ಉಡುಪಿಯನ್ನು ಹರಿವಾಣದಲ್ಲಿಟ್ಟು ಬಿಜೆಪಿಗೆ ನೀಡಿದ ಸೊರಕೆ

Update: 2016-02-24 05:28 GMT

ಉಡುಪಿ, ಫೆ.23: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಎದುರಾಳಿಗಳ ಅಗತ್ಯವಿಲ್ಲ. ಅವರು ತಮ್ಮ ಅವನತಿಯ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಾರೆ. ತಾವೇ ಅದರಲ್ಲಿ ಬೀಳುತ್ತಾರೆ ಎಂಬುದಕ್ಕೆ ಕಳೆದ ಮೂರ್ನಾಲ್ಕು ತಿಂಗಳುಗಳ ವಿದ್ಯಮಾನವೇ ಸಾಕ್ಷಿ. ಅದಕ್ಕೆ ತಕ್ಕ ಪ್ರತಿಫಲವನ್ನು ಇಂದು ಪ್ರಕಟಗೊಂಡ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಡೆದಿದೆ ಎನ್ನಬಹುದು.

ಹೀಗಾಗಿ ಕಾಂಗ್ರೆಸ್‌ನ ಇಂದಿನ ಹೀನಾಯ ಪ್ರದರ್ಶನಕ್ಕೆ ಮರುಕ ಪಡುವವರೇ ಇಲ್ಲವಾಗಿದ್ದಾರೆ. ಇವೆಲ್ಲವೂ ಪಕ್ಷದ ಸ್ವಯಂಕೃತ ಅಪರಾಧ ಎಂಬುದನ್ನು ಅವರ ಪಕ್ಷದ ‘ಕೆಲವು’ ನಾಯಕರು ಒಪ್ಪಿಕೊಳ್ಳುತ್ತಾರೆ. ನಿಂತ ನೀರಾಗಿರುವ, ಹೊಸ ಯೋಚನೆ, ಆಲೋಚನೆ, ಕ್ರಿಯಾಶೀಲ ಯುವ ನಾಯಕತ್ವಕ್ಕೆ ತೆರೆದುಕೊಳ್ಳದ ಪಕ್ಷಕ್ಕೆ ಇಂದಿನ ಕಾಂಗ್ರೆಸ್ ಪಕ್ಷಕ್ಕಾದ ಗತಿಯೇ ಆಗುವುದರಲ್ಲಿ ಸಂಶಯವಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ . ಇದು ಕಾಂಗ್ರೆಸ್‌ಗೆ ಜಿಲ್ಲೆಯ ಜನತೆ ನೀಡಿದ ಎಚ್ಚರಿಕೆಯ ಗಂಟೆ ಎಂದು ಹೇಳುವುದು ತಪ್ಪಾಗುತ್ತದೆ. ಜಿಲ್ಲೆಯ ಜನತೆ ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‌ಗೆ ಹಲವು ಬಾರಿ ಬುದ್ದಿ ಕಲಿಸಿದ್ದಾರೆ. ಆದರೆ ಅದು ಪಕ್ಷದ ದಪ್ಪ ಚರ್ಮದ ನಾಯಕರಿಗೆ ತಟ್ಟುವುದೇ ಇಲ್ಲ. ಹೀಗಾಗಿ ಅದು ಇನ್ನು ಚಿಗುರಿಕೊಳ್ಳುತ್ತದೆ ಎಂದು ಯಾರಾದರೂ ಭಾವಿಸಿದರೆ ಮೂರ್ಖತನವೆಂಬಂತೆ ನಾಯಕರು ನಡೆದುಕೊಳ್ಳುತ್ತಾರೆ.

