ಬದಲಾಗದ ಕಾರ್ಕಳ ಪುರಸಭೆಯ ಕಾರ್ಯವೈಖರಿ: ಹೇಳುವುದು ಒಂದು ಮಾಡುವುದು ಇನ್ನೊಂದು

Update: 2016-01-20 18:42 GMT

ಕಾರ್ಕಳ, ಜ.20: ಪಕ್ಷ ಬದಲಾದರೂ, ಹೊಸ ಆಡಳಿತ ಬಂದರೂ ಕಾರ್ಕಳ ಪುರಸಭೆಯ ಕಾರ್ಯವೈಖರಿ ಮಾದರಿ ಮಾತ್ರ ಒಂದೇ ಆಗಿದ್ದು, ‘‘ಹೇಳುವುದು ಒಂದು ಮಾಡುವುದು ಇನ್ನೊಂದು’’ ಎಂಬ ನಾಣ್ಣುಡಿ ಪುರಸಭೆಗೆ ಹೆಚ್ಚು ಸಮರ್ಪಕವಾಗಿ ಸಲ್ಲುತ್ತದೆ.

ಪುರಸಭೆಯ ನಿರ್ಣಯಗಳಿಗೂ ಅನುಷ್ಠಾನಕ್ಕೂ ಸಂಬಂಧವೇ ಇಲ್ಲವೇನೋ ಎಂಬ ರೀತಿ ಇಲ್ಲಿನ ಪುರಸಭೆಯ ಆಡಳಿತದ ನಿರ್ವಹಣೆಯಲ್ಲಿ ವೈಫಲ್ಯದ ಸರಮಾಲೆ ಎದ್ದು ಕಾಣುತ್ತದೆ. ಮಾಮೂಲಿ ಅನುದಾನಗಳ ಜೊತೆ ವಿಶೇಷ ಅನುದಾನಗಳು, ಸಾಕಷ್ಟು ಪ್ರಮಾಣದಲ್ಲಿ ಪುರಸಭೆಗೆ ಹರಿದು ಬಂದಿದ್ದರೂ ಅವುಗಳ ಸಂಯೋಜಿತ ಬಳಕೆಯಲ್ಲಿ ಪುರಸಭೆ ಸೋತಿದೆ. ಸ್ವಚ್ಛತೆ ವಿಚಾರದಲ್ಲಿ ಕಾರ್ಕಳ ಪುರಸಭೆ ಉತ್ತಮ ನಿರ್ವಹಣೆ ತೋರಿದ್ದು, ಅದಕ್ಕಾಗಿ ರಾಷ್ಟ್ರ, ರಾಜ್ಯಮಟ್ಟಗಳಲ್ಲಿ ವಿಶೇಷ ಪ್ರಶಸ್ತಿ ತಂದುಕೊಟ್ಟಿರುವುದು ಬಿಟ್ಟರೆ, ಉಳಿದಂತೆ ಪುರಸಭೆ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಸಾಕಷ್ಟು ಆಕ್ಷೇಪ, ಅಸಮಾಧಾನ, ಆಕ್ರೋಶಗಳಿವೆ.

