ಮಾರಣಾಂತಿಕ ಮಾಲಿಗ್ನೆಂಟ್ ಹೈಪರ್‌ಥರ್ಮಿಯಾ
ಮಾಲಿಗ್ನೆಂಟ್ ಹೈಪರ್‌ಥರ್ಮಿಯಾ ಈ ರೋಗ ಸ್ಥಿತಿ ಸರ್ಜರಿ ಸಮಯದಲ್ಲಿ ಜನರಲ್ ಅನಸ್ತೇಶಿಯಾ ಅಥವಾ ಸಂಪೂರ್ಣ ಅರಿವಳಿಕೆ ಸಂದರ್ಭದಲ್ಲಿ ಬಳಸುವ ನಿರ್ದಿಷ್ಟ ಔಷಧಿಗಳಿಗೆ ಪ್ರತಿಕ್ರಿಯೆಯಾಗಿದ್ದು, ತಕ್ಷಣವೇ ಗುರುತಿಸಿ ಚಿಕಿತ್ಸೆ ನೀಡುವ ಅಗತ್ಯ ಇರುತ್ತದೆ. ಇದೊಂದು ರೀತಿಯ ತೀವ್ರತರವಾದ ಪ್ರತಿಕ್ರಿಯೆಯಾಗಿದ್ದು, ಬಹಳ ವಿರಳವಾಗಿರುತ್ತದೆ. ಪ್ರತೀ 50 ಸಾವಿರ ಮಂದಿಯಲ್ಲಿ ಒಬ್ಬರಿಗೆ ಈ ಪ್ರತಿಕ್ರಿಯೆ ಸಂಭವಿಸಬಹುದು ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ದೇಹದ ಜೀವಕೋಶಗಳ ಉಷ್ಣತೆ ತೀವ್ರವಾಗಿ ಹೆಚ್ಚುವ ಕಾರಣದಿಂದ ಈ ರೀತಿಯ ಅನಿಯಂತ್ರಿತ ಹೈಪರ್‌ಥರ್ಮಿಯಾ ಎಂಬ ಹೆಸರು ತಳಕು ಹಾಕಿಕೊಂಡಿದೆ. ತಕ್ಷಣ ಚಿಕಿತ್ಸೆ ನೀಡಿದರೂ ಶೇ. 5 ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ. ತಕ್ಷಣ ಚಿಕಿತ್ಸೆ ಮಾಡದಿದ್ದಲ್ಲಿ ಶೇ. 80 ಮಂದಿ ಸಾವಿಗೀಡಾಗಬಹುದು.
ರೋಗದ ಲಕ್ಷಣಗಳು
1) ದೇಹದ ತಾಪಮಾನ ಅಥವಾ ಉಷ್ಣತೆ ತೀವ್ರವಾಗಿ ಹೆಚ್ಚುತ್ತಿದೆ.
2) ಹೃದಯದ ಬಡಿತ ಹೆಚ್ಚಾಗುತ್ತದೆ.
3) ದೇಹದ ರಕ್ತದೊತ್ತಡ ತೀವ್ರವಾಗಿ ಏರುತ್ತದೆ.
4) ದೇಹದ ಹೆಚ್ಚಿನ ಎಲ್ಲಾ ಸ್ನಾಯುಗಳು ಸೆಟೆದುಕೊಂಡು ದೇಹದ ಚಲನೆ ಕಷ್ಟವಾಗುತ್ತದೆ.