2010ರ ಜಿಪಂ, ತಾಪಂ ಚುನಾವಣೆಯಲ್ಲಿ ಎಲ್ಲವನ್ನೂ ಬಿಜೆಪಿಗೆ ಒಪ್ಪಿಸಿದಾಗ ಪ್ರತಿಕ್ರಿಯೆ ನೀಡಿದ್ದ ಆಸ್ಕರ್ ಫೆರ್ನಾಂಡೀಸ್, ಇದು ನಮ್ಮ ಅತ್ಯಂತ ಕಳಪೆ ಪ್ರದರ್ಶನ. ಇದಕ್ಕಿಂತ ಕೆಳಕ್ಕಿಳಿಯಲು ಸಾಧ್ಯವಿಲ್ಲ. ಇನ್ನು ಏನಿದ್ದರೂ ನಾವು ಚೇತರಿಸಿಕೊಳ್ಳುವುದು ಮಾತ್ರ ಎಂದಿದ್ದರು. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಜಿಪಂ ಹಾಗೂ ಮೂರು ತಾಪಂಗಳಲ್ಲಿ ಇನ್ನೂ ಕೆಳಕ್ಕಿಳಿದಿರುವ ಉಡುಪಿ ಕಾಂಗ್ರೆಸ್, ತನಗೆ ಮೇಲಕ್ಕೇರುವ ದಾರಿಯೇ ಮರೆತಿರುವುದನ್ನು ತೋರಿಸಿಕೊಟ್ಟಿದೆ.

  ಕಳೆದ ಬಾರಿ ಚುನಾವಣೆ ನಡೆದಾಗ ರಾಜ್ಯದಲ್ಲಿ ಬಿಜೆಪಿಯ ಆಡಳಿತವಿತ್ತು. ಹೀಗಾಗಿ ಬಿಜೆಪಿಯ ಸಾಧನೆಯ ಬಗ್ಗೆ ಕೆಲವು ಸಂಶಯಗಳು ಉಳಿದಿತ್ತು. ಆದರೆ ಈ ಬಾರಿ ರಾಜ್ಯದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಆದರೂ ಜಿಲ್ಲೆಯ ಕಾಂಗ್ರೆಸ್‌ಗೆ ಇದು ಯಾವುದೇ ರೀತಿಯಲ್ಲೂ ತನ್ನ ಸಾಧನೆಯನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಗಿಲ್ಲ. ಬದಲು ಅದರ ಸಾಧನೆ ಇನ್ನಷ್ಟು ಕೆಳಮುಖವಾಗಿ ಚಲಿಸಿದೆ. ಅದರಲ್ಲೂ ಕಾರ್ಕಳದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಧೂಳೀಪಟಗೊಳ್ಳುವ ಸೂಚನೆ ಸಿಕ್ಕಿದೆ.

ಇದಕ್ಕೆಲ್ಲ ಕಾರಣಗಳನ್ನು ಹುಡುಕಲು ಕಷ್ಟವಿಲ್ಲ. ಸಿದ್ದರಾಮಯ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯಲು ಕಾಂಗ್ರೆಸ್ ಜಿಲ್ಲಾ ನಾಯಕರು ವಿಫಲರಾದರು. ಮಾತ್ರವಲ್ಲ, ನಾವು ನಿಮ್ಮೆಂದಿಗೆ ಇದ್ದೇವೆ ಎಂಬ ಭಾವನೆಯನ್ನು ಪಕ್ಷದ ಕಾರ್ಯಕರ್ತರಲ್ಲಿ ಮೂಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮೂವರು ಶಾಸಕರು ಹಾಗೂ ಹಿರಿಯ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ.

ತಮ್ಮ ಸರಕಾರದ ಸಣ್ಣಪುಟ್ಟ ಹುಳುಕು, ತಪ್ಪು ನಡೆ, ಹೇಳಿಕೆಗಳನ್ನೇ ಹಿಡಿದುಕೊಂಡು ಜನರ ಬಳಿಗೆ ಹೋದ ಬಿಜೆಪಿ ಕಾರ್ಯಕರ್ತರ ನಡೆಗೆ ಎದಿರೇಟು ನೀಡುವಲ್ಲಿ ಸಹ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ವೈಫಲ್ಯ ಕಂಡಿದೆ.