ಬಗೆಹರಿಯದ ಬಸ್ ನಿಲ್ದಾಣ ಸ್ಥಳಾಂತರ

10-15 ವರ್ಷಗಳಿಂದ ಕಾರ್ಕಳಕ್ಕೆ ಸುಸಜ್ಜಿತ ಬಸ್ ನಿಲ್ದಾಣದ ಬಗ್ಗೆ ನಿರಂತರ ಬೇಡಿಕೆಗಳು ಕೇಳಿ ಬಂದಿತ್ತು. ಪರಿಣಾಮವಾಗಿ ನಗರದ ಬಂಡೀಮಠದಲ್ಲಿ ವಿಶಾಲವಾದ ಬಸ್ ನಿಲ್ದಾಣ ನಿರ್ಮಾಣವಾಯಿತು. ಅತ್ಯುತ್ತಮ ಮತ್ತು ಅತ್ಯಂತ ಸಮರ್ಪಕ ಸ್ಥಳವೆನ್ನುವ ಕಾರಣಕ್ಕೆ ಆಯ್ಕೆಯಾದ ಈ ಸ್ಥಳದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಯಿತು. ಆದರೆ ಜನರ ಬಳಕೆಗೆ ದೊರಕ ಬೇಕಿದ್ದ ನೂತನ ಬಸ್ ನಿಲ್ದಾಣ ಪ್ರಾಣಿಗಳ ವಿಶ್ರಾಂತಿಗೆ ಮೀಸಲಾಗಿ ಅನಾಥವಾಗಿ ನಿರುಪಯೋಗಿಯಾಗಿ ಉಳಿದು ಬಿಟ್ಟಿತು. ಅಚ್ಚರಿಯೆಂದರೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿಯವರ ಕಾಲದಿಂದ ಮಂಜೂರಾತಿಗೊಂಡು, ಆಮೆಗತಿಯಲ್ಲಿ ನಿಲ್ದಾಣದ ಕಾಮಗಾರಿ ನಡೆದು ಕೊನೆಗೆ ಸದಾನಂದ ಗೌಡರಿಂದ ಉದ್ಘಾಟನೆಗೊಂಡಿತು. ಆದರೆ ಈ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೊಳ್ಳಲಾಗಲಿ, ಪ್ರಯಾಣಿಕರು ಈ ಬಸ್‌ನಿಲ್ದಾಣವನ್ನು ಬಳಸಲು ಅವಕಾಶ ಸಿಗಲೇ ಇಲ್ಲ. ವಿಪರ್ಯಾಸ ಎಂದರೆ ಯಾವ ಮುಖ್ಯಮಂತ್ರಿ ಈ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದರೋ ಅವರೇ ನೂತನ ನಿವೇಶನಕ್ಕೆ ಕಾರ್ಕಳ ಬಸ್ ನಿಲ್ದಾಣವನ್ನು ಸ್ಥಳಾಂತರಿಸದಂತೆ ಮೌಖಿಕ ತಡೆ ನೀಡಿದರು.

ಮುಖ್ಯರಸ್ತೆ ವಿಸ್ತರಣೆಯ ಬೀದಿನಾಟಕ!

ಬಸ್ ನಿಲ್ದಾಣ ವಿವಾದದಂತೆ ಕಾರ್ಕಳ ಮುಖ್ಯರಸ್ತೆ ವಿಸ್ತರಣೆ ಕೂಡಾ ಬಹುದೀರ್ಘ ಕಾಲದ ಬೇಡಿಕೆ ಎಂಬುದೇನೋ ನಿಜ. ಯಾವಾಗ ಬಂಡೀಮಠ ಬಸ್‌ನಿಲ್ದಾಣ ನಿರ್ಮಾಣ ಪೂರ್ಣಗೊಂಡು ಕಾರ್ಕಳ ಬಸ್ ನಿಲ್ದಾಣ ಅಲ್ಲಿಗೆ ಸ್ಥಳಾಂತರಗೊಳ್ಳುತ್ತದೆ ಎಂಬುದು ಖಾತ್ರಿಯಾಯ್ತೋ ಆ ಸಂದರ್ಭ ನಗರದ ವ್ಯಾಪಾರಿ ಲಾಬಿ ಎಚ್ಚೆತ್ತುಕೊಂಡು ಬಿಟ್ಟಿತ್ತು. ಅದೇ ಸಮಯಕ್ಕೆ ರಸ್ತೆ ವಿಸ್ತರಣೆಗೆ ಉಡುಪಿ ಜಿಲ್ಲಾಧಿಕಾರಿ ಪುರಸಭೆಯ ಮೇಲೆ ಒತ್ತಡ ತಂದ ಕಾರಣ ರಸ್ತೆ ವಿಸ್ತರಣೆ ಅನಿವಾರ್ಯವೆನಿಸಿತ್ತು. ಅದಕ್ಕಾಗಿ ಕಾರ್ಕಳದ ಹಳೆ ಬಸ್ ನಿಲ್ದಾಣವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಮುಖ್ಯರಸ್ತೆ ಅಗಲೀಕರಣಕ್ಕೆ ಸಮ್ಮತಿಸುವ ನಾಟಕ ಮಾಡಿತು. ರಸ್ತೆ ಬದಿಯಿಂದ ಎರಡೂ ಕಡೆ ತಲಾ 7 ಅಡಿ ಜಾಗವನ್ನು ಬಿಟ್ಟು ಕೊಡುವುದಕ್ಕೆ ಸಮ್ಮತಿಸಿ, ಇನ್ನೊಂದೆಡೆ ಬಂಡೀಮಠಕ್ಕೆ ಬಸ್ ನಿಲ್ದಾಣ ಸ್ಥಳಾಂತರ ಕೈ ಬಿಡುವ ನಿಟ್ಟಿನಲ್ಲಿ ಆಂತರಿಕವಾಗಿ ಪ್ರಯತ್ನಿಸಿ ಯಶಸ್ವಿಯಾಯಿತು.

