ದೇಲಂಪಾಡಿ ಎಂಬ ಯಕ್ಷಗ್ರಾಮ ಮತ್ತು ವಾಸುವಣ್ಣನ ಮೀಟರ್ ಚಹ!

Update: 2025-04-13 10:32 IST
ದೇಲಂಪಾಡಿ ಎಂಬ ಯಕ್ಷಗ್ರಾಮ ಮತ್ತು ವಾಸುವಣ್ಣನ ಮೀಟರ್ ಚಹ!
  • whatsapp icon

ನಾರಾಯಣರು ಕಟ್ಟಿಕೊಡುವ ದೇಲಂಪಾಡಿಯ ಹಸಿರು ನಕ್ಷೆಯಲ್ಲಿ ಊರನ್ನು ದೇಶಾಂತರಗೊಳಿಸುವ ಅನೇಕ ಒಳ ರಸ್ತೆಗಳಲ್ಲಿ ನಮ್ಮನ್ನು ನಡೆಸಲಾಗುತ್ತದೆ. ಇಂಥ ರಸ್ತೆಗಳಲ್ಲೇ ಮೆಲ್ಲ ಮೆಲ್ಲನೆ ದೂರಸರಿದು ನನ್ನ ತಲೆಮಾರಿನವರು ಹೊರಗಡೆಯ ಆಧುನಿಕ ಬೆಳಕನ್ನು ನೋಡಿದವರು, ನಗರದ ರಂಗಿಗೆ ಮರುಳಾದವರು. ಇವತ್ತು ಈ ದೇಶದ ಲಕ್ಷಾಂತರ ಗ್ರಾಮಗಳ ಇಂತಹದ್ದೇ ಕೂಡುರಸ್ತೆಯ ಅಂಚಿನಲ್ಲಿರುವ ಅಂಗಡಿ ಚಾದ ಹೋಟೆಲ್‌ಗಳಲ್ಲಿ ನಿಂತಾಗಲೆಲ್ಲ ಬಾಲ್ಯದ ಚಿತ್ರಗಳು ನಮ್ಮೊಳಗಡೆ ನುಸುಳುತ್ತವೆ.

ಹಳ್ಳಿಯನ್ನು ಹೇಗೆ ನೋಡಬೇಕು ಎಂಬುವುದಕ್ಕೆ ಈ ದೇಶದಲ್ಲಿ ಖಚಿತ ಮಾರ್ಗದರ್ಶಕ ಸಿದ್ಧ ಸೂತ್ರಗಳಿಲ್ಲ, ಬೇರೆಯವರ ಸಹಾಯ ಬೇಕಾಗಿಲ್ಲ, ಪರಿಣತ ಗೈಡುಗಳ ಅಗತ್ಯವಿಲ್ಲ. ಆ ಗ್ರಾಮದ ಬಾಗಿಲಲ್ಲಿ ನಿಂತು ನೀವು ತಲುಪಬೇಕಾದ ಮನೆ ಎಲ್ಲಿದೆ ಎಂದು ಅಲ್ಲಿ ಅಡ್ಡವಾಗುವ ಯಾರನ್ನೇ ಒಮ್ಮೆ ಕೇಳಿ ನೋಡಿ. ಅವರ ಪ್ರಕಾರ ನೀವು ಆ ಊರಿಗೆ ಹೊಸಬರು.

