ಚೇತನ ವಿಶೇಷ ಶಾಲೆಯಲ್ಲೊಂದು ಹೊಸತನ: ಬೋಧನೆಗೆ ಬಂದ ಜರ್ಮನ್ ಯುವತಿ
ಕಾರ್ಕಳ, ಜ.5: ‘‘ಭಾರತೀಯ ಶಿಕ್ಷಣ ಪದ್ಧತಿ ವಿಭಿನ್ನ. ಇಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಹಿರಿಯರನ್ನು ಗೌರವಿಸುವ ಶಿಕ್ಷಣ ಸಿಗುತ್ತಿರುವುದನ್ನು ನಾನು ಕಂಡಿದ್ದೇನೆ. ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಸತ್ಪ್ರಜೆಯಾಗಿ ತೊಡಗಿಸಿಕೊಳ್ಳಲು ಪರಿಪೂರ್ಣವಾದ ಶಿಕ್ಷಣ ಇಲ್ಲಿ ಸಿಗುತ್ತಿದೆ. ಜರ್ಮನಿಯ ಶಿಕ್ಷಣವು ನಿರ್ದಿಷ್ಟ ಉದ್ದೇಶವನ್ನು ಈಡೇರಿಸಿಕೊಳ್ಳಲು ಮಾತ್ರ ದೊರಕುವ ಬೋಧನೆ ಹೊರತು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಣವಲ್ಲ’’ ಎಂದು ನುಡಿದವರು ಕಾರ್ಕಳದಲ್ಲಿ ಹಲವು ತಿಂಗಳಿಂದ ನೆಲೆಸಿರುವ ಜರ್ಮನ್ ಯುವತಿ ಜುಲೀನಾ.
ಜರ್ಮನಿಯ ಪೀಟರ್ ಮತ್ತು ಪೆಟ್ರಾ ದಂಪತಿಯ ಪುತ್ರಿಯಾಗಿರುವ 18ರ ಯುವತಿ ಜುಲೀನಾ ಕಾರ್ಕಳ ಚೇತನಾ ವಿಶೇಷ ಶಾಲೆಯಲ್ಲಿ ಕಳೆದ ಹಲವು ತಿಂಗಳಿಂದ ಅತಿಥಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹನ್ನೆರಡನೆ ತರಗತಿ ಓದುತ್ತಿರುವ ಆಕೆ ಪ್ರೊಜೆಕ್ಟ್ ವರ್ಕ್‌ನ ಕಾರ್ಯ ನಿಮಿತ್ತ ಭಾರತಕ್ಕಾಗಮಿಸಿದ್ದು, ಈ ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗೆ ಪಠ್ಯವನ್ನು ಬೋಧಿಸುತ್ತಿದ್ದಾರೆ.
ಇಂಗ್ಲಿಷ್ ಭಾಷೆಯನ್ನು ವಿಕಲಚೇತನ ಮಕ್ಕಳಿಗೆ ಪರಿಚಯಿಸುತ್ತಿದ್ದಾರೆ. ಜೊತೆಗೆ ಮಕ್ಕಳನ್ನು ಆಡಿಸುತ್ತಾರೆ, ಕೈ ಹಿಡಿದು ನಡೆಸುತ್ತಾರೆ, ಅವರೊಂದಿಗೆ ಬೆರೆತು ಬಾಳುತ್ತಿದ್ದಾರೆ. ಕನ್ನಡದ ಬಗ್ಗೆ ಒಂದಿಷ್ಟು ತಿಳಿಯದ ಆಕೆ ಕನ್ನಡ ಮಾತನಾಡುವ ಮಕ್ಕಳ ಜೊತೆ ಪೂರ್ಣವಾಗಿ ಬೆರೆಯುತ್ತಿದ್ದಾರೆ. ಕನ್ನಡವನ್ನು ಅರ್ಥೈಸಿಕೊಳ್ಳಲು ಕೂಡಾ ಪ್ರಯತ್ನಿಸುತ್ತಿರುವ ಇವರು ಅಲ್ಪಸ್ವಲ್ಪ ಕನ್ನಡ ಭಾಷೆ ಮಾತನಾಡುತ್ತಿರುವುದು ವಿಶೇಷವಾಗಿದೆ.
‘‘ಇಲ್ಲಿರುವ ವಾತಾವರಣ ನನಗೆ ಅತ್ಯಂತ ಪ್ರಿಯವಾಗಿದೆ. ರುಚಿಕರವಾದ ಊಟೋಪಚಾರ ಕೂಡಾ ನನಗೆ ಖುಷಿಕೊಟ್ಟಿದೆ. ವಿಕಲಚೇತನರಾದ ಈ ಮಕ್ಕಳು ಕೂಡಾ ಸುಂದರ ಪರಿಸರದಲ್ಲಿ ದೈಹಿಕವಾಗಿ ಶಕ್ತರಾಗಿ ಬಾಳಬೇಕೆಂಬ ಆಸೆ ನನಗಿದೆ. ಅದಕ್ಕಾಗಿ ನನ್ನಿಂದಾದ ಸಹಕಾರವನ್ನು ಮಾಡಲಿದ್ದೇನೆ. ಇಲ್ಲಿ ನೀಡಲಾಗುವ ಶಿಕ್ಷಣ ಅದರ ಜೊತೆ ನೃತ್ಯ, ಯೋಗ, ಆಟೋಟಗಳು ಕೂಡಾ ನನಗೆ ಅತ್ಯಂತ ಪ್ರಿಯ’’ ಎನ್ನುತ್ತಾರೆ ಜುಲೀನಾ.
ಇಲ್ಲಿನ ಸಂಸ್ಕೃತಿಯನ್ನರಿತುಕೊಂಡು ಬಾಳಲು ಜುಲೀನಾ ಪ್ರಯತ್ನಿಸಿದ್ದಾರೆ. ಜೊತೆಗೆ ಸ್ನೇಹಿಯಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ವಿದೇಶಿ ಮಹಿಳೆಯಾದರೂ ನಮ್ಮ ಜೀವನ ಶೈಲಿಯನ್ನೇ ಪ್ರಸ್ತುತ ಅನುಸರಿಸಿಕೊಂಡಿದ್ದಾರೆ. -ಕಾಂತಿ ಹರೀಶ್, ಮುಖ್ಯ ಶಿಕ್ಷಕಿ