ಸುಗಮ ಸಂಚಾರದ ರೂವಾರಿ ‘ರಹ್ಮಾನ್ ಪಟೇಲ್’: ಬಿ.ಸಿ.ರೋಡ್ ಕೈಕಂಬದಲ್ಲಿ ಉಚಿತ ಟ್ರಾಫಿಕ್ ಸೇವೆ

Update: 2016-01-10 18:38 GMT

ಬಂಟ್ವಾಳ, ಜ. 10: ಉದ್ದತೋಳಿನ ಬಿಳಿ ಅಂಗಿ, ಖಾಕಿ ಪ್ಯಾಂಟ್, ತಲೆಗೊಂದು ಟೋಪಿ, ಬಾಯ ಲ್ಲೊಂದು ಕಪ್ಪು ಬಣ್ಣದ ಸೀಟಿ ಇಟ್ಟುಕೊಂಡು ಬಿ.ಸಿ.ರೋಡ್ ಮತ್ತು ಸಮೀಪದ ಕೈಕಂಬದಲ್ಲಿ ಟ್ರಾಫಿಕ್ ಪೊಲೀಸ್ ರೀತಿಯಲ್ಲಿ ವಾಹನ ಗಳನ್ನು ನಿಯಂತ್ರಿಸುವ ವ್ಯಕ್ತಿಯೊಬ್ಬರನ್ನು ನೀವು ಕಂಡಿರಬಹುದು. ಈ ವ್ಯಕ್ತಿಯನ್ನು ಹೆಚ್ಚಿನವರು ಟ್ರಾಫಿಕ್ ಪೊಲೀಸ್ ಎಂದೇ ಭಾವಿಸುತ್ತಾರೆ. ಅಸಲಿಗೆ ಆ ವ್ಯಕ್ತಿ ಟ್ರಾಫಿಕ್ ಪೊಲೀಸ್ ಆಗಿರದೆ ಸ್ವ ಇಚ್ಚೆಯಿಂದ ಉಚಿತ ಟ್ರಾಫಿಕ್ ಸೇವೆ ನೀಡುತ್ತಿರುವ ಓರ್ವ ಸಾಮಾಜಿಕ ಸೇವಾಕರ್ತ.

ಪ್ರತಿಷ್ಠಿತ ಬಂಟ್ವಾಳ ದೊಡ್ಡಮನೆ ಮನೆತನದ ಅಬ್ದುಲ್ ಖಾದರ್ ಪಟೇಲ್ ಹಾಜಿ ಮತ್ತು ಅಲಿಮಮ್ಮ ದಂಪತಿಯ ಮೂವರು ಮಕ್ಕಳ ಪೈಕಿ ಡಿ.ಎ.ಅಬೂಬಕರ್ ಪಟೇಲ್‌ರ ಪುತ್ರ ಡಿ.ಎ. ರಹ್ಮಾನ್ ಪಟೇಲ್ ಈ ಸಾಮಾಜಿಕ ಸೇವಾಕರ್ತ.

ರಹ್ಮಾನ್ ಪಟೇಲ್ ತನ್ನ ಸಮವಸ್ತ್ರದಲ್ಲಿ ರಸ್ತೆಯಲ್ಲಿ ಬಂದು ನಿಂತರೆ ಸಾಕು ಟ್ರಾಫಿಕ್ ಜಾಮ್ ಸಮಸ್ಯೆ