ಸೀದಾ ಮುಂದೆ ಹೋಗಿ, ಅಲ್ಲೊಂದು ಅರಳಿ ಕಟ್ಟೆ ಸಿಗುತ್ತೆ, ಅದರಡಿಯಲ್ಲಿ ಸಾಬ್ರ ಗೂಡಂಗಡಿ ಇದೆ, ಮುಂದೆ ಬಲಭಾಗದಲ್ಲಿ ನೂರು ಹೆಜ್ಜೆ ಮುಂದಕ್ಕೆ ಹೋಗಿ ಅಲ್ಲೊಂದು ಭಜನಾ ಮಂದಿರ, ಅಲ್ಲೇ ಮುಂದಕ್ಕೆ ಬರೀ ಇಪ್ಪತ್ತು ಹೆಜ್ಜೆಸಾಕು, ಗ್ರಾಮದ ನಾಡಕಚೇರಿ ಪಂಚಾಯತ್ ಸಿಗುತ್ತೆ. ಅದರ ಬಲ ಭಾಗಕ್ಕೆ ನಮ್ಮೂರ ಭಟ್ಟರ ಚಹದ ಹೋಟೆಲ್ ಇದೆ, ಅಲ್ಲೇ ಊರ ಪಟೇಲರ ಮನೆ, ಬಲಕ್ಕೆ ಇಂಗ್ರೆಜ್, ನೇರ ನೂರಡಿ ದೂರಕ್ಕೆ ಗಣಪತಿ ಗುಡಿ, ಅಲ್ಲೇ ನೀವು ತಲುಪಬೇಕಾದ ಮನೆ ಸಿಗುತ್ತೆ ಎನ್ನುತ್ತಾರೆ ಆ ನಾಡವರು. ಅರಳಿ ಕಟ್ಟೆ, ಪಂಚಾಯತ್, ಭಜನಾ ಮಂದಿರ, ಹೋಟೆಲ್, ಪಟೇಲರು, ಸಾಬ್ರು, ಇಂಗ್ರೆಜ್, ಗಣಪತಿ..ಇವೆಲ್ಲವನ್ನೂ ನೀವು ಮುಟ್ಟಿ ದಾಟಿ ತಲುಪಬೇಕಾದ ಗಮ್ಯವನ್ನು ಸೇರಿದಾಗ ಆ ಗ್ರಾಮದ ನಿಜ ಚಹರೆ ನಿಮ್ಮೊಳಗಡೆ ನಿಧಾನವಾಗಿ ಇಂಗುತ್ತದೆ.

ಬಹುತೇಕ ಇದು ಭಾರತದ ನಿಜಹಳ್ಳಿಗಳ ಲಕ್ಷಣಗಳು. ಹೌದು, ಇಲ್ಲಿ ಅಡ್ಡವಾಗುವ ಯಾರೇ ಆಗಲಿ ಆ ಊರ ಅವಯವಗಳನ್ನು ಅರೆದು ನೀರು ಕುಡಿದವರೇ. ಈ ದೇಶದ ಯಾವುದೇ ಹಳ್ಳಿಯಲ್ಲಿ ಆತ ಹತ್ತೇ ವರ್ಷ ಬಾಲ್ಯ ಕಳೆದಿರಲಿ ಮುಂದಿನ ೯೦ ವರ್ಷ ಮಹಾನಗರದೊಳಗಡೆಯೇ ಉಸಿರಾಡಲಿ ಅವನ ಸ್ಮರಣೆಯಲ್ಲಿ ಗ್ರಾಮ ಅಚ್ಚಾಗುವಷ್ಟು ನಿಖರವಾಗಿ ನಗರ ಬೆಳೆಯದು. ಅದೇ ನೋಡಿ ಈ ದೇಶದ ಹಳ್ಳಿಗಳ ನಿಜಶಕ್ತಿ.

ನನ್ನ ಕೈಯಲ್ಲಿ ಒಂದು ಚಿಕ್ಕ ಪುಸ್ತಕವಿದೆ. ‘ನಾನು ಮತ್ತು ನನ್ನ ದೇಲಂಪಾಡಿ’ ಎಂಬುವುದು ಅದರ ಶಿರೋನಾಮೆ. ಈ ದೇಲಂಪಾಡಿ ನನ್ನೂರಿಗಿಂತ ಬಹಳ ದೂರವೇನಲ್ಲ. ಹಾಗಂತ ಎಲ್ಲ ಊರುಗಳಂತಲ್ಲ. ಇಡೀ ಕರ್ನಾಟಕ-ಕೇರಳದ ನಕ್ಷೆಯೊಳಗಡೆ ಒಂದು ಸುಸಂಸ್ಕೃತ ಸಂಪನ್ನತೆ ಈ ಪುಟ್ಟ ಊರಿನದ್ದು. ಅದನ್ನೆಲ್ಲ ವಿವರಿಸುವ ಮುಂಚೆ ಆ ಪುಸ್ತಕದ ಕೃತಿಕಾರರಾದ ನಾರಾಯಣ ದೇಲಂಪಾಡಿ ಅವರ ಬಗ್ಗೆ ಒಂದು ಮಾತು ಹೇಳಬೇಕು. ನಾರಾಯಣರು ವಿದ್ಯಾರ್ಥಿಸ್ನೇಹಿ, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕರು, ಯಕ್ಷಗಾನ ಕಲಾವಿದರು, ಎಲ್ಲದಕ್ಕಿಂತ ಹೆಚ್ಚು ಸ್ನೇಹಶೀಲರು.

