲ್ಲಿ ತಮ್ಮ ಆರ್‌ಟಿಐಗಳಿಗೆ ಪ್ರತಿಕ್ರಿಯೆಯಾಗಿ ಇದೇ ರೀತಿಯ ವಿವರಗಳನ್ನು ಒದಗಿಸಿದ್ದ ಅನೇಕ ರಾಯಭಾರ ಕಚೇರಿಗಳ ವರಸೆಯೂ ಈಗ ಬದಲಾಗಿರುವ ಬಗ್ಗೆಯೂ ಬಾತ್ರಾ ಗಮನ ಸೆಳೆದಿದ್ದಾರೆ.
ಆರ್‌ಟಿಐ ಕಾಯ್ದೆಯ ಪೂರ್ವಭಾವಿ ಬಹಿರಂಗಪಡಿಸುವಿಕೆಯ ಷರತ್ತುಗಳ ಅಡಿಯಲ್ಲಿ ಸಾರ್ವಜನಿಕ ವಲಯದಲ್ಲಿ ಇರಬೇಕಾದ ಮಾಹಿತಿಯನ್ನೇ ನಿರಾಕರಿಸುತ್ತಿರುವುದು ವಿಚಿತ್ರವಾಗಿದೆ" ಎಂದು ಅವರು ಹೇಳಿದ್ದಾರೆ.