5) ಉಸಿರಾಟದ ವೇಗ ಹೆಚ್ಚುತ್ತದೆ. ಇಂಗಾಲಜನಕ ಸಾಂದ್ರತೆ ಜಾಸ್ತಿ ಆಗಿ ದೇಹದೊಳಗೆ ಮೆಟಾಬಾಲಿಕ್ ಅಸಿಡೋಸಿಸ್ ಎಂಬ ಆಮ್ಲೀಯ ವಾತಾವರಣ ಹೆಚ್ಚಾಗುತ್ತದೆ ಮತ್ತು ಕಿಡ್ನಿ ವೈಫಲ್ಯ ಮುಂತಾದ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಕಾರಣಗಳು
ಆನುವಂಶಿಕ ಕಾರಣಗಳಿಂದಾಗಿ ಈ ಸಮಸ್ಯೆ ಬರುತ್ತದೆ ಎಂದೂ ಅಂದಾಜಿಸಲಾಗಿದೆ. ಜೀನ್ ಅಥವಾ ವರ್ಣತಂತುಗಳಲ್ಲಿ ಉಂಟಾಗುವ ಬದಲಾವಣೆ ಅಥವಾ ನ್ಯೂನತೆಯಿಂದಾಗಿ ಈ ಸಮಸ್ಯೆ ಉದ್ಭವವಾಗುತ್ತದೆ. ಪ್ರಚೋದನಕಾರಿ ವಸ್ತುಗಳಿಗೆ ತೆರೆದುಕೊಳ್ಳದ ಹೊರತು ಯಾವುದೇ ಸಮಸ್ಯೆ ಇರುವುದಿಲ್ಲ. ಅರಿವಳಿಕೆಗೆ ಬಳಸುವ ಹಾಲೋಥೇನ್, ಸೆವೋಪ್ಲುರೇನ್, ಐಸೋಪ್ಲುರೇನ್ ಅನಿಲಗಳು ಮತ್ತು ಸ್ನಾಯು ಸಡಿಲಗೊಳಿಸುವ ಔಷಧಿಗಳಾದ ಸೆಕ್ಸಿನೈಲ್‌ಕೊಲೈನ್ ಔಷಧಿಗಳು ದೇಹಕ್ಕೆ ಸೇರಿದಾಗ ಜೀವಕೋಶಗಳ ಪ್ರಚೋದನೆಗೆ ಒಳಗಾಗಿ ಈ ಹೈಪರ್‌ಥರ್ಮಿಯಾ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಚರಿತ್ರೆ ಇರುವ ರೋಗಿಗಳಲ್ಲಿ ಸ್ಥಳೀಯ ಅರಿವಳಿಕೆಗಳಾದ ಲಿಗ್ನೋಕೈನ್, ಬುಪಿವಕೈನ್, ಮೆಪಿವಕೈನ್ ಹಾಗೂ ಇತರ ಸಾಮಾನ್ಯ ಅರಿವಳಿಕೆ ಔಷಧಿಗಳಾದ ಕೆಟಾಮೈನ್, ನೈಟ್ರಸ್ ಆಕ್ಸೈಡ್, ಪ್ರೊಪೋಪಾಲ್, ಪೆಂಟಾನಿಲ್, ಮಾರ್ಪಿನ್, ಬಾರ್ಬಿಟ್ಯುರೇಟ್ ಹಾಗೂ ಬೆಂಜೋ ಡಿಯಾ ಜಪೈನ್ ಔಷಧ ಬಳಸಬಹುದಾಗಿದೆ. ಇಂತಹ ವ್ಯಕ್ತಿಗಳಿಗೆ ಪ್ರಚೋದಕ ಔಷಧಿ ನೀಡಿದಾಗ ರೋಗಿಯ ಸ್ನಾಯುಗಳ ಜೀವಕೋಶಗಳ ಒಳಗೆ ಸಂಗ್ರಹವಿರುವ ಕ್ಯಾಲ್ಸಿಯಂ ಅನಿಯಂತ್ರಿತವಾಗಿ ಬಿಡುಗಡೆಗೊಂಡು ಸ್ನಾಯುಗಳು ಸೆಟೆದು ನಿಲ್ಲುತ್ತದೆ. ಇದರಿಂದ ಶಾಖ ಉತ್ಪತ್ತಿಯಾಗಿ ಜೀವಕೋಶಗಳ ಉಷ್ಣತೆ ಏರುತ್ತದೆ. ಏರಿದ ಉಷ್ಣತೆಯಿಂದ ಅಧಿಕ ರಕ್ತದೊತ್ತಡ, ಏರಿದ ಉಸಿರಾಟ, ಏರಿದ ಎದೆಬಡಿತ ಮತ್ತು ರಕ್ತದಲ್ಲಿ ಅಮ್ಲವ್ಯಾಧಿ ಅಥವಾ ಮೆಟಾಬಾಲಿಕ್ ಅಸಿಡೋಸಿಸ್ ಉಂಟಾಗುತ್ತದೆ.
ಪತ್ತೆ ಹಚ್ಚುವುದು ಹೇಗೆ?
1) ರೋಗಿಯ ಚರಿತ್ರೆ ಮತ್ತು ಕುಟುಂಬಸ್ಥರ ಚರಿತ್ರೆಯನ್ನು ತಿಳಿಯುವುದು.