ಯಾವುದೋ ಕಾರ್ಯಕ್ರಮ ಒಂದರಲ್ಲಿ ಸಿಕ್ಕಿದ ಆತ್ಮೀಯರು ತನ್ನ ಮೊದಲ ಕೃತಿಯನ್ನು ಪ್ರೀತಿಯಿಂದ ಕೊಟ್ಟಾಗ ನಾನು ಅದನ್ನು ಎಲ್ಲೋ ಕಿಟಿಕಿಯಲ್ಲೂ ಕಪಾಟಿನ ಮೂಲೆಯಲ್ಲೂ ಇಟ್ಟು ಮರೆಯಲಿಲ್ಲ. ಆ ಪುಸ್ತಕವನ್ನು ಕೈಗಿಡುವಾಗಲೇ ಅವರ ಮುಖವನ್ನು ಚೆನ್ನಾಗಿಯೇ ಓದಿದ್ದೆ. ಪ್ರೀತಿ ಮತ್ತು ಗೌರವದೊಂದಿಗೆ ಆ ಪುಸ್ತಕವನ್ನು ನಾನು ಓದಲೇಬೇಕೆನ್ನುವ ಅವರ ಅಪೇಕ್ಷೆಯ ಮುಖಭಾವವನ್ನು ನಾನು ಗಮನಿಸಿದ್ದೆ.

ಎಷ್ಟೋ ಬಾರಿ ಹೀಗೆ ಪುಸ್ತಕ ಕೊಡುವ ಹೊಸ ಲೇಖಕರ ಕೃತಿಗಳನ್ನು ನಾವು ನಿರ್ಲಕ್ಷಿಸಲೇಬಾರದು. ಭಾಗಶಃ ಹೊಸ ಹೊಳಹುಳ್ಳ ಚಿಂತನೆಗಳು ಕಾಣಿಸಿಕೊಳ್ಳುವುದೇ ಇಂಥವರಲ್ಲಿ. ಈ ನನ್ನ ನಿಲುವಿಗೆ ನಾರಾಯಣರ ಪುಸ್ತಕವೇ ಒಂದು ಮಾದರಿ.

ಈ ದೇಶದ ಆತ್ಮಭಾಗವಾಗಿರುವ ಒಂದು ಗ್ರಾಮದ ಬದುಕನ್ನು ಅಲ್ಲಿಯ ಜನರ ಸಾಂಸ್ಕೃತಿಕ ಆಸಕ್ತಿ, ಪಾರಂಪರಿಕ ಕೌಶಲ್ಯ, ಜನಪದೀಯ ಆಸಕ್ತಿ, ನೆಲಮೂಲ ಜೀವನ ವಿನ್ಯಾಸ, ಆರ್ಥಿಕ ಸ್ವಾಲಂಬಿತನವನ್ನು ಸ್ವಾರಸ್ಯಕರವಾದ ದೃಷ್ಟಾಂತಗಳಿಂದ ಪದರ ಪದರವಾಗಿ ತೆರೆದಿಡುವ ಈ ಕೃತಿ ಇದಕ್ಕಿಂತಲೂ ಹೆಚ್ಚು ಲೇಖಕನ ಗ್ರಾಮಮುಖಿ ಋಣಪ್ರಜ್ಞೆ-ಪ್ರೀತಿಯ ಕಾರಣಕ್ಕಾಗಿ ತುಂಬಾ ಇಷ್ಟವಾಗುತ್ತದೆ.