ಯಿಲ್ಲ. ವಾಹನಗಳ ನೂಕುನುಗ್ಗಲೂ ಇಲ್ಲ. ಚಾಲಕರು ಟ್ರಾಫಿಕ್ ನಿಯಮ ಮೀರಿ ಹೋಗುವಂತೆಯೂ ಇಲ್ಲ. ಪಾದಚಾರಿಗಳು ರಸ್ತೆ ದಾಟಲು ಸಂಕಷ್ಟಪಡಬೇಕಾಗಿಯೂ ಇಲ್ಲ. ಎಲ್ಲವೂ ಸಲೀಸಾಗಿ ನಡೆಯುತ್ತವೆ. 54 ವರ್ಷ ಪ್ರಾಯದ ರಹ್ಮಾನ್ ಪಟೇಲ್ 26 ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಿಯಾಗಿದ್ದರು. ಅದರಲ್ಲಿ 6 ವರ್ಷ ಮಿಲಿಟರಿ ಕ್ಯಾಂಪ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. 3 ವರ್ಷಗಳ ಹಿಂದೆ ವಿದೇಶ ದಿಂದ ಊರಿಗೆ ಮರಳಿದ ಅವರು ಕೈಕಂಬದಲ್ಲಿ ಸಣ್ಣ ವ್ಯಾಪಾರ ಆರಂಭಿಸಿದ್ದರು.

ಅದು ಕೈ ಹಿಡಿಯದ ಕಾರಣ ಬಿ.ಸಿ.ರೋಡ್‌ನ ಡ್ರೈವಿಂಗ್ ತರಬೇತಿ ಶಾಲೆ ಯಲ್ಲಿ ತರಬೇತುದಾರರಾಗಿ ತನ್ನ ಅನ್ನ ಸಂಪಾದಿ ಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗಿನ ತನ್ನ ಕೆಲಸದ ಬಿಡುವಿನ ಸಮಯದಲ್ಲಿ ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಹಾಗೂ ಪ್ರತಿದಿನ ಸಂಜೆ 5:30ರಿಂದ 7:30ರವರೆಗೆ ಕೈಕಂಬ ವೃತ್ತದಲ್ಲಿ ಉಚಿತ ಟ್ರಾಫಿಕ್ ಸೇವೆ ನೀಡುತ್ತಾರೆ. ಟ್ರಾಫಿಕ್ ನಿಯಮವನ್ನು ತಿಳಿದಿರುವ ಅವರು, ವಾಹನ ದಟ್ಟಣೆ ನಿಯಂತ್ರಣ, ನಾಲ್ಕು ದಿಕ್ಕುಗಳಿಂದ ನುಗ್ಗಿ ಬರುವ ವಾಹನಗಳ ಸುಲಭ ಸಂಚಾರಕ್ಕೆ ಅವಕಾಶ, ರಸ್ತೆ ದಾಟಲು ಪಾದಚಾರಿಗಳಿಗೆ ಅನುವು ಮಾಡಿಕೊಡುತ್ತಾರೆ. ಟ್ರಾಫಿಕ್ ನಿಯಮ ಮೀರುವ ವಾಹನ ಚಾಲಕರನ್ನು ನಿಲ್ಲಿಸಿ ಸ್ಥಳದಲ್ಲೇ ಸಂಚಾರ ಪಾಠ ಹೇಳಿಕೊಡುವುದು ರಹ್ಮಾನ್ ಪಟೇಲ್‌ರ ಕಾಯಕ.

ಬಿ.ಸಿ.ರೋಡ್, ಕೈಕಂಬ ದಿನನಿತ್ಯ ವಾಹನ ದಟ್ಟಣೆ ಇರುವ ಸ್ಥಳ. ಬೆಳಗ್ಗೆ ಮತ್ತು ಸಂಜೆ ವೇಳೆಯಂತೂ ಇಲ್ಲಿನ ಟ್ರಾಫಿಕ್ ಜಂಜಾಟ ಹೇಳಿ ತೀರದು. ರಹ್ಮಾನ್ ಪಟೇಲ್ ಸ್ವ ಇಚ್ಛೆಯಿಂದ ಇಲ್ಲಿ ಉಚಿತ ಸೇವೆ ನೀಡುವ ಮೂಲಕ ಹೆಚ್ಚಿನ ಟ್ರಾಫಿಕ್ ಜಂಜಾಟವನ್ನು ನೀಗಿಸುತ್ತಿದ್ದಾರೆ. ಇದರಿಂದ ವಾಹನ ಸವಾರರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೆ ಕೂಡ ಅನುಕೂಲವಾಗುತ್ತಿದೆ. ರಹ್ಮಾನ್ ಪಟೇಲ್ ಪ್ರತಿಷ್ಠಿತ ಮನೆತನದಿಂದ ಬಂದವರಾಗಿದ್ದರೂ ಇದೀಗ ಪತ್ನಿ, ಮಗನೊಂದಿಗೆ ಕೈಕಂಬದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.

ಬಿ.ಸಿ.ರೋಡ್ ಮೇಲ್ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಂ ಈ ಕೆಲಸಕ್ಕೆ ನನ್ನನ್ನು ಪ್ರೇರೇಪಿಸಿತು. ಉಚಿತ ಟ್ರಾಫಿಕ್ ಸೇವೆ ನೀಡಲು ಪೊಲೀಸ್ ಇಲಾಖೆಯಿಂದಲೂ ನಾನು ಅನುಮತಿ ಪತ್ರವನ್ನು ಪಡೆದಿದ್ದೇನೆ. ಅಪಘಾತ, ಟ್ರಾಫಿಕ್ ಜಾಂ ರಹಿತ ಸುಗಮ ಸಂಚಾರವೇ ನನ್ನ ಉದ್ದೇಶ.
-ರಹ್ಮಾನ್ ಪಟೇಲ್

ಸವಾರರಿಗೆ, ನಿರ್ಗತಿಕರಿಗೆ ಆಪತ್ಬಾಂಧವ

ಡಿ.ಎ.ರಹ್ಮಾನ್ ಪಟೇಲ್‌ರ ಸೇವೆ ಬರೇ ಟ್ರಾಫಿಕ್ ನಿರ್ವಹಣೆಗೆ ಸೀಮಿತವಲ್ಲ. ಎಲ್ಲೇ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಿಯಾಗುವ ಹೊಂಡ ಕಂಡರೆ ಅದಕ್ಕೆ ಮಣ್ಣು, ಕಲ್ಲು ಹಾಕಿ ಮುಚ್ಚು ತ್ತಾರೆ. ಮುಚ್ಚಲಾಗದಷ್ಟು ದೊಡ್ಡಮಟ್ಟದ ಹೊಂಡಗಳಿದ್ದರೆ ಸುತ್ತಲೂ ಕಲ್ಲು ಗಿಡಗಳನ್ನು ಇಟ್ಟು ಸಂಭವನೀಯ ಅಪಘಾತಗಳನ್ನು ತಪ್ಪಿಸುತ್ತಾರೆ. ಅಲ್ಲದೆ, ವಾರಸುದಾರರಿಲ್ಲದೆ ರಸ್ತೆ ಬದಿ ಸುತ್ತಾಡುವ ನಿರ್ಗತಿಕರನ್ನು ಕಂಡರೆ ಸ್ವಂತ ಮನೆಯಿಂದಲೇ ಅನ್ನ-ಪಾನೀಯ ತಂದು ಕೊಟ್ಟು ಆರೈಕೆ ಮಾಡುತ್ತಾರೆ. ರೋಗ ಪೀಡಿತರಾಗಿದ್ದರೆ ಅವರನ್ನು 108 ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳಿಸಿಕೊಡುತ್ತಾರೆ. ವಾಹನ ಸವಾರರು ಹಾಗೂ ನಿರ್ಗತಿಕರಿಗೆ ಆಪತ್ಪಾಂಧವರಾಗಿಯೂ ರಹ್ಮಾನ್ ಪಟೇಲ್ ತನ್ನನ್ನು ತೊಡಗಿಸಿಕೊಂಡಿದ್ದಾರೆ.

Writer - ಎಂ.ಇಮ್ತಿಯಾಝ್ ತುಂಬೆ

contributor

Editor - ಎಂ.ಇಮ್ತಿಯಾಝ್ ತುಂಬೆ

contributor

Similar News