ತಲೆಮಾರುಗಳಿಂದ ಮೂಲಸೌಲಭ್ಯ ವಂಚಿತ ಮೂಲನಿವಾಸಿಗಳು

Update: 2016-01-31 18:34 GMT

ರಾಷ್ಟ್ರೀಯ ಉದ್ಯಾನವನದಲ್ಲಿ ಸಂಕಷ್ಟ ಅನುಭವಿಸುತ್ತಿವೆ 10 ಮಲೆಕುಡಿಯ ಕುಟುಂಬಗಳು
ಬೆಳ್ತಂಗಡಿ, ಜ.31: ತಾಲೂಕಿನ ಸವಣಾಲು ಗ್ರಾಮದ ಇತ್ತಿಲ, ಪೇಲ ಪ್ರದೇಶಗಳಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗೆ ಕಳೆದ ಮೂರು ತಲೆಮಾ ರುಗಳಿಂದ ವಾಸಿಸುತ್ತಿರುವ 10 ಮಲೆ ಕುಡಿಯ ಕುಟುಂಬಗಳು ಕಂದಾಯ ಭೂಮಿ ಯಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿವೆ. ಆದರೆ ಅರಣ್ಯದ ನಡುವೆ ಇವರ ವಾಸ ಸ್ಥಳವಿದ್ದು, ಅರಣ್ಯ ಕಾಯ್ದೆಯಿಂದಾಗಿ ರಸ್ತೆ, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯ ಗಳಿಂದ ಸದಾ ವಂಚಿತರಾಗುತ್ತಿದ್ದಾರೆ. ಜನ ಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ಗಳನ್ನು ಮಾತ್ರ ನೀಡುತ್ತಿದ್ದಾರೆ ಹೊರತು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮುಂದಾಗುತ್ತಿಲ್ಲ. ಅಭಿವೃದ್ಧಿ ಇಲ್ಲಿನ ಜನರ ಪಾಲಿಗೆ ಮರೀಚಿಕೆಯೇ ಆಗಿದೆ. ಸ್ವಾತಂತ್ರ್ಯಪೂರ್ವದಿಂದಲೇ ದಟ್ಟ ಕಾಡಿನ ನಡುವೆ ಈ ಕುಟುಂಬಗಳು ಯಾವುದೇ ಮೂಲಸೌಲಭ್ಯಗಳಿಲ್ಲದೆ, ಕಾಡುಪ್ರಾಣಿಗಳ ಭಯ, ಸಾಂಕ್ರಾಮಿಕ ರೋಗಗಳ ಆತಂಕದ ನಡುವೆಯೂ ನೆಮ್ಮದಿಯ ಬದುಕು ನಡೆಸು
ತ್ತಿವೆ. ಸ್ವಾತಂತ್ರ ದೊರೆತು ಆರು ದಶಕಗಳು ಕಳೆದರೂ ಇನ್ನೂ ಆ ಬದುಕಿನಿಂದ ಅವರಿಗೆ ಮುಕ್ತಿ ದೊರೆತಿಲ್ಲ ಎಂಬುದು ವಿಪರ್ಯಾಸ. ತಾಲೂಕು ಕೇಂದ್ರವಾದ ಬೆಳ್ತಂಗಡಿ ಯಿಂದ 7 ಕಿ.ಮೀ. ದೂರವಿರುವ ಸವಣಾಲುವಿನಿಂದ 7 ಕಿ.ಮೀ. ಅಂತರದಲ್ಲಿ ದಟ್ಟ ಕಾಡುಗಳ ಮಧ್ಯೆ ಇತ್ತಿಲ ಪೇಲ ಪ್ರದೇಶ ವಿದೆ. ಸುಮಾರು 4 ಕಿ.ಮೀ. ರಸ್ತೆ ಕಾಡಿನ ನಡುವಿನಲ್ಲಿ ಹಾದುಹೋಗುತ್ತಿದ್ದು, ಇಲ್ಲಿಗೆ ನಡೆದುಕೊಂಡೇ ಹೋಗಬೇಕಾಗಿದೆ.
ಅರಣ್ಯದ ನಡುವೆ ಜೀವನ ನಡೆಸುತ್ತಿರುವ ಇಲ್ಲಿನ ನಿವಾಸಿಗಳು ತಮ್ಮ ಅಗತ್ಯಕ್ಕಾಗಿ ಮರಗಿಡಗಳಿಗೆ ತೊಂದರೆಯಾಗದಂತೆ ತಾತ್ಕಾಲಿಕ ಕಚ್ಚಾ ರಸ್ತೆಯನ್ನು ನಿರ್ಮಿಸಿ ದ್ದಾರೆ. ಇದು ಕಾಲ್ನಡಿಗೆಗೆ ಮಾತ್ರ ಸೀಮಿತ ವಾಗಿದೆ. ರಾಷ್ಟ್ರೀಯ ಉದ್ಯಾನವನ ಘೋಷಣೆಯಾ ಗುವುದಕ್ಕಿಂತ ಮೊದಲು ಜನರು ಇಲ್ಲಿ ಜೀಪ್‌ನಂತಹ ವಾಹನಗಳ ಸಂಚಾರಕ್ಕೆ ಯೋಗ್ಯವಾದ ರಸ್ತೆ ನಿರ್ಮಿಸಿದ್ದರು. ಆದರೆ ಇದರ ದುರಸ್ತಿಗೂ ಇದೀಗ ಅವಕಾಶ ಇಲ್ಲ ವಾಗಿದೆ. ಇಲ್ಲಿ ಕೆಲವರಲ್ಲಿ ದ್ವಿಚಕ್ರ ವಾಹನ ಗಳಿದ್ದು, ಅದು ಸಂಚರಿಸುವಷ್ಟು ಇಲ್ಲಿನ ಜನರು ಶ್ರಮದಾನದ ಮೂಲಕ ಕಲ್ಲು ಬಂಡೆಗಳ ಮಧ್ಯೆ ಮಣ್ಣುತುಂಬಿ ರಸ್ತೆ ಮಾಡಿ ದ್ದಾರೆ. ಆದರೆ ಇದು ಬೇಸಿಗೆ ಕಾಲಕ್ಕೆ ಮಾತ್ರ. ಮಳೆಗಾಲದಲ್ಲಿ ಈ ಕಚ್ಚಾ ರಸ್ತೆಯ ಮಧ್ಯೆ ದೊಡ್ಡ ತೊರೆಯೊಂದು ಹರಿಯುತ್ತಿದ್ದು, ಮಳೆಗಾಲದಲ್ಲಿ ಇದನ್ನು ದಾಟುವುದು ಅಸಾಧ್ಯ. ಅಲ್ಲದೆ, ಬಹುತೇಕ ಕಡೆಗಳಲ್ಲಿ ರಸ್ತೆ ನೀರಿನಿಂದ ಕೊಚ್ಚಿ ಹೋಗುತ್ತವೆ. ಈ ಅವಧಿಯಲ್ಲಿ ತಮ್ಮ ದ್ವಿಚಕ್ರವಾಹನಗಳನ್ನು ಸಮೀಪದ ಸವಣಾಲುವಿನಲ್ಲಿ ಪರಿಚಯಸ್ಥರ ಮನೆಯಲ್ಲಿ ಇಡುವ ಸಂಕಷ್ಟ ಪ್ರತಿ ವರ್ಷ ದ್ದಾಗಿದೆ. ಮಳೆಗಾಲದ ಆರು ತಿಂಗಳು ಇವರಿಗೆ ಕಾಲ್ನಡಿಗೆಯೇ ಗತಿಯಾಗಿದೆ. ಇದಕ್ಕಾಗಿ ರಸ್ತೆ ಮಧ್ಯೆಯಿರುವ ತೊರೆಗೆ ತಾತ್ಕಾಲಿಕವಾಗಿ ಮರದ ಸೇತುವೆಯನ್ನು ಇಲ್ಲಿನ ಜನರೇ ನಿರ್ಮಿಸಿದ್ದಾರೆ. ಇಲ್ಲಿ ಶಾಶ್ವತ ಸೇತುವೆ ನಿರ್ಮಿಸುವಂತೆ ಕಳೆದ 30 ವರ್ಷಗಳಿಂದ ಜನಪ್ರತಿ ನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದಾರೆ. ಆದರೆ ಈ ಬೇಡಿಕೆ ಇನ್ನೂ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಸೇತುವೆಗೆ ಯಾರಾದರೂ ಅನುದಾನ ಒದಗಿಸಿದರೂ ಅದಕ್ಕೆ ಅರಣ್ಯ ಇಲಾಖೆಯ ಅನುಮತಿ ಸಿಗುವುದಂತೂ ದೂರದ ಮಾತು.
ಈ ಪ್ರದೇಶಗಳನ್ನು ನಕ್ಸಲ್‌ಪೀಡಿತ ಎಂದು ಘೋಷಿಸಿದ್ದರೂ ಇದುವರೆಗೆ ಸೋಲಾರ್ ದೀಪಗಳನ್ನು ಮಾತ್ರ ಇಲ್ಲಿಗೆ ನೀಡಲಾಗಿದೆ. ಅದು ಬಿಟ್ಟರೆ ಇನ್ನಿತರ ಯಾವುದೇ ಸೌಲ ಭ್ಯವು ಇಲ್ಲಿನ ನಿವಾಸಿಗಳಿಗೆ ದೊರೆತಿಲ್ಲ. ನಕ್ಸಲ್‌ಪೀಡಿತ ಪ್ರದೇಶದ ಅಭಿವೃದ್ಧಿಗೆಂದು ಬರುವ ಅನುದಾನದಲ್ಲಿ ಅರಣ್ಯದ ಹೊರಗೆ ಕಾಮಗಾರಿಗಳು ನಡೆಯುತ್ತಿವೆ. ಮೂಲ ನಿವಾಸಿಗಳು ವಾಸಿಸುತ್ತಿರುವ ಪ್ರದೇಶಗಳಿಗೆ ಅಭಿವೃದ್ಧಿ ಚಟುವಟಿಕೆಗಳು ಇನ್ನೂ ತಲುಪಿಲ್ಲ. ಕಾಡಿನ ನಡುವಿನ ಇವರ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದು, ಇರುವ ರಸ್ತೆಯನ್ನು ಒಂದಿಷ್ಟು ದುರಸ್ತಿಪಡಿ ಸುವುದು, ಹಾಗೂ ತೊರೆಗೆ ಅಡ್ಡಲಾಗಿ ಒಂದು ಸೇತುವೆ ಇಲ್ಲಿನ ಜನರ ಮುಖ್ಯ ಬೇಡಿಕೆಗಳಾಗಿವೆ. ಈ ಬೇಡಿಕೆಗಳ ಈಡೇರಿಕೆಗೆ ಹೆಚ್ಚಿನ ಅರಣ್ಯ ನಾಶದ ಅಗತ್ಯವಿಲ್ಲ. ಅರಣ್ಯ ಕಾಯ್ದೆಯಲ್ಲೂ ಇದಕ್ಕೆ ಅವಕಾಶವಿದೆ. ಆದರೆ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ರಾಜೀವ ಗಾಂಧಿ ವಿದ್ಯುದ್ದೀಕರಣ ಯೋಜನೆ ಯಲ್ಲಿ ಇಲ್ಲಿಗೆ ಮಂಜೂರಾಗಿದ್ದ ವಿದ್ಯುತ್ ಸಂಪರ್ಕ ಸೌಲಭ್ಯವು ಅರಣ್ಯ ಇಲಾಖೆಯ ವಿರೋಧದಿಂದಾಗಿ ರದ್ದಾಗಿದೆ. ಈ ಪ್ರದೇಶವನ್ನು ನಕ್ಸಲ್ ಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿದ್ದು, ಕೋಟಿಗಟ್ಟಲೆ ರೂ. ಅನುದಾನ ಬರುತ್ತಿದೆ ಎಂದು ಕೆಲವು ಸಭೆಗಳಲ್ಲಿ ತಿಳಿಸಿದ್ದಾರೆ. ಆದರೆ ಇದುವರೆಗೆ ಅನುದಾನ ಇಲ್ಲಿ ವಿನಿಯೋಗ ಆಗಿಲ್ಲ. ಒಂದೆರಡು ಕುಟುಂಬಗಳು ತಮ್ಮ ಸ್ವಂತ ಖರ್ಚಿನಿಂದ ವಿದ್ಯುತ್ ಉತ್ಪಾದನಾ ಯಂತ್ರವನ್ನು ಖರೀದಿಸಿ ಪ್ರಕೃತಿದತ್ತವಾದ ನೀರಿನಿಂದ ಮನೆಗೆ ಬೇಕಾದ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗಿಲ್ಲ. ಕಳೆದ 6 ವರ್ಷಗಳ ಹಿಂದೆ ಯಾವುದೋ ಯೋಜನೆಯಲ್ಲಿ ಸೇತುವೆ ನಿರ್ಮಿಸಲು ದೊಡ್ಡ ಸಿಮೆಂಟ್ ಪೈಪ್(ಮೋರಿ)ಗಳನ್ನು ಇಲ್ಲಿ ತಂದು ಹಾಕಲಾಗಿದೆ. ಅದಿನ್ನು ಅಲ್ಲೇ ಅನಾಥವಾಗಿ ಬಿದ್ದುಕೊಂಡಿದ್ದು, ಈವರೆಗೆ ಯಾವುದೇ ಕಾಮಗಾರಿಗಳು ಆಗಿಲ್ಲ. ಇದು ನಮ್ಮನ್ನು ವಂಚಿಸುವ ಪ್ರಯತ್ನ ಎಂದು ಇಲ್ಲಿನ ಜನರು ಆಡಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಚುನಾವಣೆ ಎದುರಾಗಿದೆ. ಜನಪ್ರತಿನಿಧಿಗಳು, ರಾಜಕಾರಣಿಗಳು ಭರವಸೆಗಳ ಮೂಟೆ ಹೊತ್ತು ಇವರಲ್ಲಿಗೆ ಬರಲಿದ್ದಾರೆ. ಆದರೆ ಚುನಾವಣೆ ಮುಗಿದ ಬಳಿಕ ಇವರತ್ತ ಗಮನಿಸುವವರು ಯಾರು ಎಂಬುದು ಮತ್ತೆ ಯಕ್ಷ ಪ್ರಶ್ನೆಯಾಗಿ ಉಳಿಯಲಿದೆ.

