ಮಿತಿಯಿಲ್ಲದ ಕೆಲಸಕ್ಕೆಇಲ್ಲತಕ್ಕಸಂಬಳ, ಗೌರವ! ಇದು ಪೊಲೀಸರ ಪಾಡು

Update: 2016-03-17 18:38 GMT

ಕಾರ್ಕಳ, ಮಾ.17: ಪೊಲೀಸ್ ಎಂದರೆ ಪವರ್‌ಫುಲ್ ಕೆಲಸ ಅಂತಾನೇ ಎಲ್ಲರೂ ಅಂದ್ಕೊಂಡಿರೋದು. ನಿಜ ನೋಡಿದರೆ ಅವರಿಗೆ ಪವರ್ರೂ ಇಲ್ಲ, ಶ್ರಮಕ್ಕೆ ಸೂಕ್ತ ಪ್ರತಿಫಲವೂ ಇಲ್ಲ. ಎಲ್ಲರ ರಕ್ಷಣೆಯ ಹೊಣೆ, ನ್ಯಾಯ ಕೊಡಿಸುವ ಜವಾಬ್ದಾರಿ ಅವರ ಮೇಲಿದೆ. ಆದರೆ, ಅವರ ಕಷ್ಟ ಕೇಳೋರು ಮಾತ್ರ ಯಾರೂ ಇಲ್ಲ. ಕಣ್ಣಲ್ಲಿ ಕಣ್ಣಿಟ್ಟು ಕೆಲಸ ಮಾಡುವ ಅವರಿಗೆ ಸಿಗುವ ಸಂಬಳ ಕೂಡ ಜುಜುಬಿ!. ಪೊಲೀಸರ ಹೊಣೆ ಒಂದೆರಡಲ್ಲ. ಸೈನಿಕರ ಹಾಗೆೆ ದಿನದ 24 ಗಂಟೆಯೂ ಡ್ಯೂಟಿಗೆ ಸಿದ್ಧರಿರಬೇಕು. ಕೆಲವೊಂದು ಸಂದರ್ಭಗಳಲ್ಲಿ ಸಮವಸ್ತ್ರ ಬದಲಿಸಲೂ ಸಮಯವಿಲ್ಲ. ಸ್ನಾನ, ವಿಶ್ರಾಂತಿ, ಭದ್ರತೆಯಂತೂ ದೂರದ ಮಾತು. ಪ್ರತಿದಿನ ನಿಗದಿತ ಸೇವೆಯ ಜೊತೆ ಹೆಚ್ಚುವರಿಯಾಗಿ ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮ, ಜಾತ್ರೆ, ಸಂತೆ, ಸಭೆ ಸಮಾರಂಭ ಹೀಗೆ ದಿನವೂ ಒಂದಲ್ಲೊಂದು ಬಂದೋಬಸ್ತ್‌ಗೆ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದ ತಕ್ಷಣ ಹೊರಡಬೇಕಾಗುತ್ತದೆ. ಆದರೆ ಡ್ಯೂಟಿಗೆ ಹಾಕಿದ ಸ್ಥಳಕ್ಕೆ ತೆರಳಲು ಎಷ್ಟು ಬೇಕೋ ಅಷ್ಟು ಭತ್ತೆ ಸಿಗುವುದಿಲ್ಲ. ಹೋದಲ್ಲಿ ಊಟ-ಉಪಾಹಾರಕ್ಕೆ ಗತಿಯೂ ಇಲ್ಲ. ವಾಹನ ಸೌಲಭ್ಯಗಳಂತೂ ಇಲ್ಲ. ಹಾಗಾಗಿ ಯಾರದ್ದೋ ಮರ್ಜಿಗೆ ಅಂಗಲಾಚಬೇಕಾದ ದುಸ್ಥಿತಿ ಪೊಲೀಸರದ್ದು ಎಂದರೆ ತಪ್ಪಾಗಲಾರದು.

ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನವೂ ಒಂದಿಲ್ಲೊಂದು ಕ್ರಿಮಿನಲ್ ಪ್ರಕರಣ ನಡೆಯುವುದು ಮಾಮೂಲು. ಕೃತ್ಯವೆಸಗಿದ ಬಳಿಕ ಆರೋಪಿಗಳು ಪರಾರಿಯಾಗಿರುತ್ತಾರೆ. ಅವರನ್ನು ಪತ್ತೆ ಹಚ್ಚಿ ಕರೆತರುವ ಸಾಹಸ ಅಪಾರ. ಸಿಬ್ಬಂದಿ, ಉಪಕರಣ, ವಾಹನ ಸೌಲಭ್ಯಗಳ ಕೊರತೆಯ ನಡುವೆಯೂ ಪೊಲೀಸ್ ಸಿಬ್ಬಂದಿ ಹೆಚ್ಚುವರಿ ಕೆಲಸದ ಒತ್ತಡವನ್ನೂ ಸಹಿಸಿಕೊಂಡು ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುವುದು ಅನಿವಾರ್ಯ. ಕರ್ತವ್ಯದ ಸಂದರ್ಭ ಎದುರಾಗುವ ಅಪಾಯ, ಸೋಲು, ಪ್ರಾಣಭೀತಿ ಮರೆತು ಕೆಲಸ ನಿರ್ವಹಿಸುತ್ತಾರೆ. ೆಲಸದ ಒತ್ತಡದಿಂದ ಕುಟುಂಬ ವರ್ಗದ ಜೊತೆ ಬೆರೆಯಲಾಗದ ಅಸಹಾಯಕತೆ, ವರ್ಗಾವಣೆಯ ಕಾರಣದಿಂದ ಮಕ್ಕಳ ಶಿಕ್ಷಣಕ್ಕೆ ಗಮನ ಕೊಡಲಾಗದ ದುಸ್ಥಿತಿ, ಜೊತೆಗೆ ಸರಕಾರಿ ಕಟ್ಟಡದಲ್ಲಿದ್ದು, ನಿವೃತ್ತಿಯ ತನಕವೂ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಸರಕಾರಿ ಇಲಾಖೆಗಳ ಕೆಲಸ ಮಾಡಲು ಸಾಧ್ಯವಿಲ್ಲದೆ, ಸ್ವಂತದ ಸೂರು, ಸುಖ ಸಂಸಾರ ಕಟ್ಟಿಕೊಳ್ಳಲಾಗದವರ ಪರಿಸ್ಥಿತಿಯಂತೂ ನಿಜಕ್ಕೂ ದುಃಖದಾಯಕ. ಅಂತಹದೊಂದು ದುಡಿತ ವರ್ಗವನ್ನೇ ಸರಕಾರ ನಿರ್ಲಕ್ಷಿಸುತ್ತಿರುವುದು ವಿಪರ್ಯಾಸ.
<
ಚುನಾವಣೆ ಕರ್ತವ್ಯಕ್ಕೆ ನೀಡುವ ಭತ್ತೆಯಲ್ಲಿ ತಾರತಮ್ಯ: ಆಗಾಗ ನಡೆಯುವ ಚುನಾವಣೆಯ ಭದ್ರತೆಯ ಕೆಲಸದಲ್ಲಿ ತೊಡಗಿದ ಪೊಲೀಸರಿಗೆ ಇತರ ಇಲಾಖೆಯ ಸಿಬ್ಬಂದಿಗೆ ಸಿಗುವ ಭತ್ತೆಯೂ ಸಿಗುತ್ತಿಲ್ಲ. ಆ ದಿನದ ದುಡಿಮೆಯ ಭತ್ತೆಯ ಬಟವಾಡೆಯಲ್ಲೂ ತಾರತಮ್ಯ ಎಸಗಲಾಗುತ್ತದೆ.