ಹಾಗೆ ನೋಡಿದರೆ ಈ ದೇಶದ ಎಲ್ಲಾ ಜ್ಞಾನಪೀಠಗಳು, ಪದ್ಮಶ್ರೀಗಳು, ಪದ್ಮವಿಭೂಷಣಗಳು, ಭಾರತರತ್ನಗಳು... ಎಲ್ಲವೂ ಹುಟ್ಟಿ ಬೆಳೆದ ಊರುಗಳು ದೇಲಂಪಾಡಿಯ ಹಾಗೆಯೇ ಒಂದು ಕಾಲದಲ್ಲಿ ನಾಗರಿಕ ಪ್ರಪಂಚದಿಂದ ದೂರವೇ ಬದುಕಿದ್ದವುಗಳು.ಸಾಧಕರೆಲ್ಲರ ಬೇರುಗಳು ಅಂತಹದ್ದೇ ಊರುಗಳೊಂದಿಗೆ ಬೆಸೆದುಕೊಂಡಿರುತ್ತವೆ. ಸುಮಾರು ೮೦ ವರ್ಷಗಳ ಹಿಂದೆ ಕೀರಿಕ್ಕಾಡು ವಿಷ್ಣು ಮಾಸ್ತರ್ ಸ್ಥಾಪಿಸಿದ ‘ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ’ ಈ ಊರಲ್ಲಿ ಸುಮಾರು ಐವತ್ತಕ್ಕಿಂತ ಹೆಚ್ಚು ಯಕ್ಷಗಾನ ಕಲಾವಿದರನ್ನು ಸೃಷ್ಟಿಸಿದೆ. ಇವರೆಲ್ಲರೂ ದೇಲಂಪಾಡಿ ಎಂಬ ಪುಟ್ಟ ಗ್ರಾಮದ ಸಾಂಸ್ಕೃತಿಕ ಪ್ರಭೆಯನ್ನು ಮುಂದೊತ್ತಿ ವಿಸ್ತರಿಸಿದ್ದಾರೆ. ಇವರೆಲ್ಲ ಸಮಾಜದ ಮೇಲ್‌ಸ್ತರದ ಮಕ್ಕಳಲ್ಲ. ಬಂಟ, ಪಾಠಾಳಿ, ಗೌಡ, ಬಿಲ್ಲವರ ಮಕ್ಕಳು ಕೂಡ ಈ ಗರಡಿಯಲ್ಲಿ ಪಳಗಿ ಸೈ ಎನಿಸಿದವರು. ಆಟ-ತಿರುಗಾಟದಲ್ಲಿ ಹುಡಿ ಆರಿಸಿದವರು. ಬನಾರಿಯವರ ಮಗ ವನಮಾಲಕೇಶವ ಭಟ್ಟರು, ಆನಂತರ ಕನ್ನಡದ ಹಿರಿಯ ಸಾಹಿತಿ, ವೈದ್ಯ ಡಾ. ರಮಾನಂದ ಬನಾರಿ, ವಿಶ್ವ ವಿನೋದ ಬನಾರಿ ಮೊದಲಾದವರೆಲ್ಲ ಈ ಯಕ್ಷಗಾನ ವೇದಿಕೆಯನ್ನು ಇವತ್ತಿಗೂ ಗಟ್ಟಿಯಾಗಿಯೇ ರೂಪಿಸಿ ಬೆಳೆಸಿಕೊಂಡಿದ್ದಾರೆ. ಇಲ್ಲಿ ತಾಳಮದ್ದಳೆ ಮಾಡಿಸಲು ಕ್ಯೂ ನಿಂತವರು ಇದ್ದಾರೆ. ನಿರಂತರ ಪುರಾಣ ಪ್ರಜ್ಞೆ ಬಿತ್ತುವ,ಊರನ್ನು ಸಾಂಸ್ಕೃತಿಕವಾಗಿ ಸಂಪನ್ನಗೊಳಿಸುವ ಊರ ಪರವೂರ ಆಸಕ್ತರು ಇಲ್ಲಿದ್ದಾರೆ. ಇದೊಂದು ರೀತಿ ಹೆಗ್ಗೋಡಿನ ನೀನಾಸಂ, ಹೊಸದುರ್ಗದ ಶಿವಸಂಚಾರ ಇದ್ದ ಹಾಗೆ. ಊರಿನ ಹೃದಯ ಭಾಗದಲ್ಲಿರುವ ಈ ಸಾಂಸ್ಕೃತಿಕ ಕೇಂದ್ರ ಇವತ್ತಿಗೂ ನಿಯತವಾಗಿ ನಿರಂತರವಾಗಿ ತಾಳಮದ್ದಳೆ ಕೂಡುಕೂಟವನ್ನು ನಡೆಸುತ್ತದೆ. ಈ ಕಾರಣಕ್ಕಾಗಿಯೇ ಇರಬೇಕು, ಈ ಊರಿನ ಸಾಮಾನ್ಯ ಜನರಿಗೂ ಪುರಾಣಪ್ರಜ್ಞೆ, ಸಾಂಸ್ಕೃತಿಕ ಆಸಕ್ತಿ ಮನುಷ್ಯ ಪ್ರೀತಿ ಮಿಗಿಲಾಗಿದೆ.

