ಕನಸಾಗಿಯೇ ಉಳಿದ ಸಜಿಪನಡು-ತುಂಬೆ ತೂಗುಸೇತುವೆ

Update: 2016-03-03 18:46 GMT

ಬಂಟ್ವಾಳ, ಮಾ.3: ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯ ಹರಿವಿನಿಂದ ಪ್ರತ್ಯೇಕಿಸಲ್ಪಟ್ಟ ತುಂಬೆ ಮತ್ತು ಸಜಿಪನಡು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಬಹುಕಾಲದ ಕನಸಾಗಿರುವ ‘ತೂಗು ಸೇತುವೆ’ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಬಂಟ್ವಾಳ ತಾಲೂಕಿನ ತುಂಬೆ, ಪುದು, ಕಳ್ಳಿಗೆ ಗ್ರಾಮಗಳು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿದ್ದರೆ ಇಲ್ಲಿ ಹರಿಯುವ ನೇತ್ರಾವತಿ ನದಿಯು ಸಜಿಪನಡು, ಸಜಿಪಪಡು, ಸಜಿಪಮೂಡ, ಸಜಿಪಮುನ್ನೂರು ಗ್ರಾಮಗಳನ್ನು ಪ್ರತ್ಯೇಕಿಸಿದೆ. ಇಲ್ಲಿನ ನಾಗರಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಬಿ.ಸಿ.ರೋಡ್, ಫರಂಗಿಪೇಟೆ, ಮಂಗಳೂರು ನಗರಕ್ಕೆ ತೆರಳಬೇಕಾದರೆ ಸುತ್ತು ಬಳಸಿ ಸಾಗಬೇಕಾದ ಅನಿವಾರ್ಯತೆ ಇದೆ. ಬಸ್, ಆಟೊ ಎಂದು ಎರಡು ಪಟ್ಟು ಖರ್ಚು ಮಾಡಬೇಕಾಗಿದೆ. ಇಲ್ಲಿ ಸಜಿಪನಡು-ತುಂಬೆ ಕಡವಿಗೆ ‘ತೂಗು ಸೇತುವೆ’ ನಿರ್ಮಾಣವಾದರೆ ಇಲ್ಲಿನ ಜನರ ನಗರ ಸಂಚಾರದ ಅರ್ಧದಷ್ಟು ಸಮಸ್ಯೆ ಪರಿಹಾರವಾಗಲಿದೆ. ತೂಗುಸೇತುವೆಗೆ ಇಲ್ಲಿನ ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇನ್ನು ಅದು ಈಡೇರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ‘ತೂಗುಸೇತುವೆ’ ನಿರ್ಮಾಣದಿಂದ ಸಜಿಪನಡು, ಪಡು, ಮೂಡಾ, ಮುನ್ನೂರು ಗ್ರಾಮಗಳ ನಾಗರಿಕರಿಗೆ ಮಾತ್ರವಲ್ಲದೆ ತುಂಬೆ, ಪುದು, ಕಳ್ಳಿಗೆ ಗ್ರಾಮಗಳ ಸುತ್ತಮುತ್ತಲಿನ ಜನರಿಗೂ ಕೂಡ ಅನುಕೂಲವಾಗಲಿದೆ. ಮುಡಿಪು, ದೇರಳಕಟ್ಟೆ ಪ್ರದೇಶಗಳಿಗೆ ಪಂಪ್‌ವೆಲ್-ತೊಕ್ಕೊಟು ಮಾರ್ಗವಾಗಿ 35 ಕಿ.ಮೀ.ನಷ್ಟು ಸುತ್ತುಬಳಸಿ ಪ್ರಯಾಣಿಸುವುದರ ಬದಲು ಸಜಿಪ ಮಾರ್ಗವಾಗಿ ಬರೇ 18 ಕಿ.ಮೀ. ಕ್ರಮಿಸಿ ತಲುಪಬಹುದಾಗಿದೆ. ಅದೇರೀತಿ ತುಂಬೆ, ಪುದು ಹಾಗೂ ಸುತ್ತಮುತ್ತಲಿನ ನಾಗರಿಕರು ಸಜಿಪ, ಬೋಳಿಯಾರ್ ಪ್ರದೇಶಗಳಿಗೆ ಬಿ.ಸಿ.ರೋಡ್-ಮೆಲ್ಕಾರ್ ದಾರಿಯಾಗಿ 20 ಕಿ.ಮೀ. ಕ್ರಮಿಸುವ ಬದಲು ತುಂಬೆ ಮೂಲಕ ಬರೀ 3-4 ಕಿ.ಮೀ. ಕ್ರಮಿಸಿದರೆ ಸಾಕಾಗುತ್ತದೆ. ಅಲ್ಲದೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿರುವ ಕೊಣಾಜೆ, ದೇರಳಕಟ್ಟೆಗೂ ತೆರಳಲು ವಿದ್ಯಾರ್ಥಿಗಳಿಗೆ ಈ ತೂಗುಸೇತುವೆ ವರವಾಗಲಿದೆ. ಸಜಿಪನಡು-ತುಂಬೆ, ಪಾವೂರು-ಅಡ್ಯಾರ್ ಕಡವಿಗೆ ತೂಗು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಸ್ಥಳೀಯ ಶಾಸಕರೂ ಆದ ಸಚಿವ ಯು.ಟಿ.ಖಾದರ್‌ರ ಸೂಚನೆಯಂತೆ ತೂಗುಸೇತುವೆ ನಿರ್ಮಾಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಎಂಜಿನಿಯರ್ ಗಿರೀಶ್ ಭಾರದ್ವಾಜ್ ಸರ್ವೇ ನಡೆಸಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಇಲ್ಲಿ ರಸ್ತೆಗಳು ಹಾಗೂ ಸಾಕಷ್ಟು ಬಸ್‌ಗಳ ಸೌಕರ್ಯ ಇರುವ ಸಜಿಪನಡು-ತುಂಬೆ ನಡುವೆ ತೂಗುಸೇತುವೆ ನಿರ್ಮಾಣ ಪ್ರಸ್ತಾವವನ್ನು ಪ್ರಾಧಿಕಾರ ತಿರಸ್ಕರಿಸಿದೆ. ಬಹುವರ್ಷಗಳ ತಮ್ಮ ಬೇಡಿಕೆಗೆ ತಣ್ಣೀರೆರಚಿದ ಪ್ರಾಧಿಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಹುಪಯೋಗಿ ತೂಗುಸೇತುವೆ ನಿರ್ಮಾಣಕ್ಕೆ ಇಲ್ಲಿನ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಇದೇವೇಳೆ ಪಾವೂರು- ಅಡ್ಯಾರ್ ತೂಗು ಸೇತುವೆ ನಿರ್ಮಾಣ ಪ್ರಸ್ತಾಪ ವನ್ನು ಪುರಸ್ಕರಿಸಿದ್ದು, ಇದಕ್ಕಾಗಿ 1.50 ಕೋ.ರೂ. ಅನುದಾನವನ್ನು ಕಾಯ್ದಿರಿಸಿದೆ.
 ಸಜಿಪನಡು, ಪಡು, ಮೂಡ, ಮುನ್ನೂರು ಗ್ರಾಮಸ್ಥರು ಮಂಗಳೂರಿಗೆ ಆಗಮಿಸಲು ಮುಡಿಪು- ದೇರಳಕಟ್ಟೆ ಮಾರ್ಗವಾಗಿ 35 ಕಿ.ಮೀ. ಕ್ರಮಿಸಬೇಕಿದೆ. ಇನ್ನು ಮೆಲ್ಕಾರ್ ಮಾರ್ಗವಾಗಿ ಬಿ.ಸಿ.ರೋಡ್‌ಗೆ 12 ಕಿ.ಮೀ. ಹಾಗೂ ಫರಂಗಿಪೇಟೆಗೆ 20 ಕಿ.ಮೀ. ಸಂಚರಿಸಬೇಕಿದೆ. ಸಜಿಪನಡು-ತುಂಬೆ ಮಧ್ಯೆ ‘ತೂಗುಸೇತುವೆ’ ನಿರ್ಮಾಣವಾದರೆ ತುಂಬೆ ಮೂಲಕ ಮಂಗಳೂರು ತಲುಪಲು 18 ಕಿ.ಮೀ. ಪ್ರಯಾಣ ಸಾಕಾಗಲಿದೆ. ಅಲ್ಲದೆ, ತುಂಬೆ ಮೂಲಕ ಬಿ.ಸಿ.ರೋಡ್‌ಗೆ 5 ಕಿ.ಮೀ., ಫರಂಗಿಪೇಟೆಗೆ ಬರೀ 4 ಕಿ.ಮೀ. ದೂರ ಕ್ರಮಿಸಿದರೆ ಆಯಿತು. ಅಂದರೆ ಅರ್ಧಕ್ಕಿಂತಲೂ ಅಧಿಕ ದಾರಿಯ ಪ್ರಯಾಣವೂ ಕಡಿಮೆಯಾಗಲಿದೆ, ಹಣವೂ ಉಳಿಯಲಿದೆ.
 