ಹೆಗ್ಡೆ ನೀಡಿದ ಬರೆ: ಇವೆಲ್ಲಕ್ಕಿಂತಲೂ ಕಾಂಗ್ರೆಸ್‌ಗೆ ಹೆಚ್ಚು ಪೆಟ್ಟು ನೀಡಿರುವುದು ಮೊನ್ನೆ ಮೊನ್ನೆಯವರೆಗೆ  ಾಂಗ್ರೆಸ್‌ನ ‘ಮಾಸ್ ಲೀಡರ್’ ಎಂದೇ ಕರೆಸಿಕೊಂಡ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರ ಉಚ್ಚಾಟನೆ. ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದನ್ನೇ ದೊಡ್ಡ ವಿಷಯವನ್ನಾಗಿ ಬೆಳೆಸಿ, ಅದೇ ನೆಪದಲ್ಲಿ ಅವರನ್ನು ಉಚ್ಚಾಟಿಸಿದ್ದ ಪರಿಣಾಮ ಈ ಬಾರಿಯ ಜಿಪಂ, ತಾಪಂ ಚುನಾವಣೆಯಲ್ಲಿ ಢಾಳಾಗಿ ಕಾಣಿಸಿಕೊಂಡಿದೆ.

ಪಕ್ಷದ ಜಿಲ್ಲಾ ಪ್ರಮುಖರು ಇಡೀ ಹೆಗ್ಡೆ ಪ್ರಕರಣವನ್ನು ಅತ್ಯಂತ ಅಪ್ರಬುದ್ಧತೆಯಿಂದ ನಿಭಾಯಿಸಿದರು. ಅವರನ್ನು ಉಚ್ಚಾಟಿಸುವುದರಿಂದ ಆಗಬಹುದಾದ ಪರಿಣಾಮಗಳ ಕುರಿತು ಯಾವುದೇ ಮುಂದಾಲೋಚನೆಯನ್ನೂ ಮಾಡಲಿಲ್ಲ. ಇದರ ಪರಿಣಾಮ ಇಂದು ಉಡುಪಿ ವಿಧಾನಸಭಾ ಕ್ಷೇತ್ರ ಹಾಗೂ ಕುಂದಾಪುರ ಕೆಲವು ಕ್ಷೇತ್ರಗಳು ಖಾಯಂ ಆಗಿ ಕಾಂಗ್ರೆಸ್ ಕೈತಪ್ಪುವ ಸೂಚನೆ ಇದೆ.

ಇಷ್ಟು ವರ್ಷಗಳಲ್ಲಿ ಮೊದಲ ಬಾರಿ ಬ್ರಹ್ಮಾವರ ಜಿಪಂ, ಬ್ರಹ್ಮಾವರ ವಲಯದ ತಾಪಂ ಕ್ಷೇತ್ರಗಳು ಕಾಂಗ್ರೆಸ್ ಕೈಬಿಟ್ಟಿವೆ. ಕಾಂಗ್ರೆಸ್ ಸುಲಭವಾಗಿ ಗೆಲ್ಲಬೇಕಾಗಿದ್ದ ಕ್ಷೇತ್ರಗಳೂ ಅದರ ಕೈಬಿಟ್ಟಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಆರು ಸೀಟುಗಳಲ್ಲಿ ಎರಡನ್ನು ಮಾತ್ರ ಉಳಿಸಿಕೊಂಡ ಕಾಂಗ್ರೆಸ್, ಉಡುಪಿಯಲ್ಲೂ ಕೇವಲ ಎರಡನ್ನು ಮಾತ್ರ ಗೆದ್ದಿದೆ. ಕಾಪುವಿನಲ್ಲಿ ಅದಕ್ಕೆ ಸಿಕ್ಕಿರುವುದು ಎರಡು ಸೀಟುಗಳು ಮಾತ್ರ. ಇನ್ನು ಕುಂದಾಪುರ ಮತ್ತು ಕಾರ್ಕಳಗಳಲ್ಲಿ ಅದು ತನ್ನ ಖಾತೆಯನ್ನೇ ತೆರೆದಿಲ್ಲ.