ಹಾವೂ ಸಾಯಲಿಲ್ಲ-ಕೋಲು ಮುರಿದಿಲ್ಲ!
ರಸ್ತೆ ಅಗಲೀಕರಣ ನಾಟಕದಿಂದ ‘ಹಾವು ಸಾಯಲಿಲ್ಲ-ಕೋಲು ಮುರಿಯಲಿಲ್ಲ’ ಎಂಬುದು ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಖ್ಯಾತಿ ಪಡೆಯಿತು. ರಸ್ತೆ ಅಗಲೀಕರಣಕ್ಕೆ ಜಾಗ ತೆರವುಗೊಳಿಸಿ ಅದೇ ಸ್ಥಳ ಬಳಸಿ ಹಳೆಯ ಕಟ್ಟಡ ತೆಗೆದು ಹೊಸ ಕಟ್ಟಡ ಕಟ್ಟಿಕೊಳ್ಳಲು ಜಿಲ್ಲಾಧಿಕಾರಿಯವರ ರಸ್ತೆ ಅಗಲೀಕರಣದ ಒತ್ತಡವನ್ನು ತಮ್ಮ ಅನುಕೂಲಕ್ಕೆ ವ್ಯಾಪಾರಿಗಳು ಪರಿವರ್ತಿಸಿಕೊಂಡರು.

ಮತ್ತೆ ಚರಂಡಿ ರಾದ್ಧಾಂತ!