ಸಜಿಪನಡು-ತುಂಬೆ ಮತ್ತು ಪಾವೂರು-ಅಡ್ಯಾರ್ ‘ತೂಗು ಸೇತುವೆ’ ನಿರ್ಮಾಣ ನನ್ನ ಕನಸಾಗಿದ್ದು, ಸೇತುವೆ ನಿರ್ಮಾಣಕ್ಕೆ 4ರಿಂದ 5 ಕೋಟಿ ರೂ. ಅಗತ್ಯವಿದೆ. ಈ ಬಗ್ಗೆ ಸರ್ವೇ ನಡೆಸಿ ಸಲ್ಲಿಸಿದ್ದ ಪ್ರಸ್ತಾಪವನ್ನು ಸಜಿಪನಡು ಗ್ರಾಮದಲ್ಲಿ ರಸ್ತೆ ಹಾಗೂ ಬಸ್‌ಗಳ ಸೌಕರ್ಯವಿರುವ ಕಾರಣ ನೀಡಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿದೆ. ಆದರೂ, ಸಜಿಪನಡು ಮತ್ತು ತುಂಬೆ ಗ್ರಾಪಂ ಜೊತೆ ಸೇರಿ, ಸಂಸದ, ಶಾಸಕ, ರಾಜ್ಯಸಭೆ, ಜಿಪಂ, ತಾಪಂ ಹಾಗೂ ವಿವಿಧ ಅನುದಾನಗಳನ್ನು ಬಳಸಿ ‘ತೂಗು ಸೇತುವೆ’ ನಿರ್ಮಿಸಬಹುದಾಗಿದೆ. ಇದಕ್ಕೆ ನನ್ನಿಂದ ಆಗುವ ಎಲ್ಲ ಸಹಕಾರ ನೀಡಲು ಸಿದ್ಧ.
 - ಯು.ಟಿ.ಖಾದರ್, ಆರೋಗ್ಯ ಸಚಿವ