ುನಾವಣಾ ಕೆಲಸದಲ್ಲಿ ನಿರತರಾದ ಇತರ ಸಿಬ್ಬಂದಿಗೆ ಊಟ ಉಪಾಹಾರದ ಭತ್ತೆ 150 ರೂ. ಸಿಗುತ್ತದೆ. ಬಿಸಿಲಿನಲ್ಲಿ ಕಾಯುವ ಪೊಲೀಸ್ ಸಿಬ್ಬಂದಿಗೆ ಮಾತ್ರ ನೀರಿಗೂ ಗತಿ ಇಲ್ಲ ಎನ್ನುವ ಸ್ಥಿತಿ. ಅಲ್ಲದೆ, ಅಬ್ಸರ್ವರ್ಸ್‌, ಮೈಕ್ರೊ ಅಬ್ಸರ್ವರ್ಸ್‌ಗಳು ಹಾಗೂ ಇನ್ನಿತರ ಸಹಾಯಕರಿಗೆ ಸಂಬಳದ ಜೊತೆಗೆ ಹೆಚ್ಚುವರಿ ವೇತನವನ್ನು ಚುನಾವಣಾ ಆಯೋಗ ತಾವಾಗಿಯೇ ನೀಡುತ್ತದೆ. ಚುನಾವಣಾ ಸಂಬಂಧ ಕೆಲಸ ನಿರ್ವಹಿಸುವ ಕಚೇರಿ ಸಿಬ್ಬಂದಿ, ಅಧಿಕಾರಿಗಳಿಗೂ ಪ್ರತ್ಯೇಕ ಭತ್ತೆಯ ವ್ಯವಸ್ಥೆಯಿದ್ದರೂ, ಪೊಲೀಸರಿಗೆ ಚುನಾವಣಾ ದಿನ ಹಾಗೂ ಮತ ಎಣಿಕೆ ದಿನದ ಭತ್ತೆ ಮಾತ್ರ ಸಿಗುತ್ತದೆ. ಪೋಲಿಂಗ್ ಸ್ಟೇಷನ್ ಹಾಗೂ ಚುನಾವಣಾ ಮತ ಎಣಿಕೆ ಕೇಂದ್ರ ಹಾಗೂ ಮತ ಪೆಟ್ಟಿಗೆಯನ್ನು ಕಾಯುವ ಕೆಲಸಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮಾತ್ರ ವಲ್ಲ, ಯಾವುದೇ ಕಾರಣಕ್ಕೂ ಸ್ಥಳ ಬಿಟ್ಟು ಕದಲಲು ಕೂಡ ಅವಕಾಶವಿರುವುದಿಲ್ಲ. ನಿದ್ರೆಯಂತೂ ಕನಸಿನ ಮಾತು. ಎಲ್ಲ ಕೆಲಸ ಮುಗಿದು ಪ್ರತಿಯೊಬ್ಬರೂ ಹೊರಟು ಹೋದರೂ ತಮ್ಮ ಸರದಿ ಮಾತ್ರ ಕೊನೆಗೆ. ಅದೂ ಕೂಡ ಇತರ ಇಲಾಖೆಗಳು ಎಲ್ಲ ಕೆಲಸ ವನ್ನು ಅಚ್ಚುಕಟ್ಟಾಗಿ ಮುಗಿಸಲಾಗಿದೆಯೋ ಎಂದು ಖಾತ್ರಿಯಾದ ಮೇಲೆ. ಮತ ಎಣಿಕೆ ಕೆಲಸ ನಿರ್ವಹಿಸುವ ಸರಕಾರಿ ಸಿಬ್ಬಂದಿಗೆ ದಿನಕ್ಕೆ 500 ರೂ., ಮೇಲ್ವಿಚಾರಕರಿಗೆ ದಿನಕ್ಕೆ 700 ರೂ. ನೀಡಲಾಗುತ್ತದೆ. ಆದರೆ ಚುನಾವಣೆ ಘೋಷಣೆ ಆರಂಭಗೊಂಡ ದಿನದಿಂದ ಮತ ಎಣಿಕೆ ಮುಗಿಯುವವರೆಗೂ ಬಂದೋಬಸ್ತ್ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ ಪೊಲೀಸ್ ಸಿಬ್ಬಂದಿಗೆ ನಯಾಪೈಸೆ ಭತ್ತೆ ಸಿಗುತ್ತಿಲ್ಲ.