2) ರೋಗದ ಲಕ್ಷಣಗಳನ್ನು ತಾಳೆ ಹಾಕಿ ರೋಗ ನಿರ್ಣಯ ಮಾಡಲಾಗುವುದು.
3) ಸೆಟೆದು ನಿಂತ ಸ್ನಾಯುಗಳ ಬಯಾಪ್ಸಿ/ಅಟಾಪ್ಸಿ ಮಾಡಿದಾಗ ರೋಗದ ಸರಿಯಾದ ನಿರ್ಣಯ ಮಾಡಲು ಸಾಧ್ಯವಾಗುತ್ತದೆ.
4) ರಕ್ತದಲ್ಲಿನ ಪೊಟಾಸಿಯಂ ಪ್ರಮಾಣ ವಿಪರೀತವಾಗಿ ಏರುತ್ತದೆ.
ತಡೆಗಟ್ಟುವುದು
1) ರೋಗಿಯ ಚರಿತ್ರೆಯನ್ನು ಗಮನಿಸಿ ಪ್ರಚೋದಕ ಔಷಧಿಗಳನ್ನು ಬಳಸದೇ ಇರುವುದು. ಬದಲಿ ಔಷಧಿಗಳನ್ನು ಬಳಸಿ ಈ ರೋಗ ಸ್ಥಿತಿಯನ್ನು ತಡೆಯುವುದು ಸಾಧ್ಯವಿದೆ.
2) ಸಾಮಾನ್ಯ ಅಥವಾ ಜನರಲ್ ಅರಿವಳಿಕೆ ಬದಲು ಸ್ಥಳೀಯ ಅರಿವಳಿಕೆ ಬಳಸಿ ಸರ್ಜರಿ ಮಾಡಲು ಸಾಧ್ಯವಾದಲ್ಲಿ ಹಾಗೆ ಮಾಡುವುದರಿಂದ ರೋಗಿಯ ಜೀವ ಉಳಿಸಬಹುದು.
ಚಿಕಿತ್ಸೆ ಹೇಗೆ?
ಅನಿಯಂತ್ರಿತ ಹೈಪರ್‌ಥರ್ಮಿಯಾ ರೋಗಕ್ಕೆ ಡಾಂಟ್ರೋಲಿನ್ ಸೋಡಿಯಂ ಔಷಧಿ ನೀಡಿದಲ್ಲಿ ರೋಗಿಯ ಜೀವ ಉಳಿಸಬಹುದು. ಇದರ ಜೊತೆಗೆ ಅತೀ ಹೆಚ್ಚು ಆಮ್ಲಜನಕ ಪೂರೈಕೆ, ಶೀತಲೀಕರಿಸಿದ ದ್ರಾವಣಗಳನ್ನು ರಕ್ತನಾಳಗಳ ಮೂಲಕ ಪೂರೈಸಿ ಹಾಗೂ ಐಸ್ ಬ್ಲಾಂಕೆಟ್ ಬಳಸಿ ದೇಹದ ಉಷ್ಣತೆಯನ್ನು ನಿಯಂತ್ರಿಸಬೇಕಾಗುತ್ತದೆ. ಡಾಂಟ್ರೋಲಿನ್ ಸೋಡಿಯಂನ ಔಷಧಿಯನ್ನು ವ್ಯಕ್ತಿಯ ತೂಕದ ಅಹಾರದ ಮೇಲೆ ನೀಡಲಾಗುತ್ತದೆ.
ಕೊನೆ ಮಾತು
ಅತೀ ವಿರಳ ಮಾರಣಾಂತಿಕ ಪರಿಸ್ಥಿತಿ ಇದಾಗಿದ್ದು, ಯಾವುದೇ ಸರ್ಜರಿ ಮಾಡುವ ಮೊದಲು ರೋಗಿಗಳ ಪರಿಪೂರ್ಣ ಚರಿತ್ರೆ ತಿಳಿಯುವುದು ಅತೀ ಅಗತ್ಯ. ಈ ಪರಿಸ್ಥಿತಿ ಬಂದ ಮೇಲೆ ಒದ್ದಾಡುವುದಕ್ಕಿಂತ ಬರದಂತೆ ಎಚ್ಚರಿಕೆ ವಹಿಸುವುದೇ ಜಾಣತನ ಎಂಬುದೇ ತಜ್ಞ ವೈದ್ಯರ ಪ್ರಾಮಾಣಿಕ ಅನಿಸಿಕೆ.