ಸಜಿಪನಡು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಅನುಕೂಲತೆಗಾಗಿ ಇಲ್ಲಿ ‘ತೂಗು ಸೇತುವೆ’ ನಿರ್ಮಾ ಣದ ಅನಿವಾರ್ಯತೆಯ ಬಗ್ಗೆ ಈ ಹಿಂದೆ ಶಾಸಕ ಯು.ಟಿ.ಖಾದರ್ ಹಾಗೂ ಜಿಲ್ಲಾಧಿಕಾರಿಯವರ ಗಮನಸೆಳೆದಿದ್ದೆ. ಶಾಸಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರು. ಇದೀಗ ಸೇತುವೆ ನಿರ್ಮಾಣದ ಪ್ರಸ್ತಾಪ ತಿರಸ್ಕೃತಗೊಂಡಿರುವುದು ಬೇಸರವಾಗಿದೆ. ಮುಂದಿನ ದಿನಗಳಲ್ಲಿ ಸಂಸದರು, ಶಾಸಕರ ಬಳಿಗೆ ನಿಯೋಗ ತೆರಳಿ ‘ತೂಗು ಸೇತುವೆ’ ನಿರ್ಮಾಣಕ್ಕೆ ಮರು ಯತ್ನ ಮಾಡಲಾಗುವುದು. 
- ಮುಹಮ್ಮದ್ ನಾಸಿರ್, ಸಜಿಪನಡು ಗ್ರಾಪಂ ಅಧ್ಯಕ್ಷ ತುಂಬೆ-

ಸಜಿಪನಡು ನೇತ್ರಾವತಿ ನದಿಗೆ ‘ತೂಗು ಸೇತುವೆ’ ನಿರ್ಮಾಣವಾದರೆ ಮಳೆ ಗಾಲದಲ್ಲಿ ದೋಣಿ ಮೂಲಕ ನದಿ ದಾಟುವಾಗ ಈ ಪ್ರದೇಶದಲ್ಲಿ ಸಂಭವಿಸುವ ದುರಂತಗಳಿಗೆ ತಡೆ ಹಾಕ ಬಹುದು. ಸೇತುವೆ ನಿರ್ಮಾಣ ದಿಂದ ಮೆಲ್ಕಾರ್ ಜಂಕ್ಷನ್‌ನಲ್ಲಿ ನಿರಂತರ ವಾಗಿ ಉಂಟಾಗುತ್ತಿರುವ ಟ್ರಾಫಿಕ್ ಜಂಜಾ ಟವೂ ಅಲ್ಪಮಟ್ಟಿಗೆ ನಿವಾರಣೆಯಾಗ ಬಹುದು.
 - ಪ್ರವೀಣ್ ಬಿ., ತುಂಬೆ ಗ್ರಾಪಂ ಉಪಾಧ್ಯಕ್ಷ

Writer - ಎಂ.ಇಮ್ತಿಯಾಝ್ ತುಂಬೆ

contributor

Editor - ಎಂ.ಇಮ್ತಿಯಾಝ್ ತುಂಬೆ

contributor

Similar News