ಸೌಲಭ್ಯ ಕೊಡಿ, ಕಾಡುಬಿಟ್ಟು ಹೊರಬರೆವು ನಾವು ಅಜ್ಜ, ಮುತ್ತಾತನ ಕಾಲದಿಂದ ಇಲ್ಲೇ ವಾಸ ಮಾಡುತ್ತಿದ್ದು, ಕಷ್ಟಕರ ವಾದರೂ ಇಲ್ಲಿನ ಬದುಕಿನಲ್ಲಿ ನಮಗೆ ನೆಮ್ಮದಿ ಇದೆ. ಇಲ್ಲಿಂದ ಹೊರ ಬರಲು ನಾವು ಸಿದ್ಧರಿಲ್ಲ. ನಮ್ಮ ಸುತ್ತಲಿನ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡುತ್ತಿದ್ದೇವೆ, ನಾಶ ಮಾಡುತ್ತಿಲ್ಲ. ನಮಗೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿ. ನಮ್ಮನ್ನು ಅರಣ್ಯದಿಂದ ಹೊರಹೋಗಿ ಎಂದು ಒತ್ತಾಯಿಸಬೇಡಿ ಎಂದು ಅಂಗಲಾಚಿಕೊಳ್ಳುತ್ತಿದ್ದಾರೆ ಸವಣಾಲು ಪ್ರದೇಶದ ಜನರು.