ಶಾಲೆ ಕಲಿಯದ ಈ ಊರಿನ ಒಬ್ಬ ಇಸ್ಮಾಯೀಲ್ ಬ್ಯಾರಿ, ಮೋಂತು ಪೊರುಬು ಇವರೆಲ್ಲ ರಾಮನ ಬಗ್ಗೆ, ಕೃಷ್ಣನ ಬಗ್ಗೆ, ಸೀತೆಯ ಬಗ್ಗೆ, ಧರ್ಮರಾಯನ ಬಗ್ಗೆ ಮಾತಾಡಬಲ್ಲವರಾಗಿದ್ದಾರೆ. ದೀಪಾವಳಿ, ಬಿಸು, ಕೆಡ್ಡಸ, ಪೆರ್ನಾಲ್, ಬಕ್ರೀದ್, ಕ್ರಿಸ್ಮಸ್, ದೇವಸ್ಥಾನ, ಭಜನಾ ಮಂದಿರ, ಮಸೀದಿ, ಚರ್ಚು ಎಲ್ಲವೂ ಇರುವ ಈ ಊರಲ್ಲಿ ಶಾಂತಿ ಸಾಮರಸ್ಯವೂ ಕೂಡ ಅಷ್ಟೇ ಗಟ್ಟಿಯಾಗಿ ನೆಲೆಗೊಂಡಿದೆ. ಒಂದು ಸೊಗಸಾದ ಭಾರತ ಈ ಪುಟ್ಟ ಊರಲ್ಲಿ ಜೀವಂತವಾಗಿದೆ.