ಇದೀಗ ರಸ್ತೆ ಅಗಲೀಕರಣ ಕೆಲಸ ಪೂರ್ಣಗೊಂಡಿದೆ ಎಂದು ಘೋಷಿಸಿದ ಪುರಸಭೆ, ರಸ್ತೆ ಇಕ್ಕೆಲಗಳಲ್ಲಿ ಮಳೆ ನೀರು ಹರಿಯುವ ಚರಂಡಿ ನಿರ್ಮಾಣದ ಕೆಲಸ ಕೈಗೆತ್ತಿಕೊಂಡಿದೆ. ಈ ಚರಂಡಿ ಯೋಜನೆ ಕೂಡಾ ಹಳೆಯ ರಸ್ತೆ ಅಗಲೀಕರಣ ಮಾದರಿಯಲ್ಲೇ ಮುಂದುವರಿದಿದೆ. ಪ್ರಭಾವಿಗಳ ಕಟ್ಟಡಗಳು ಬಂದಾಗ ಚರಂಡಿ ರಸ್ತೆಯ ಮೇಲೆಯೇ ನಿರ್ಮಾಣಗೊಂಡರೆ, ಈಗಾಗಲೇ ಜಮೀನು ಬಿಟ್ಟುಕೊಟ್ಟವರ ಜಮೀನಿನಲ್ಲಿ ಅವರ ಅಳಿದುಳಿದ ಹಳೆ ಕಟ್ಟಡಗಳ ಅಡಿಯಲ್ಲೇ ಚರಂಡಿ ಕೊರೆಯಲಾಗುತ್ತಿರುವುದು ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಸಮರ್ಪಕ ಹಾಗೂ ಪಕ್ಷಪಾತ ನೀತಿಯ ರಸ್ತೆ ಅಗಲೀಕರಣದಿಂದಾಗಿ ಚರಂಡಿ ನಿರ್ಮಾಣವು ಅದೇ ಹಾದಿಯಲ್ಲಿ ಸಾಗುವುದು ಅನಿವಾರ್ಯವೂ, ಸಹಜವೂ ಆಗಿದೆ. ಕಾರ್ಕಳದ ಹಾಲಿ ಬಸ್ ನಿಲ್ದಾಣ ಹಾಗೂ ಮುಖ್ಯರಸ್ತೆಯ ಕೊರಳ ಭಾಗದಲ್ಲಿ ಇರುವ ರಸ್ತೆ, ಮೂರು ಮಾರ್ಗ ಜಂಕ್ಷನ್ ಪರಿಸರ ಹಾಗೂ ಪುರಸಭೆ ಆಡಳಿತ ಕಟ್ಟಡಗಳಿರುವ ರಸ್ತೆ ಮುಂಭಾಗ ಪ್ರಭಾವಿಗಳು ರಸ್ತೆ ಅಗಲೀಕರಣ ಪ್ರಸ್ತಾಪ ಸ್ಫೋಟಗೊಳ್ಳುತ್ತಲೇ ತಮಗೆ ಬೇಕಾದಂತೆ ಕಟ್ಟಡ ನಿರ್ಮಾಣ ಮಾಡಿದ್ದರು. ಈ ಮೂರು ಪ್ರಮುಖ ಇಕ್ಕಟ್ಟಿನ ಸ್ಥಳಗಳಲ್ಲಿ ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆದೇ ಇಲ್ಲ. ವಾಸ್ತವವಾಗಿ ಎಲ್ಲಿ ರಸ್ತೆ ಸಹಜವಾಗಿ ಅಗಲವಿತ್ತೋ ಹಾಗೂ ಎಲ್ಲಿ ಟ್ರಾಫಿಕ್ ಅಡಚಣೆ ಇರದೆ ಇದ್ದ ಸ್ಥಳಗಳಲ್ಲಿ ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆದದ್ದು ವಿಚಿತ್ರವಾದರೂ ಸತ್ಯವೆನ್ನುವಂತಿದೆ.

ನ್ಯಾಯಾಲಯದ ಆದೇಶಕ್ಕೂ ಕವಡೆ ಕಿಮ್ಮತ್ತಿಲ್ಲ!

ಬಂಡೀಮಠಕ್ಕೆ ಕಾರ್ಕಳ ಬಸ್ ನಿಲ್ದಾಣ ಸ್ಥಳಾಂತರ ಮಾಡಬೇಕೆಂಬ ಬೇಡಿಕೆ ಯೊಂದಿಗೆ ಪ್ರಕರಣ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತು.