ಅನಾರೋಗ್ಯಪೀಡಿತರಾದರೆ ಸಾವೇ ಗತಿ
ಇಲ್ಲಿನ ನಿವಾಸಿಗಳಿಗೆ ಸಣ್ಣಪುಟ್ಟ ಕಾಯಿಲೆ ಬಂದರೆ ಸಮೀಪದ ಬೆಳ್ತಂಗಡಿ ಕೇಂದ್ರ ಪ್ರದೇಶಕ್ಕೆ ಬಂದು ಚಿಕಿತ್ಸೆ ಪಡೆಯಬಹುದು. ಆದರೆ ಮಳೆಗಾಲದಲ್ಲಿ ಅದು ರಾತ್ರಿಹೊತ್ತು ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಸಾವೇ ಗತಿ. ಈ ಹಿಂದೆ ಇದೇ ಪರಿಸರದ ವ್ಯಕ್ತಿಯೊಬ್ಬರು ರಾತ್ರಿ ವೇಳೆ ತೀವ್ರ ಅನಾರೋಗ್ಯಕ್ಕೀಡಾದಾಗ ಅವರನ್ನು ಹೆಗಲಿನಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಅವರು ಕಾಡಿನ ಮಧ್ಯದಲ್ಲಿ ಸಾವನ್ನಪ್ಪಿದ್ದರು. ಆನಂತರ ಹೆಣವನ್ನು ಹೊತ್ತುಕೊಂಡು ಮರಳಿ ಮನೆಗೆ ತೆರಳಬೇಕಾಯಿತು ಎಂದು ಬೇಸರದಿಂದ ವಿವರಿಸುತ್ತಾರೆ ಸ್ಥಳೀಯ ನಿವಾಸಿ ಡೊಂಬಯ್ಯ.

 

Writer - ಶಿಬಿ ಧರ್ಮಸ್ಥಳ

contributor

Editor - ಶಿಬಿ ಧರ್ಮಸ್ಥಳ

contributor

Similar News