ಇಲ್ಲೇ ಹುಟ್ಟಿಬಡತನದ ಬಾಲ್ಯದ ಬದುಕನ್ನು ಅನುಭವಿಸಿದ, ಶಾಲೆ ಕಲಿತ, ಯಕ್ಷಗಾನದ ಉಸಿರೆಳೆದುಕೊಂಡ ನಾರಾಯಣರು ಈ ಊರಿನ ಸಾಮಾಜಿಕತೆಯ ತಿರುಳಿಗೆ ಇಳಿದು ಎಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಈ ಊರಿನಲ್ಲಿ ಕತ್ತಿ ಅಷ್ಟೇ ಅಲ್ಲ ಕತ್ತಿ ಮಾಡುವವರು ಸಿಗುತ್ತಾರೆ, ಹಸಿ ಹಸಿಮಡಿಕೆಯಷ್ಟೇ ಅಲ್ಲ ಮಡಿಕೆ ಮಾಡುವ ಕುಂಬಾರರು ಎದುರಾಗುತ್ತಾರೆ, ಅನ್ನವಷ್ಟೇ ಅಲ್ಲ ಭತ್ತ ಬೆಳೆಸುವವರು ಮುಖಾಮುಖಿಯಾಗುತ್ತಾರೆ. ಅಡಿಕೆ ಬೆಳೆಸುವವರೊಂದಿಗೆ ಊರೊಳಗೆ ಹದವಾಗಿ ಕವಳ ಮೆಲ್ಲುತ್ತಾ ಪಟ್ಟಾಂಗ ಹೊಡೆಯುವವರು ಸಿಗುತ್ತಾರೆ. ಮಣ್ಣಿನ ಗೋಡೆಗಳ ಮನೆಯೊಂದಿಗೆ ಮಣ್ಣುಮೆಟ್ಟಿ ಗೋಡೆ ಕಟ್ಟುವವರು ಸಿಗುತ್ತಾರೆ. ಇವರೆಲ್ಲರೊಂದಿಗೆ ಬಾಲ್ಯದಲ್ಲಿ ಬದುಕಿದ್ದ ಭಾವಿಸಿದ್ದ ಲೇಖಕರು ಸುಮಾರು ೨೭ ಲೇಖನಗಳಲ್ಲಿ ದೇಲಂಪಾಡಿಯನ್ನು ಇಷ್ಟಗೊಳಿಸುತ್ತಾರೆ. ಸಾಮಿಪ್ಯ ಮತ್ತು ಜೀವನ ಅನುಭವ ದಟ್ಟವಾಗಿದ್ದಾಗ ಮಾತ್ರ ಈ ರೀತಿಯ ಗ್ರಾಮ ಚಿತ್ರಗಳು ಹುಟ್ಟಿಕೊಳ್ಳಲು ಸಾಧ್ಯ.

ನಾರಾಯಣರು ಕಟ್ಟಿಕೊಡುವ ದೇಲಂಪಾಡಿಯ ಹಸಿರು ನಕ್ಷೆಯಲ್ಲಿ ಊರನ್ನು ದೇಶಾಂತರಗೊಳಿಸುವ ಅನೇಕ ಒಳ ರಸ್ತೆಗಳಲ್ಲಿ ನಮ್ಮನ್ನು ನಡೆಸಲಾಗುತ್ತದೆ. ಇಂಥ ರಸ್ತೆಗಳಲ್ಲೇ ಮೆಲ್ಲ ಮೆಲ್ಲನೆ ದೂರಸರಿದು ನನ್ನ ತಲೆಮಾರಿನವರು ಹೊರಗಡೆಯ ಆಧುನಿಕ ಬೆಳಕನ್ನು ನೋಡಿದವರು, ನಗರದ ರಂಗಿಗೆ ಮರುಳಾದವರು. ಇವತ್ತು ಈ ದೇಶದ ಲಕ್ಷಾಂತರ ಗ್ರಾಮಗಳ ಇಂತಹದ್ದೇ ಕೂಡುರಸ್ತೆಯ ಅಂಚಿನಲ್ಲಿರುವ ಅಂಗಡಿ ಚಾದ ಹೋಟೆಲ್‌ಗಳಲ್ಲಿ ನಿಂತಾಗಲೆಲ್ಲ ಬಾಲ್ಯದ ಚಿತ್ರಗಳು ನಮ್ಮೊಳಗಡೆ ನುಸುಳುತ್ತವೆ.