ಬಂಡೀಮಠ ಬಸ್ ನಿಲ್ದಾಣವನ್ನು ಬಳಸುವಂತೆ ಆದೇಶವೂ ಹೊರಬಿತ್ತು. ಆದರೆ ನ್ಯಾಯಾಲಯಕ್ಕೆ ಹಳೆ ಬಸ್ ನಿಲ್ದಾಣದ ಅಸಮರ್ಪಕತೆ, ಅವ್ಯವಸ್ಥೆ ಯನ್ನು ಪುರಸಭೆ ಮನದಟ್ಟು ಮಾಡಲು ವಿಫಲವಾದ ಕಾರಣ ಈಗಿರುವ ಬಸ್ ನಿಲ್ದಾಣ ಮತ್ತು ಬಂಡೀಮಠ ಬಸ್ ನಿಲ್ದಾಣವನ್ನು ಸಮಾನ ವಾಗಿ ಉಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿತ್ತು. ಇದನ್ನೇ ಅಸ್ತ್ರವಾಗಿ ಬಳಸಿದ ಜನಪ್ರತಿ ನಿಧಿಗಳು ಕಾರ್ಕಳ ಬಸ್ ನಿಲ್ದಾಣ ಬಂಡೀಮಠಕ್ಕೆ ಸ್ಥಳಾತರವಾಗದಂತೆ ಪುರಸಭೆಯ ಮೇಲೆ ನಿರಂತರ ಒತ್ತಡ ಹೇರಿದರು. ಪರಿಣಾಮ ಕೊನೆಗೂ ನೂತನ ಬಸ್ ನಿಲ್ದಾಣ ಅನಾಥವಾಗಿ ಉಳಿದಂತಾಗಿದೆ.

ಬಸ್ ನಿಲ್ದಾಣದ ಕೊರತೆ

ತಾಲೂಕಿನ ಕೇಂದ್ರಸ್ಥಾನ ಕಾರ್ಕಳದಲ್ಲಿ ಸುಸಜ್ಜಿತ ಮತ್ತು ವ್ಯವಸ್ಥಿತ ಬಸ್ ನಿಲ್ದಾಣ ಇಲ್ಲವೆಂದರೆ ಯಾರಿಗಾದರೂ ಅಚ್ಚರಿ ಎನಿಸದಿರದು. ಕಾರ್ಕಳ ಪುರಸಭೆಗೆ 40 ವರ್ಷಗಳ ಇತಿಹಾಸವಿದ್ದು, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಸಾಧ್ಯವಾಗಿಲ್ಲ ಎಂದ ಮೇಲೆ ಇಲ್ಲಿ ಏನಿದ್ದರೂ ಪ್ರಯೋಜನವೇನು ಎಂದು ಪ್ರಶ್ನಿಸುತ್ತಾರೆ ಇಲ್ಲಿಗಾಗಮಿಸುವ ಪ್ರವಾಸಿಗರು.

ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ!
ರಸ್ತೆ ಇಕ್ಕೆಲದಲ್ಲಿ ಅಶಕ್ತರು, ಬಡವರು, ಅಲ್ಪಸ್ವಲ್ಪ ಜಮೀನು ಹೊಂದಿದ ನಾಗರಿಕರ ಕಟ್ಟಡಗಳನ್ನು, ವ್ಯಾಪಾರ ಮಳಿಗೆಗಳನ್ನು ಅನಿವಾರ್ಯವಾಗಿ ಪುರಸಭೆಗೆ ಬಿಟ್ಟುಕೊಟ್ಟವರು ಕೋಡಂಗಿಗಳಾಗಿ ಬಿಟ್ಟರು. ಶ್ರೀಮಂತರು, ಪ್ರಭಾವಿಗಳು ತಮ್ಮ ಸ್ಥಳಗಳನ್ನು ತೆರವುಗೊಳಿಸಿ ಮತ್ತೆ ಅದೇ ಸ್ಥಳ ಬಳಸಿ ಹೊಸ ಕಟ್ಟಡಗಳನ್ನು ನಿರ್ಮಿಸಿಕೊಂಡರು.

Writer - ಮುಹಮ್ಮದ್ ಶರೀಫ್, ಕಾರ್ಕಳ

contributor

Editor - ಮುಹಮ್ಮದ್ ಶರೀಫ್, ಕಾರ್ಕಳ

contributor

Similar News