ಅಧಿಕಾರಿಗಳಿಗೆ ಭತ್ತೆ ಎಂಬುದೇ ಇಲ್ಲ: ಚುನಾವಣೆ ಸಂದರ್ಭ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಹೆಚ್ಚುವರಿ ಭತ್ತೆಗಳೇ ಇಲ್ಲ. ಕೇವಲ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಮಾತ್ರ ಅದೂ ಜುಜುಬಿ ಭತ್ತೆಯನ್ನು ನೀಡಿ ಚುನಾವಣಾ ಆಯೋಗ ಕೈ ತೊಳೆದುಕೊಳ್ಳುತ್ತದೆ. ಸಿಬ್ಬಂದಿಯ ಊಟ, ಉಪಾಹಾರ, ಆರೋಗ್ಯ ಓಡಾಟದ ವ್ಯವಸ್ಥೆ, ಹೆಚ್ಚುವರಿ ದುಡಿಮೆಯ ಶ್ರಮಕ್ಕಂತೂ ಬೆಲೆ ಇಲ್ಲ.ಇಲಾಖೆಯ ಕೆಲಸದ ಮೇರೆಗೆ ಇತರ ಜಿಲ್ಲೆಗಳಿಗೆ ತೆರಳಿ ಮರಳಲು ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಬಸ್‌ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯ ಜೊತೆಗೆ ಇಲಾಖೆಯ ಬಸ್ ಸೌಲಭ್ಯವಿಲ್ಲದಿರುವ ಊರುಗಳಲ್ಲಿ ಪೊಲೀಸರು ಪಡುವ ಯಾತನೆ ಬೇಸರ ತರಿಸುತ್ತದೆ. ರಾಜ್ಯ ಸರಕಾರ, ಕೇಂದ್ರ ಸರಕಾರದ ಎಲ್ಲ ಇಲಾಖೆಗಳಲ್ಲೂ ಸಣ್ಣ ಸಣ್ಣ ಸಭೆಗಳಿಗೆ ಹಾಜರಾದರೆ ಸಿಟ್ಟಿಂಗ್ ಭತ್ತೆ, ಪ್ರಯಾಣ ಭತ್ತೆ ಮುಂತಾದ ಸವಲತ್ತುಗಳಿರುತ್ತದೆ. ಆದರೆ ಪೊಲೀಸ್ ಇಲಾಖೆ ಮಾತ್ರ ಇಂತಹ ವ್ಯವಸ್ಥೆಗೆ ಅಪವಾದವಾಗಿ ನಿಂತಿರುವುದು ಅಚ್ಚರಿಯ ಸಂಗತಿ. ರಾಜ್ಯದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ ನೌಕರರು ಬೆಳಗ್ಗೆ 10-11 ಗಂಟೆಗೆ ಡ್ಯೂಟಿಗೆ ಹಾಜರಾಗಿ ಸಂಜೆ 5 ಗಂಟೆಗೆ ಮನೆ ಸೇರುತ್ತಾರೆ. ಆದರೆ ಪೆೊಲೀಸರಿಗೆ ಇಂತಹ ಅವಕಾಶಗಳೇ ಇಲ್ಲ. ಅಲ್ಲದೆ, ರಜೆಯ ವಿಷಯದಲ್ಲೂ ತಾರತಮ್ಯವಿದೆ. ಅನೇಕ ಬಾರಿ ಅಗತ್ಯ ಕೆಲಸಕ್ಕಾಗಿ ಮಂಜೂರಾದ ರಜೆಗಳೇ ರದ್ದಾಗಿ ಸಮವಸ್ತ್ರ ಧರಿಸಿ ಕೆಲಸಕ್ಕೆ ಹಾಜರಾಗಬೇಕಾದ ಅನಿವಾರ್ಯತೆ ಪೊಲೀಸರಿಗೆ ಇದೆ.
 ಒಂದೆಡೆ ಕ್ರಿಮಿನಲ್ ಹಿನ್ನೆಲೆಯ, ಕಳ್ಳರ, ಪುಂಡರ, ವಂಚಕರ, ರೌಡಿಗಳ ಬಂಧನಕ್ಕೆ ಪ್ರಯತ್ನ ನಡೆಸಿದರೆ, ಇನ್ನೊಂದೆಡೆ ಆಸ್ತಿ, ರಸ್ತೆ, ಜಮೀನು, ಹಣಕಾಸು ವ್ಯವಹಾರ ಹೀಗೆ ಹತ್ತು ಹಲವು ತಕರಾರುಗಳ ಸರಮಾಲೆ ಹೊತ್ತು ತರುವವರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ. ಅನ್ಯಾಯವಾದವರಿಗೆ ನ್ಯಾಯ ನೀಡುವ ಹೊಣೆಯೂ ಪೊಲೀಸ್ ಇಲಾಖೆಯ ಮೇಲಿದೆ. ಹೆಚ್ಚಿನ ಸಂದರ್ಭ ಪೊಲೀಸರು ಆರೋಪಿಗಳ ಜೊತೆ ಸೆಣಸುವ ಅನಿವಾರ್ಯತೆ ಎದುರಾಗುತ್ತದೆ. ಆದರೆ ಪೊಲೀಸರ ನೋವು ಮಾತ್ರ ಸಂಬಂಧಪಟ್ಟವರಿಗೆ ಅರ್ಥವಾಗದಿರುವುದು ವಿಪರ್ಯಾಸ.

Writer - ಮುಹಮ್ಮದ್ ಶರೀಫ್, ಕಾರ್ಕಳ

contributor

Editor - ಮುಹಮ್ಮದ್ ಶರೀಫ್, ಕಾರ್ಕಳ

contributor

Similar News