ಕೆಂಗಣ್ಣು ಕಾರಣಗಳು ಮತ್ತು ಚಿಕಿತ್ಸೆ

Update: 2023-08-08 03:57 GMT

ಕೆಂಗಣ್ಣು ಅಥವಾ ಮದ್ರಾಸ್ ಐ ಮತ್ತೆ ಸುದ್ದಿ ಮಾಡುತ್ತಿದೆ.ಇದೊಂದು ಸಾಂಕ್ರಾಮಿಕವಾಗಿ ಹರಡುವ ಬ್ಯಾಕ್ಟಿರೀಯಾ ಮತ್ತು ವೈರಾಣು ಸೋಂಕು ಆಗಿರುತ್ತದೆ. ಕಣ್ಣಿನ ಹೊರಭಾಗದ ಬಿಳಿ ಪಾರದರ್ಶಕ ಪದರವಾದ ಕಂಜಕ್ಟೈವಾ ಮತ್ತು ಕಣ್ಣಿನ ರೆಪ್ಪೆಯ ಒಳಭಾಗವನ್ನು ಹೆಚ್ಚಾಗಿ ಕಾಡುತ್ತದೆ. ಈ ಕಣ್ಣಿನ ಉರಿಯೂತವನ್ನು ಕಂಜಕ್ಟೆವೈಟಿಸ್ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ವೈರಾಣು, ಬ್ಯಾಕ್ಟೀರಿಯಾ, ಅಲರ್ಜಿ ಮತ್ತು ರಾಸಾಯನಿಕಗಳ ಸಂಪರ್ಕದಿಂದ ಈ ಕಂಜಕ್ಟೆವೈಟಿಸ್ ರೋಗ ಬರುತ್ತದೆ. ಬಹಳ ಸಾಮಾನ್ಯವಾಗಿ ಅಡಿನೋ ವೈರಾಣು ಗುಂಪಿಗೆ ಸೇರಿದ ವೈರಾಣುವಿನಿಂದ ಹರಡುತ್ತದೆ. ಅದೇ ರೀತಿ ಸ್ಟಾಪೈಲೋಕಾಕಸ್ ಆರಿಯಸ್ ಮತ್ತು ಸ್ಟೆಪ್ಟೊಕೋಕಸ್ ನ್ಯುಮೋನಿಯಾ ವೈರಾಣುವಿನಿಂದಲೂ ಬರುತ್ತದೆ. ಇದು ಸಣ್ಣ ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ.

ರೋಗದ ಲಕ್ಷಣಗಳು

೧) ಕಣ್ಣು ಕೆಂಪಾಗಿ ಊದಿಕೊಳ್ಳುತ್ತದೆ.

೨) ಕಣ್ಣಿನಲ್ಲಿ ಉರಿ, ಕೆರೆತ ಮತ್ತು ನೋವು

೩) ಕಣ್ಣಿನಿಂದ ಧಾರಾಕಾರವಾಗಿ ಹಳದಿ ಬಣ್ಣದ ನೀರು ಹರಿಯುತ್ತದೆ.

೪) ಕಣ್ಣೀರು ಹೆಚ್ಚು ಹೆಚ್ಚು ಬರುತ್ತದೆ.

೫) ಕಣ್ಣು ಬಿಸಿಲಿಗೆ ತೆರೆದಾಗ ತುಂಬಾ ಅತಿ ಸಂವೇದನೆ ಇರುತ್ತದೆ.

೬) ಕಣ್ಣಿನ ದೃಷ್ಟಿ ಮಂಜಾಗಬಹುದು

೭) ಕಣ್ಣು ಚುಚ್ಚಿದ ಅನುಭವ ಮತ್ತು ಕಣ್ಣು ರೆಪ್ಪೆ ಊದಿಕೊಂಡು ದಪ್ಪಗಾಗುತ್ತದೆ.

ಹೇಗೆ ತಡೆಗಟ್ಟುವುದು?

* ಕೈಯನ್ನು ಪದೇಪದೇ ಸೋಪಿನ ದ್ರಾವಣದಿಂದ ಮತ್ತು ಹರಿಯುವ ಶುದ್ಧ ನೀರಿನಿಂದ ತೊಳೆಯತಕ್ಕದ್ದು.

* ಪದೇ ಪದೇ ವಿನಾ ಕಾರಣ ಕಣ್ಣು ಮತ್ತು ಮುಖವನ್ನು ಸ್ಪರ್ಶಿಸಬಾರದು.

* ಶಂಕಿತ ಸೋಂಕಿತ ವ್ಯಕ್ತಿಯ ಟವೆಲ್, ಕಣ್ಣಿನ ಡ್ರಾಪ್ ಮತ್ತು ಮೇಕಪ್ ವಸ್ತುಗಳನ್ನು ಬಳಸಬೇಡಿ.

* ಶಂಕಿತ, ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ದೂರವಿರಬೇಕು.

* ಕಣ್ಣಿನಲ್ಲಿ ಉರಿತ, ನೋವು ಮತ್ತು ಕೆರೆತ ಇದ್ದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ.

* ಕಣ್ಣಿಗೆ ಸಾಕಷ್ಟು ವಿಶ್ರಾಂತಿ ನೀಡಬೇಕು. ಕಣ್ಣುರಿ ಇದ್ದಲ್ಲಿ ಟಿವಿ, ಕಂಪ್ಯೂಟರ್, ಮೊಬೈಲ್ನಿಂದ ದೂರ ಇರಿ ಮತ್ತು ಕಣ್ಣಿಗೆ ವಿಶ್ರಾಂತಿ ನೀಡಬೇಕು.

* ಅನಗತ್ಯವಾಗಿ ಸೂರ್ಯನ ಪ್ರಖರ ಬೆಳಕಿಗೆ ತೆರೆದುಕೊಳ್ಳಬೇಡಿ.