ಪರಿಣಾಮ ಬೀರಿದ ಸಚಿವರ ಹೇಳಿಕೆ: ಇನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಅಲ್ಪಸಂಖ್ಯಾತರ ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ಕುರಿತು ಆಡಿದರನ್ನಲಾದ ಮಾತುಗಳು ಸಹ ಕಾಂಗ್ರೆಸ್‌ಗೆ ಪ್ರತಿಕೂಲ ಪರಿಣಾಮ ಬೀರಿದವು. ಮುಸ್ಲಿಮ್ ಸಮುದಾಯಕ್ಕೆ ಒಂದೇ ಒಂದು ಟಿಕೇಟ್ ನೀಡದಿರುವುದು ಕಾಂಗ್ರೆಸ್‌ಗೆ ಅತ್ಯಂತ ದುಬಾರಿಯಾಗಿದೆ. ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಬೆಳೆಸುವಲ್ಲಿ ಅವರ ಸಂಪೂರ್ಣ ವೈಫಲ್ಯ, ಜಿಲ್ಲಾ ಕಾಂಗ್ರೆಸ್‌ನ ಹೈಕಮಾಂಡ್ ಆಸ್ಕರ್ ಫೆರ್ನಾಂಡಿಸ್ ಅವರ ಮೂಗಿನ ನೇರದ ತೀರ್ಮಾನಗಳು ಎಲ್ಲವೂ ಒಂದಕ್ಕೊಂದು ಸೇರಿಕೊಂಡು ಈ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ನೆಲಕ್ಕಚ್ಚಿಸಿವೆ.

  ಹಿರಿಯಡ್ಕ ಮತ್ತು ಶಿರ್ವ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದೆಲ್ಲವೂ ಕಾಂಗ್ರೆಸ್ ಕೈತಪ್ಪಿವೆ. ಹಿರಿಯಡ್ಕದಲ್ಲಿ ಬಿಜೆಪಿಯಲ್ಲಿದ್ದ ಒಡಕು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದರೆ, ಶಿರ್ವದಲ್ಲಿ ಅಲ್ಪಸಂಖ್ಯಾತ ಮತದಾರರು ಕ್ರೈಸ್ತ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ, ಯಾವುದೇ ಪ್ರತಿಷ್ಠೆಯನ್ನು ಪ್ರದರ್ಶಿಸದೇ ಗೆಲ್ಲುವ ಗುರಿಯೊಂದಿಗೆ ಸ್ಪರ್ಧೆಗಿಳಿದು ಅದಕ್ಕೆ ತಕ್ಕ ಪ್ರತಿಫಲ ಪಡೆದಿದೆ. ಕುಂದಾಪುರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೆದುರು ಮಂಡಿಯೂರಿ ಅವರೆಲ್ಲ ಬೇಡಿಕೆಗಳನ್ನು ಈಡೇರಿಸಿ, ತನ್ನ ಕಾರ್ಯಕರ್ತರ ಸಿಟ್ಟಿಗೆ ಕಾರಣವಾದರೂ, ಅದನ್ನು ಮಾತುಕತೆ, ಒಲೈಕೆ ಮೂಲಕ ಬಗೆಹರಿಸಿ ಕೊಂಡು ಗೆಲುವಿನ ನಗು ಬೀರಿದೆ.

ಆದರೆ ಕಾಂಗ್ರೆಸ್, ಹೆಗ್ಡೆ ಅವರ ಬೆಂಬಲಿಗರು ಪ್ರತಿದಿನವೆಂಬಂತೆ ರಾಜಿನಾಮೆ ನೀಡುತಿದ್ದರೂ, ಅದನ್ನು ತಡೆಯಲು ಯಾವುದೇ ಪ್ರಯತ್ನಕ್ಕೆ ಮುಂದಾಗದೇ, ತನ್ನದೇ ಆದ ಲೋಕದಲ್ಲಿ ವಿಹರಿಸಿದರೂ, ಈಗ ಜನರು ಪಕ್ಷಕ್ಕೆ ಒಳ್ಳೆಯ ಪಾಠವನ್ನು ಕಲಿಸಿದ್ದಾರೆ. ಆದರೆ ಇದರಿಂದ ಪಾಠ ಕಲಿತು ಪಕ್ಷದ ಪುನರುಜ್ಜೀವನಕ್ಕೆ ಮುಂದಾಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ.

Writer - ಬಿ.ಬಿ.ಶೆಟ್ಟಿಗಾರ್

contributor

Editor - ಬಿ.ಬಿ.ಶೆಟ್ಟಿಗಾರ್

contributor

Similar News