ನನಗೆ ಈಗಲೂ ನೆನಪಿದೆ, ಪ್ರೌಢಶಾಲೆಯ ನನ್ನ ಹಾದಿ ಹೆಚ್ಚು ಕಡಿಮೆ ಎರಡೂವರೆ ಮೈಲು ದೂರವಿತ್ತು. ಹಾಲು ಕರೆದು ವಾಸುವಣ್ಣನ ಹೋಟೆಲ್‌ಗೆ ಕೊಟ್ಟು ವಾಪಾಸ್ ಸಂಜೆ ಕ್ಯಾನ್ ತಗೊಂಡು ಮನೆಗೆ ಹೊರಡುವಾಗ ಅವರು ಕೊಡುತ್ತಿದ್ದ ಎರಡು ಇಡ್ಲಿ ಮತ್ತು ಚಹ ನನ್ನ ಬದುಕಿನ ಪರಮ ಸುಖಗಳು. ಅದಕ್ಕಿಂತಲೂ ಹೆಚ್ಚು ಎರಡು ಕೈಯಲ್ಲಿ ಪಾಟೆಗಳನ್ನು ಹಿಡಿದು ಅವರು ಏರಿಸಿ ಇಳಿಸಿ ಮಾಡುವ ಮೀಟರ್ ಚಹ! ನನಗಾಗ ಅದೊಂದು ಅದ್ಭುತ ಮ್ಯಾಜಿಕ್ ತರ. ಕೈಕಾಲು ಸರಿ ಇಲ್ಲದ ಲಟಪಟ ಅಲ್ಲಾಡುವ ಬೆಂಚಿಗಳಲ್ಲಿ ಚಾ ಕುಡಿಯುತ್ತಿದ್ದ ರಂಗಣ್ಣ, ರಾಮಣ್ಣ, ದೂಮಣ್ಣರಲ್ಲಿ ಮಾತನಾಡುತ್ತಲೇ ವಾಸುವಣ್ಣ ಮೀಟರ್‌ನಷ್ಟು ಎತ್ತರದಿಂದ ಕೆಳಗಡೆಯ ಪಾಟೆಗೆ ಚಹ ಸುರಿದು ಅದ್ಭುತ ರುಚಿ ತರಿಸುತ್ತಿದ್ದರು. ಎಲ್ಲೋ ನೋಡುತ್ತಿದ್ದ ಏನೋ ಮಾತನಾಡುತ್ತಿದ್ದ ಅವರು ಒಂದು ಹನಿ ಚಹ ಆಚೆ ಈಚೆ ರಟ್ಟದ ಹಾಗೆ ಕೆಳಗಡೆಯ ಪಾಟೆಗೆ ಚೊಯೋ ಎಂದು ಸುರಿಯುತ್ತಿದ್ದದ್ದು ಹೇಗೆ ಎಂಬುದು ಇವತ್ತಿನ ಮಕ್ಕಳಿಗೆ ಅದ್ಭುತ ಜೋದ್ಯವೇ. ಇವತ್ತಿನದೇನಿದ್ದರೂ ಇಂಚು ಚಹ. ಅವತ್ತಿನದ್ದು ಮೀಟರ್ ಚಹ.