ಚಿಕಿತ್ಸೆ ಹೇಗೆ?

ಯಾವ ಕಾರಣಕ್ಕಾಗಿ ಕೆಂಗಣ್ಣು ಬಂದಿದೆ ಎಂದು ತಿಳಿದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಬ್ಯಾಕ್ಟೀರಿಯಾ ಸೋಂಕಿನಿಂದ ಕೆಂಗಣ್ಣು ಆಗಿದ್ದಲ್ಲಿ ಆಂಟಿಬಯೋಟಿಕ್ ಡ್ರಾಪ್ಗಳನ್ನು ನೇತ್ರ ತಜ್ಞರು ನೀಡುತ್ತಾರೆ. ವೈರಾಣು ಸೋಂಕಿನಿಂದ ಕೆಂಗಣ್ಣು ಆಗಿದ್ದಲ್ಲಿ ಉರಿಯೂತ ಕಡಿಮೆ ಮಾಡುವ ಔಷಧಿ ಡ್ರಾಪ್ಸ್ಗಳನ್ನು ಬಳಸತಕ್ಕದ್ದು. ಅಲರ್ಜಿ ಕಾರಣದಿಂದ ಆಗಿದ್ದಲ್ಲಿ ಅದಕ್ಕೆ ಬೇಕಾದ ಔಷಧಿ ನೀಡಲಾಗುತ್ತದೆ. ಕೆಮಿಕಲ್ ಇರಿಟೇಷನ್ನಿಂದ ಕೆಂಗಣ್ಣು ಆಗಿದ್ದಾಗ ಅಂತಹ ವಸ್ತುಗಳಿಗೆ ಕಣ್ಣು ತೆೆರೆದುಕೊಳ್ಳದಂತೆ ಎಚ್ಚರವಹಿಸತಕ್ಕದ್ದು. ವೈರಾಣು ಸೋಂಕಿನಿಂದ ಕೆಂಗಣ್ಣು ಆಗಿದ್ದಲ್ಲಿ ಸುಮಾರು ೭ರಿಂದ ೧೪ ದಿನಗಳಲ್ಲಿ ಕಡಿಮೆಯಾಗುತ್ತದೆ. ಬ್ಯಾಕ್ಟೀರಿಯಾದಿಂದ ತೊಂದರೆಯಾದಲ್ಲಿ ೫ರಿಂದ ೧೦ ದಿನಗಳಲ್ಲಿ ಔಷಧಿಗೆ ಸ್ಪಂದಿಸುತ್ತದೆ. ಒಟ್ಟಿನಲ್ಲಿ ನುರಿತ ನೇತ್ರ ತಜ್ಞರ ಸಲಹೆ ಮತ್ತು ಮಾರ್ಗದರ್ಶನ ಅತೀ ಅಗತ್ಯ. ಸ್ವಯಂ ಮದ್ದುಗಾರಿಕೆ ಬೇಡವೇ ಬೇಡ.

ಕೊನೆಮಾತು

ಹೆಚ್ಚಾಗಿ ಅಡಿನೋ ವೈರಾಣುವಿನಿಂದ ಹರಡುವ ಕಣ್ಣಿನ ಸೋಂಕು ಮೊದಲು ಮದ್ರಾಸ್ ಪ್ರಾಂತದಲ್ಲಿ ಕಂಡು ಬಂದ ಕಾರಣದಿಂದ ‘ಮದ್ರಾಸ್ ಐ’ ಎಂಬ ಅನ್ವರ್ಥನಾಮ ಬಂದಿದೆ. ಬಿಸಿಲಿನ ಬೇಗೆ ಮತ್ತು ತೇವಾಂಶ ಹೆಚ್ಚಾಗಿರುವ ಸಮಯದಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಈಗ ಮಳೆಗಾಲ, ಚಳಿಗಾಲದಲ್ಲಿಯೂ ವಕ್ಕರಿಸುತ್ತಿದೆ. ಬಹಳ ವೇಗವಾಗಿ, ಸಾಂಕ್ರಾಮಿಕವಾಗಿ ಹರಡುವ ಈ ಕಣ್ಣಿನ ಸೋಂಕು ಬಂದಾಗ ನಾವು ಇತರರಿಂದ ದೂರವಿರಬೇಕು. ಮತ್ತು ಹೆಚ್ಚಾಗಿ ಬಳಸಿ ಎಸೆಯಬಹುದಾದ ಟವೆಲ್ಗಳನ್ನು ಬಳಸಿ ಇತರರಿಗೆ ಹರಡದಂತೆ ಎಚ್ಚರವಹಿಸಬೇಕು. ಕಣ್ಣಿನಿಂದ ಸೋರುವ ದ್ರವದಿಂದಲೇ ಈ ರೋಗ ಹರಡುತ್ತದೆ. ಇದೊಂದು ಬಹಳ ಸಾಮಾನ್ಯ ಸೋಂಕು ಆಗಿದ್ದರೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದಲ್ಲಿ ಕಾರ್ನಿಯಾ ಪದರಕ್ಕೂ ಪಸರಿಸಿ ತೊಂದರೆ ನೀಡಲುಬಹುದು. ಸ್ವಯಂ ಮದ್ದುಗಾರಿಕೆ ಸಹ್ಯವಲ್ಲ. ನೇತ್ರ ತಜ್ಞರ ಸಲಹೆ ಮತ್ತು ಮಾರ್ಗದರ್ಶನದಲ್ಲಿಯೇ ಚಿಕಿತ್ಸೆ ಪಡೆಯತಕ್ಕದ್ದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಡಾ. ಮುರಲೀ ಮೋಹನ್ ಚೂಂತಾರು

contributor

Similar News