ಕುಂಬಳೆ : ಪಂಚಾಯತು ಆವರಣದಲ್ಲೇ ಕಸದ ರಾಶಿ, ನಿರ್ಲಕ್ಷ್ಯ

Update: 2016-03-12 13:17 GMT

 ಮಂಜೇಶ್ವರ : ನೈರ್ಮಲ್ಯದಂತಹ ಸಾರ್ವಜನಿಕ ನಿರೀಕ್ಷೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸರಕಾರ ಪ್ರತಿವರ್ಷ ಕೋಟಿ ಗಟ್ಟಲೆ ರೂ.ಧನವನ್ನು ವ್ಯಯಿಸುತ್ತಿದ್ದರೂ ಇನ್ನೂ ನಮ್ಮಲ್ಲಿ ಅಂತಹ ಮಾನಸಿಕ ಮನೋಭಾವ ಗಟ್ಟಿಗೊಳ್ಳದಿರುವುದು ಅಸಂಸ್ಕೃತಿಯ ಪ್ರತೀಕ.ತನ್ನ ವ್ಯಾಪ್ತಿಗೆ ಸಂಬಂಧಪಟ್ಟ ಎಲ್ಲಾ ವಾರ್ಡ್‌ಗಳ ಪರಿಸರದವನ್ನು ಅತ್ಯಂತ ಶುಚಿ ಹಾಗೂ ಸ್ವಚ್ಛವಾಗಿರಿಸಬೇಕಾಗಿದ್ದ ಪಂಚಾಯತೇ ತನ್ನೊಡಲಿನಲ್ಲಿ ಕಸದ ರಾಶಿಯನ್ನೇ ತುಂಬಿಕೊಂಡು ಸ್ಥಳೀಯರಿಗೆ ತೊಂದರೆಯನ್ನುಂಟು ಮಾಡುತ್ತಿದೆ.
 ಕುಂಬಳೆ ಗ್ರಾಮ ಪಂಚಾಯತು ಕಛೇರಿ ಆವರಣದಲ್ಲಿ ಕೊಳಚೆ, ಪ್ಲಾಸ್ಟಿಕ್, ತ್ಯಾಜ್ಯಗಳು ತುಂಬಿ ತುಳುಕುತ್ತಿದ್ದು ಸಂಬಂಧಪಟ್ಟವರು ಕ್ಯಾರೇ ಎನ್ನದೆ ಆರಾಮವಾಗಿರುವುದು ಕಂಡು ಬಂದಿದೆ.
 ಪಂಚಾಯತಿನ ಕಟ್ಟಡ ಹಿಂಭಾಗದಲ್ಲಿ ಕಬ್ಬಿನ ತ್ಯಾಜ್ಯ , ದುರ್ನಾತ ಬೀರುವ ಕೊಳಚೆ ವಸ್ತುಗಳು ಅಡ್ಡಾದಿಡ್ಡಿಯಾಗಿ ಬಿದ್ದಿದ್ದು, ಪಾದಚಾರಿಗಳಿಗೆ ಆ ಪ್ರದೇಶದ ಮಾರ್ಗದಿಂದ ತೆರಳಲು ಕಿರಿಕಿರಿಯುಂಟಾಗುತ್ತಿದೆ. ಪೇಟೆಯನ್ನು ಶುಚಿಗೊಳಿಸಬೇಕಾದದ್ದು ಕರ್ತವ್ಯವಾದರೂ ತನ್ನ ಪರಿಸರದಲ್ಲಿಯೇ ಪಂಚಾಯತು ಅಧಿಕೃತರು ಈ ರೀತಿ ಕೊಳಚೆಗಳನ್ನು ತುಂಬಿಸಿಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇಲ್ಲಿ ವ್ಯಾಪಾರಿಗಳು, ಇತರ ಹಲವರು ತ್ಯಾಜ್ಯಗಳನ್ನು ಸುರಿಯುತ್ತಿದ್ದ, ಈವರೆಗೆ ಪಂಚಾಯತು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಈಗಾಗಲೇ ಗ್ರಾಮ ಪಂಚಾಯತ್ ಕಚೇರಿಯ ಹಿಂಭಾಗ ಸಂಪೂರ್ಣ ಪರಿಸರ ತ್ಯಾಜ್ಯ ವಸ್ತುಗಳಿಂದ ಕೂಡಿದ್ದು ಇದು ಮುಂದುವರಿದಲ್ಲಿ ಪಂಚಾಯತು ಸಂಪೂರ್ಣ ಕೊಳಚೆಮಯವಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿ ದಿನ ನಿತ್ಯ ಸಾವಿರಾರು ಮಂದಿ ಓಡಾಟ ನಡೆಸುತ್ತಿದ್ದು, ಇದರಿಂದ ಹೊರ ಸೂಸುವ ದುರ್ವಾಸನೆ, ಕ್ರಿಮಿ ಕೀಟಗಳು ಮಾರಕವಾಗುವ ಭೀತಿ ಎದುರಾಗಿದೆ. ಈಗಾಗಲೇ ಬೇಸಿಗೆಗಾಲದ ರೋಗ ರುಜಿನಗಳು ಕಂಡು ಬರುತ್ತಿದ್ದು, ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿರಿಸುವುದು ಆವಶ್ಯವಾಗಿದೆ. ಪರಿಸರ ಪ್ರದೇಶದಲ್ಲಿ ವಾಸಿಸುವ ನೂರಾರು ಮನೆಗಳ ಪೈಕಿ ಬಹುತೇಕೆಡೆಗಳಲ್ಲಿ ಮೈತುರಿಕೆ ಹಾಗೂ ಇತರ ಎಲರ್ಜಿಗಳು ಕಳೆದ ಕೆಲವು ತಿಂಗಳುಗಳಿಂದ ಗೋಚರಿಸುತ್ತಿದ್ದರೂ ಯಾರೂ ಈ ಬಗ್ಗೆ ಕಠಿಣ ನಿಲುವಳಿಗೆ ಮನಮಾಡಿಲ್ಲ. ಪಂಚಾಯತು ಕಟ್ಟಡದ ಸಮೀಪದಲ್ಲಿ ಪೋಲಿಸ್ ಠಾಣೆಯೂ ಇದ್ದು, ಕೊಳಚೆ ತ್ಯಾಜ್ಯಗಳ ವಾಸನೆಯನ್ನು ಬಳಸಿಕೊಂಡೇ ಹೋಗಬೇಕಾಗಿದೆ. ಅಲ್ಲದೆ ಶೇಡಿಕಾವು ಮೊದಲಾದ ಪ್ರದೇಶಗಳಿಗೆ ಇದರ ಹತ್ತಿರದ ರಸ್ತೆಯನ್ನು ಬಳಸಲಾಗುತ್ತದೆ. ಸರಕಾರಿ ಶಾಲೆಯೂ ಹತ್ತಿರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪಂಚಾಯತು ಇತರರಿಗೆ ಮಾದರಿಯಾದ ಕೆಲಸವನ್ನು ಮಾಡುವುದದನ್ನು ಹೊರತುಪಡಿಸಿ ಕಣ್ಣ ಮುಂದೆಯೇ ಕಸದ ಗುಡ್ಡೆ ಹಾಕಿರುವುದು ಅಸಹ್ಯವನ್ನುಂಟು ಮಾಡುತ್ತಿದೆ.ಸ್ಥಳೀಯರೊಬ್ಬರೆಂದಂತೆ ಹರ ಕೊಲ್ಲಲ್ ಪರ ಕಾಯ್ವನೇ??

Writer - ಆರಿಫ್ ಮಚ್ಚಂಪಾಡಿ

contributor

Editor - ಆರಿಫ್ ಮಚ್ಚಂಪಾಡಿ

contributor

Similar News