ದೇಲಂಪಾಡಿಯ ಈ ಪುಸ್ತಕ ಯೂನಿವರ್ಸಿಟಿ ಶಿಸ್ತಿನ ಗ್ರಾಮ ಅಧ್ಯಯನ ಅಲ್ಲವೇ ಅಲ್ಲ. ಪ್ರಶ್ನಾವಳಿ ಸಿದ್ಧಗೊಳಿಸಿ, ಗ್ರಾಮದೊಳಗಡೆ ನುಸುಳಿ ಅವರಿವರನ್ನು ಪ್ರಶ್ನಿಸಿ ಪಡೆದ ಉತ್ತರಗಳ ಕ್ರೋಡೀಕರಣ, ಸಮೀಕ್ಷೆ, ವಿಶ್ಲೇಷಣೆಯಲ್ಲ. ಬದಲಾಗಿ ಆ ನೆಲದಲ್ಲಿ ಹುಟ್ಟಿ ಬದುಕುತ್ತಾ, ಭಾವಿಸುತ್ತಾ ಗಳಿಸಿದ ಜೀವನಾನುಭವದಿಂದ ಮೂಡಿ ಬಂದ ಸೊಗಸಾದ ಲಲಿತ ಪ್ರಬಂಧಗಳ ಮಾದರಿಯ ಒಳನೋಟಗಳು. ಈ ಕೃತಿ ಹಳ್ಳಿ ನಕ್ಷೆಯಲ್ಲಿ ಮೇಲಿಂದ ಕೆಳಗಡೆಯಲ್ಲ, ಕೆಳಗಡೆಯಿಂದ ಮೇಲೆ ಚಲಿಸುತ್ತದೆ. ಈ ದೇಶದ ಅಭಿವೃದ್ಧಿ ನಕ್ಷೆಯ ಮೂಲ ಬಿಂದು ಇರುವುದು ಪರಿಧಿಯ ಅಂಚಿನಕಟ್ಟ ಕಡೆಯ ಗ್ರಾಮಗಳಲ್ಲಿ. ಅಲ್ಲಿಯ ಮನುಷ್ಯ ಸಹವಾಸ ಸಂಬಂಧದ ಬಂಧುತ್ವದ ನೆಲೆಯಲ್ಲಿ. ಲೇಖಕರು ಹತ್ತಾರು ಪ್ರಾಮಾಣಿಕ ದುಡಿಮೆಗಾರರನ್ನು ಇಲ್ಲಿ ನೆನಪು ಮಾಡಿಕೊಂಡಿದ್ದಾರೆ. ಯಕ್ಷಗಾನ ಕೇಂದ್ರವನ್ನು ಕಟ್ಟಿದವರಷ್ಟೇ ಇಲ್ಲಿ ಮಂಡೆ ಎಂಬ ಕೂಲಿ ಕೆಲಸದ ದುಡಿಮೆಗಾರರು ಮುಖ್ಯವಾಗುತ್ತಾರೆ. ಜಂಬರಗಳ ದಿನ ಊರೊಟ್ಟಿನ ಜನ ಪರಸ್ಪರ ಜಾತಿ, ಮತ, ಧರ್ಮ, ಭಾಷೆ ಮರೆತು ಬೆರೆತು, ಅದರ ಯಶಸ್ಸಿಗೆ ಕಾರಣವಾಗುವುದು, ಹಾಕಿದ ಚಪ್ಪರದ ಮಡಲಿನ ತಟ್ಟಿಗಳನ್ನು ಅಲ್ಲಿಂದ ಮತ್ತೆ ಇನ್ನೊಂದು ಕಾರ್ಯಕ್ರಮಕ್ಕೆ ಹಸ್ತಾಂತರಿಸುವುದು ಕೂಡ ಇಲ್ಲಿ ಮುಖ್ಯವೇ. ಒಂದೊಂದು ಜಾತಿಯ, ಧರ್ಮದವರ ಜಂಬರದ ಊಟದ ರುಚಿ -ಸಂಭ್ರಮ ಇವೆಲ್ಲದರ ಒಳವಿವರ ಖುಷಿಕೊಡುತ್ತದೆ. ಹಳ್ಳಿಯ ಕುಶಲಿಗರ ಬಹುತ್ವ ಬುದ್ಧಿಶಕ್ತಿ ಇಲ್ಲಿ ಅನಾವರಣಗೊಂಡಿದೆ. ಮೊತ್ತ ಮೊದಲ ಬಾರಿಗೆ ಆ ಊರಿಗೆ ಬಂದ ರೇಡಿಯೊ, ಟೇಪು, ಟೀವಿ, ಟೆಲಿಫೋನ್‌ಗಳು, ಅವುಗಳೊಂದಿಗೆ ಜನರ ಮುಖಾಮುಖಿ, ಮಣಿಯಾಣಿ ಹೋಟೆಲಿನ ನೈಯಪ್ಪ, ಪೇರ್, ಕಸಾಯ ಇವೆಲ್ಲವೂ ಕೂಡ ಊರು ಕಟ್ಟುವ ಪಾಲು ಭಾಗಗಳಾಗಿಯೇ ಕಾಣಿಸಿಕೊಳ್ಳುತ್ತವೆ. ಶ್ರೀಮಂತ ಮಧ್ಯಮ ವರ್ಗದವರಿಗಿಂತ ಬಡವರೊಂದಿಗೆ ಹೆಚ್ಚು ಬದುಕಿದ್ದ ಲೇಖಕರು ಹಳ್ಳಿ ಜಾಣ್ಮೆಯ ಹತ್ತಾರು ಮಾದರಿಗಳನ್ನು ತೆರೆದಿಡುತ್ತಾರೆ.

(ನಾರಾಯಣ ದೇಲಂಪಾಡಿ ಸಂಪರ್ಕ: ೮೯೨೧೬೭೨೫೫೮)


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ನರೇಂದ್ರ ರೈ ದೇರ್ಲ

contributor

Similar News